ನ್ಯೂಸ್

ಬಿಗಿ ಕ್ರಮ ಅನಿವಾರ್ಯ: ಕೇಂದ್ರ ಸರ್ಕಾರದಿಂದ ಪಿಎಫ್​ಐ ನಿಷೇಧ

Webdesk - Ravikanth

ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಸೆ.22ರಂದು ದೇಶದ ಹಲವೆಡೆ ಕಾರ್ಯಾಚರಣೆ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಹಾಗೂ ಅದರ ಸಹವರ್ತಿ ಸಂಘಟನೆಗಳ ನಾಯಕರ ಮೇಲೆ ದಾಳಿ ನಡೆಸಿದ್ದವು. ಸೆ. 27ರಂದೂ ದಾಳಿ ಮುಂದುವರಿಸಿ, 270ಕ್ಕೂ ಜನರನ್ನು ವಶಕ್ಕೆ ತೆಗೆದುಕೊಂಡಿದ್ದವು. ಕಾನೂನುಬಾಹಿರ ಚಟುವಟಿಕೆ ನಡೆಸಿದ ಹಾಗೂ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮುಸ್ಲಿಂ ಯುವಕರನ್ನು ಪ್ರೇರೇಪಿಸುವುದು ಇತ್ಯಾದಿ ಆರೋಪಗಳಿಗೆ ಪುಷ್ಟಿ ನೀಡುವ ಸಾಕ್ಷ್ಯಾಧಾರಗಳು ಈ ದಾಳಿಗಳಲ್ಲಿ ಸಿಕ್ಕ ಬೆನ್ನಲ್ಲೇ ಕೇಂದ್ರ ಸರ್ಕಾರವು ಪಿಎಫ್​ಐ ಮತ್ತು ಅದರ ಸಹವರ್ತಿ 8 ಸಂಘಟನೆಗಳಿಗೆ 5 ವರ್ಷ ನಿಷೇಧ ಹೇರಿದೆ. ಆಂತರಿಕ ಭಯೋತ್ಪಾದನೆ ದಮನದ ನಿಟ್ಟಿನಲ್ಲಿ ಇದರಿಂದ ಅನುಕೂಲವಾಗಲಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪಿಎಫ್​ಐ ಹಾಗೂ ಇತರ ಸಂಘಟನೆಗಳನ್ನು ನಿಷೇಧಿಸಲು ಗೃಹ ವ್ಯವಹಾರಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಸಂಘಟನೆಗಳು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸಂಘಟನೆಗಳಾಗಿ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಪ್ರಜಾಪ್ರಭುತ್ವದ ಪರಿಕಲ್ಪನೆ ದುರ್ಬಲಗೊಳಿಸುವ, ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ರಹಸ್ಯ ಕಾರ್ಯಸೂಚಿ ಅನುಸರಿಸುತ್ತಿವೆ.

ಅಲ್ಲದೆ, ದೇಶದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿವೆ. ಹೀಗಾಗಿ, ನಿಷೇಧ ಹೇರಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಯುಎಪಿಎ ಕಾಯ್ದೆಯು ಭಯೋತ್ಪಾದಕ ಚಟುವಟಿಕೆಗಳನ್ನು ದಮನ ಮಾಡಲು ಬಳಸುವ ಮಹತ್ವದ ಕಾನೂನು ಅಸ್ತ್ರವಾಗಿದೆ. ಈ ಕಾನೂನಿನನ್ವಯ, ಯಾವುದೇ ಸಂಘಟನೆಯನ್ನು ‘ಕಾನೂನುಬಾಹಿರ ಸಂಘಟನೆ’ ಅಥವಾ ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಬಹುದಾಗಿದೆ. ಇದನ್ನೇ ಸಾಮಾನ್ಯರೂಢಿಯಲ್ಲಿ ನಿಷೇಧ ಎಂದು ಪರಿಗಣಿಸಲಾಗುತ್ತದೆ. ಈ ಕಾನೂನಿನಡಿ ಯಾವುದಾದರೊಂದು ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದರೆ ಆ ಸಂಘಟನೆಯ ಸದಸ್ಯತ್ವವು ಅಪರಾಧೀಕರಣ ಎಂದು ಪರಿಗಣಿತವಾಗುತ್ತದೆ ಹಾಗೂ ಸಂಘಟನೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಉಗ್ರಗಾಮಿ ಸಂಘಟನೆಗಳು ಎಂದು ಘೋಷಿಸಿರುವುದನ್ನು ಯುಎಪಿಎ ಪರಿಚ್ಛೇದ 1ರಲ್ಲಿ ಸೇರಿಸಲಾಗುತ್ತದೆ. ಸಿಮಿ, ಎಲ್​ಟಿಟಿಇ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೊಯಿಸ್ಟ್), ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್- ಎ-ತೊಯ್ಬಾ, ಅಲ್ ಖೈದಾ, ಐಸಿಸ್ ಸೇರಿದಂತೆ 42 ಸಂಘಟನೆಗಳು ಈಗಾಗಲೇ ಈ ಪಟ್ಟಿಯಲ್ಲಿವೆ.

ಪಿಎಫ್​ಐ ನಿಷೇಧಿಸುವ ಸಂದರ್ಭದಲ್ಲಿ ಮೋದಿ ಆಡಳಿತವು ಹಲವಾರು ಮುಸ್ಲಿಂ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜಾಣ್ಮೆಯನ್ನೂ ತೋರಿದೆ. ಪಿಎಫ್​ಐ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಹೀಗಾಗಿಯೇ ಪಿಎಫ್​ಐ ನಿಷೇಧದ ನಿರ್ಧಾರವನ್ನು ಸೂಫಿ ಮತ್ತು ಬರೇಲ್ವಿ ಧರ್ಮಗುರುಗಳು ಸೇರಿದಂತೆ ಹಲವಾರು ಅಲ್ಪಸಂಖ್ಯಾತ ಮುಖಂಡರು ಸ್ವಾಗತಿಸಿದ್ದಾರೆ. ಈ ಹಿಂದೆ ಸಿಮಿ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಅದರ ಬದಲಾದ ಸ್ವರೂಪವೇ ಪಿಎಫ್​ಐ ಎಂದು ಹೇಳಲಾಗಿದೆ. ಯಾವುದೇ ಸಂಘಟನೆಯನ್ನು ಕಾನೂನುಬಾಹಿರ ಕೃತ್ಯದ ನೆಲೆಯಲ್ಲಿ ನಿಷೇಧಿಸಿದಾಗ, ಅದು ಮತ್ತೊಂದು ರೂಪದಲ್ಲಿ ತಲೆಯೆತ್ತಿ ಚಟುವಟಿಕೆಗಳಲ್ಲಿ ತೊಡಗಿದರೆ ನಿಷೇಧದ ಉದ್ದೇಶ ಸಾರ್ಥಕವಾಗುವುದಿಲ್ಲ.