‘ಒಂದು ರಾಜ್ಯ ಹಲವು ಜಗತ್ತುಗಳು’. ಇದು ಕರ್ನಾಟಕ ಪ್ರವಾಸೋದ್ಯಮದ ಘೋಷವಾಕ್ಯ. ಹಲವು ವೈವಿಧ್ಯಮಯ ಆಕರ್ಷಣೀಯ ಪ್ರವಾಸಿ ತಾಣಗಳಿಂದ ಸಂಪದ್ಭರಿತವಾದ ನಾಡು ಕರ್ನಾಟಕ ಎಂಬ ವಾಸ್ತವವನ್ನು ಇದು ಬಿಂಬಿಸುತ್ತದೆ.
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ಒಟ್ಟು ದೇಶೀಯ ಉತ್ಪಾದನೆಯಲ್ಲಿ ಶೇಕಡಾ 6ಕ್ಕಿಂತ ಹೆಚ್ಚು ಪಾಲನ್ನು ಕೂಡ ಹೊಂದಿದೆ. ದೇಶದಲ್ಲಿ ಅಪಾರ ಉದ್ಯೋಗಗಳನ್ನು ಕೂಡ ಸೃಷ್ಟಿಸಿದ್ದು, ಶೇಕಡಾ 8ಕ್ಕಿಂತ ಅಧಿಕ ಉದ್ಯೋಗಾವಕಾಶ ಕಲ್ಪಿಸಿದೆ. ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿಯ ಪ್ರಕಾರ, ಪ್ರವಾಸೋದ್ಯಮ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯಾಗುವ ಸಾಮರ್ಥ್ಯವನ್ನು ಭಾರತ ಹೊಂದಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವದಲ್ಲಿಯೇ ಅತಿ ಜನಪ್ರಿಯ ಪ್ರವಾಸಿ ಕೇಂದ್ರಬಿಂದುವಾಗಿ ಹೊರಹೊಮ್ಮಬಹುದಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರವಾಸೋದ್ಯಮ ಜನಪ್ರಿಯತೆಯಲ್ಲಿ ಕರ್ನಾಟಕವು ಭಾರತದಲ್ಲಿ ಮೂರನೇ ಸ್ಥಾನ ಪಡೆದಿದೆ. ಭಾರತದಲ್ಲಿರುವ ಸಂರಕ್ಷಿತ ಸ್ಮಾರಕಗಳ ಪೈಕಿ 600ಕ್ಕೂ ಅಧಿಕ ಸ್ಮಾರಕಗಳನ್ನು ಹೊಂದಿರುವ ಕರ್ನಾಟಕವು ಈ ನಿಟ್ಟಿನಲ್ಲಿ ಎರಡನೆಯ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಆರ್ಥಿಕತೆಗೆ ಪ್ರವಾಸೋದ್ಯಮ ವಯಲವು ಶೇಕಡಾ 14ರಷ್ಟು ಕೊಡುಗೆ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. 30 ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅಂದಾಜಿಸಲಾಗಿದೆ. ವಿಶ್ವ ಪಾರಂಪರಿಕ ತಾಣಗಳು ಸೇರಿ ಪ್ರಸಿದ್ಧ ಐತಿಹಾಸಿಕ ತಾಣಗಳು, ಧಾರ್ವಿುಕ ಮಹತ್ವದ ಕ್ಷೇತ್ರಗಳು, ವನ್ಯಜೀವಿ ಅಭಯಾರಣ್ಯಗಳು, ಗಿರಿಧಾಮಗಳು, ಜಲಪಾತಗಳು, ಕಡಲತೀರಗಳು ಹೀಗೆ ವೈವಿಧ್ಯಮಯ ಆಕರ್ಷಕ ಲೋಕಗಳು ಬಗೆದಷ್ಟು ಕರ್ನಾಟಕದಲ್ಲಿ ಸಿಗುತ್ತವೆ.
