ನ್ಯೂಸ್

ಸಂಪಾದಕೀಯ | ನೇಮಕಾತಿಗೆ ವಿಳಂಬ ಬೇಡ; ಸಹಸ್ರಾರು ಬ್ಯಾಕ್​ಲಾಗ್ ಹುದ್ದೆಗಳು ಖಾಲಿ..

Webdesk - Ravikanth

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ 2505 ಹುದ್ದೆಗಳು 2001ರಿಂದಲೂ ಭರ್ತಿಯಾಗಿಲ್ಲ. ಖಾಲಿ ಹುದ್ದೆಗಳ ಕುರಿತಂತೆ ಸಚಿವ ಉಪಸಂಪುಟ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ ಮಾಹಿತಿಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದ 23 ಇಲಾಖೆಗಳಲ್ಲಿ ಇಷ್ಟು ಬ್ಯಾಕ್​ಲಾಗ್ ಹುದ್ದೆಗಳು ಖಾಲಿ ಇದ್ದು, ಉನ್ನತ ಶಿಕ್ಷಣ, ಪ್ರಾಥಮಿಕ-ಪ್ರೌಢಶಿಕ್ಷಣ, ಲೋಕೋಪಯೋಗಿ ಹಾಗೂ ವಾಣಿಜ್ಯ ಇಲಾಖೆಗಳಿಗೆ ಇದರಲ್ಲಿ ಸಿಂಹಪಾಲು ಸಲ್ಲುತ್ತದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳು ಹಾಗೂ ಶಾಸನಬದ್ಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್​ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕು ಹಾಗೂ ಮೂರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬ್ಯಾಕ್​ಲಾಗ್ ಹುದ್ದೆಗಳ ನೇಮಕಾತಿಗಾಗಿ ರಚಿಸಲಾದ ಉಪ ಸಮಿತಿ ಕಳೆದ ಜನವರಿ ಅಂತ್ಯದಲ್ಲಿ ನಿರ್ದೇಶನ ನೀಡಿತ್ತು. ಆದರೆ, ಆರು ತಿಂಗಳು ಗತಿಸಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಬ್ಯಾಕ್​ಲಾಗ್ ಹುದ್ದೆಗಳ ನೇಮಕಾತಿಗಾಗಿ ರಚಿಸಿರುವ ಉಪ ಸಮಿತಿಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷರಾಗಿದ್ದು, ಸಚಿವ ಸಂಪುಟದ ಆರು ಸದಸ್ಯರಿದ್ದಾರೆ. ಇಲಾಖಾವಾರು, ನಿಗಮವಾರು, ವಿಶ್ವವಿದ್ಯಾಲಯವಾರು ಬ್ಯಾಕ್​ಲಾಗ್ ಹುದ್ದೆಗಳ ನೇಮಕಾತಿಗಾಗಿ ಕೈಗೊಂಡಿರುವ ಕ್ರಮಗಳನ್ನು ಕಳೆದ ಜನವರಿಯಲ್ಲಿ ಈ ಸಮಿತಿ ವಿವರವಾಗಿ ಪರಿಶೀಲಿಸಿತ್ತು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ- ಮಂಡಳಿಗಳು, ಸಹಕಾರ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬ್ಯಾಕ್​ಲಾಗ್ ಹುದ್ದೆಗಳಿಗೆ ಒಂದು ತಿಂಗಳೊಳಗೆ ನೇಮಕಾತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಇದಲ್ಲದೆ, ಅನುದಾನಿತ ಕಾಲೇಜುಗಳಲ್ಲಿರುವ ಬ್ಯಾಕ್​ಲಾಗ್ ಹುದ್ದೆಗಳನ್ನು 2 ತಿಂಗಳೊಳಗೆ ಭರ್ತಿ ಮಾಡಬೇಕು. ಇಲ್ಲದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾಕ್​ಲಾಗ್ ಹುದ್ದೆಗಳ ನೇಮಕಾತಿಗೆ 15 ದಿನಗಳೊಳಗೆ ಅನುಮತಿ ನೀಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿರುವ ಬ್ಯಾಕ್​ಲಾಗ್ ಹುದ್ದೆಗಳು ಸಿ ಗುಂಪಿನ ತಾಂತ್ರಿಕೇತರ ಹುದ್ದೆಗಳಾಗಿರುವುದರಿಂದ ಇಲಾಖೆಯಿಂದಲೇ ಕೂಡಲೇ ಮೆರಿಟ್ ಆಧಾರದಡಿ ನೇಮಕಾತಿಗೆ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದರು.

ಬ್ಯಾಕ್​ಲಾಗ್ ಹುದ್ದೆಗಳ ಭರ್ತಿಗೆ ವಿಶೇಷ ನಿಯಮಾವಳಿ ರೂಪಿಸಲಾಗಿದ್ದು, ಹಣಕಾಸು ಇಲಾಖೆಯ ಅನುಮತಿಯ ಅಗತ್ಯವೂ ಇಲ್ಲ. ಯಾವುದೇ ತಾಂತ್ರಿಕ ತೊಡಕು ಇರುವುದಿಲ್ಲ. ಕೂಡಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನೂ ಕಾರಜೋಳ ಕೊಟ್ಟಿದ್ದರು. ಪರಿಶಿಷ್ಟ ಜಾತಿ (ಎಸ್​ಸಿ), ಪರಿಶಿಷ್ಟ ಪಂಗಡಕ್ಕೆಂದೇ (ಎಸ್​ಟಿ) ಮೀಸಲಿರಿಸಿದ ಹುದ್ದೆಗಳನ್ನು ಬ್ಯಾಕ್​ಲಾಗ್ ಹುದ್ದೆಗಳು ಎಂದು ಪರಿಗಣಿಸಲಾಗುತ್ತದೆ. ನೇರ ನೇಮಕಾತಿಯಲ್ಲಿ ಎಸ್​ಸಿಗೆ ಶೇ 18 ಮತ್ತು ಎಸ್​ಟಿಗೆ ಶೇ 3 ಹುದ್ದೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಎಸ್​ಸಿ, ಎಸ್​ಟಿ ಅಲ್ಲದವರನ್ನು ಭರ್ತಿ ಮಾಡಲು ಅವಕಾಶವಿಲ್ಲ. ಹೀಗಾಗಿ, ಬ್ಯಾಕ್​ಲಾಗ್ ಹುದ್ದೆಗಳ ಭರ್ತಿಯಾಗದಿದ್ದರೆ ಅವು ಖಾಲಿ ಉಳಿಯುತ್ತವೆ. ಇದರಿಂದ ಸರ್ಕಾರಿ ಆಡಳಿತ ನಡೆಸುವಲ್ಲಿ ಹಾಗೂ ಸಾರ್ವಜನಿಕರಿಗೆ ಸೂಕ್ತ ಸೇವೆ ಒದಗಿಸುವಲ್ಲಿ ವ್ಯತ್ಯಯ ಉಂಟಾಗುತ್ತದೆ. ಅದೆ, ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳುವುದು ಸೂಕ್ತ.