ನ್ಯೂಸ್

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಪರೀಕ್ಷೆ ಅವ್ಯವಹಾರ ತಡೆಗೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು

ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣ ಹೋಲುವ ಮತ್ತೊಂದು ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಿಗಮ-ಮಂಡಳಿಗಳ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲೂ ಬ್ಲೂಟೂತ್ ಉಪಕರಣ ಬಳಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಈ ಘಟನೆಗಳನ್ನು ಗಮನಿಸಿದರೆ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸರ್ಕಾರಿ ವ್ಯವಸ್ಥೆ ಸೋಲುತ್ತಿದ್ದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಉಭಯ ಜಿಲ್ಲೆಗಳಲ್ಲಿ 19 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವ್ಯವಹಾರ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ಆರೋಪಿಗಳ ಜತೆ ಪ್ರಕರಣ ಥಳುಕು ಹಾಕಿಕೊಂಡಿದೆ.

ಕಳೆದ ಬಾರಿ, ಪಿಎಸ್​ಐ ನೇಮಕಾತಿ ಪರೀಕ್ಷೆ ನಡೆಯುವಾಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಪ್ರತಿಪಕ್ಷ ಕಾಂಗ್ರೆಸ್ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಸರ್ಕಾರದ ವಿರುದ್ಧ ಬಳಸಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಪ್ರತಿಪಕ್ಷ ಬಿಜೆಪಿ ತೀಕ್ಷ ್ಣವಾಗಿ ಪ್ರತಿಕ್ರಿಯಿಸಿದೆ. ನೇಮಕಾತಿ ಪರೀಕ್ಷೆಗಳಲ್ಲಿಯೂ ಸರ್ಕಾರ ವಸೂಲಾತಿಗೆ ಇಳಿದಿದೆ ಎಂದಿರುವ ಬಿಜೆಪಿ, ಪ್ರತಿ ಕೆಇಎ ಅಭ್ಯರ್ಥಿಯಿಂದ 5-8 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದೆ. ಅದೇನಿದ್ದರೂ, ಇಂಥ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು.

ಎಸ್​ಡಿಎ, ಎಫ್​ಡಿಎ, ಲೆಕ್ಕ ಸಹಾಯಕರು, ಆಹಾರ ನಿರೀಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ಪ್ರಾಮಾಣಿಕವಾಗಿ ಓದಿ, ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು ಇದರಿಂದ ಧೃತಿಗೆಟ್ಟಿದ್ದಾರೆ. ಕೆಲವರು ಮಾಡುವ ತಪ್ಪಿನಿಂದ ಎಲ್ಲರೂ ಶಿಕ್ಷೆ ಅನುಭವಿಸುವಂತಾಗುತ್ತದೆ. ಪಿಎಸ್​ಐ ನೇಮಕಾತಿ ಪರೀಕ್ಷೆಯ ಅಕ್ರಮ ಭಾರಿ ಸದ್ದು ಮಾಡಿತ್ತು. ಆ ಬಳಿಕವಾದರೂ, ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಪರೀಕ್ಷೆ ಅಕ್ರಮದ ಕೃತ್ಯಗಳಲ್ಲಿ ಯಾರೇ ಭಾಗಿಯಾಗಿದ್ದರೂ, ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ಆಗಬಾರದು. ಇಂಥ ಅಕ್ರಮಗಳು ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಯುವಸಮುದಾಯಕ್ಕೆ ತಪು್ಪಸಂದೇಶ ರವಾನಿಸುತ್ತಿವೆ. ಸರ್ಕಾರದ ನೇಮಕಾತಿಗಳು ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಕಳೆದುಕೊಂಡರೆ ಗತಿ ಏನು? ಇದು ವ್ಯವಸ್ಥೆ ಕುಸಿಯುತ್ತಿರುವುದರ ಸಂಕೇತ. ಮೇಲ್ನೋಟಕ್ಕೆ ನೋಡಿದರೆ ಈ ಪರೀಕ್ಷೆ ಅಕ್ರಮ ಎರಡು ಜಿಲ್ಲೆಗಳಿಗೆ ಸೀಮಿತವಾದಂತಿಲ್ಲ. ಹಾಗಾಗಿ, ಪ್ರಕರಣದ ಸಮಗ್ರ ಹಾಗೂ ತ್ವರಿತ ವಿಚಾರಣೆ ನಡೆಯಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ಮುಖ್ಯವಾಗಿ, ಮುಂಬರುವ ದಿನಗಳಲ್ಲಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.