ದೇಶದ ಪರಿಸರ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ನೈಸರ್ಗಿಕ ಕರಾವಳಿ ತೀರಗಳ ಗಣಿಯಾಗಿದೆ. ಇಂತಹ ನಿಸರ್ಗ ಸಿರಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ನಿರ್ದಿಷ್ಟ ಗುರಿಯುಳ್ಳ ಯೋಜನೆ, ಕಾರ್ಯಕ್ರಮಗಳ ಅಗತ್ಯತೆ ಇದೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಪ್ರಕಟಿಸಲಾಗಿದೆ. ಪ್ರವಾಸೋದ್ಯಮ ವಲಯವು ಉದ್ಯೋಗವನ್ನು ಸೃಜಿಸುವ ಒಂದು ಪ್ರಮುಖ ಚಾಲನಾ ಶಕ್ತಿಯಾಗಿದ್ದು, ನಗರಗಳು ಹಾಗೂ ಸ್ಥಳೀಯ ಪ್ರದೇಶಗಳ ಬೆಳವಣಿಗೆಗೆ ಕಾರಣವಾಗಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅನುಕೂಲಕರ ಮತ್ತು ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ಸೃಜಿಸಲು ಸಾರ್ವಜನಿಕ ಮತ್ತು ಖಾಸಗಿ ಎರಡೂ ಕ್ಷೇತ್ರದ ಹಿತಾಸಕ್ತಿಗಾರರನ್ನು ಒಳಗೊಳ್ಳುವ ಮೂಲಕ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಲಯದಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹಿಸಲು ಪ್ರೋತ್ಸಾಹಕ ಹಾಗೂ ಸಹಾಯಧನವನ್ನು ಒದಗಿಸಲು ಬಯಸುತ್ತೇವೆ ಎಂದು ಇದರಲ್ಲಿ ವಿವರಿಸಲಾಗಿದೆ. ಆದರೆ, ವಾಸ್ತವದಲ್ಲಿ ಇದೆಷ್ಟು ಕಾರ್ಯಗತವಾಗಿದೆ ಎಂಬುದು ಮಾತ್ರ ಪ್ರಶ್ನಾರ್ಹವಾಗಿದೆ. ರಾಜ್ಯ ಪ್ರವಾಸೋದ್ಯಮ ನೀತಿಯು ಉತ್ತಮ ಧ್ಯೇಯೋದ್ದೇಶಗಳನ್ನು ಹೊಂದಿರುವ ಹಾಗೂ ದೂರದೃಷ್ಟಿಯುಳ್ಳ ಮಾರ್ಗಸೂಚಿಯಾಗಿದ್ದರೂ ಅದರ ಕಾರ್ಯಾನುಷ್ಠಾನ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂಬುದು ಮಹತ್ವದ್ದಾಗಿದೆ. ಈ ನೀತಿಯ ಸೂಕ್ತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಮತ್ತು ಅದರ ಅಧೀನ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃಧಿ್ಧ ನಿಗಮ (ಕೆ.ಎಸ್.ಟಿ.ಡಿ.ಸಿ), ಅರಣ್ಯ ವಸತಿ ವಿಹಾರಧಾಮಗಳ ಸಂಸ್ಥೆ (ಜೆ.ಎಲ್.ಆರ್), ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮಗಳಿಗೆ (ಕೆ.ಟಿ.ಐ.ಎಲ್) ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿ ಸಕ್ರಿಯಗೊಳಿಸುವ ಅಗತ್ಯತೆ ಇದೆ. ಕರ್ನಾಟಕವನ್ನು ತೋರಿಸುವ ಪ್ಯಾಕೇಜ್ ಟೂರ್ಗಳನ್ನು ವ್ಯವಸ್ಥಿತವಾಗಿ ಹಾಗೂ ವ್ಯಾಪಕ ಪ್ರಮಾಣದಲ್ಲಿ ಆಯೋಜಿಸಲು ಖಾಸಗಿಯವರನ್ನು ಪ್ರೋತ್ಸಾಹಿಸಲು ಸೂಕ್ತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಬಹುದಾಗಿದೆ.