ನ್ಯೂಸ್

ಸಂಪಾದಕೀಯ | ಕಠಿಣ ನಿರ್ಧಾರಗಳೇ ಬೇಕು; ಭ್ರಷ್ಟಾಚಾರದ ವಿರುದ್ಧ ಪಂಜಾಬ್ ಸರ್ಕಾರದ ದಿಟ್ಟ ನಿರ್ಣಯ..

Webdesk - Ravikanth

ಭ್ರಷ್ಟಾಚಾರದ ವಿರುದ್ಧ ಕಾನೂನು, ಜಾಗೃತಿ, ಅರಿವು ಹೀಗೆ ಹಲವು ಅಸ್ತ್ರಗಳ ಬಳಕೆಯಾಗುತ್ತಿರುವುದು ನಿಜ. ಆದರೆ, ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತಳೆಯದೆ ಈ ಪಿಡುಗಿನ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರೊಂದಿಗೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾದ ನಂತರದ ದಿನಗಳಲ್ಲಿ ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಹುಟ್ಟುಹಾಕಿದರು. ದೆಹಲಿಯಲ್ಲಿ ಅಧಿಕಾರ ಗದ್ದುಗೆ ಏರಿದ ಈ ಪಕ್ಷ, ಪಂಜಾಬಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಜಯಭೇರಿ ಬಾರಿಸಿ, ಸರ್ಕಾರ ರಚಿಸಿದ್ದು ಗೊತ್ತಿರುವಂಥದ್ದೇ. ವಿಪರ್ಯಾಸವೆಂದರೆ, ಅದೇ ಸರ್ಕಾರದ ಆರೋಗ್ಯ ಮಂತ್ರಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವುದು. ಟೆಂಡರ್ ಮಂಜೂರಾತಿ ಮತ್ತು ಇತರ ಖರೀದಿ ಬಿಲ್​ಗಳ ಪಾವತಿಗಾಗಿ ಶೇಕಡ 1ರಷ್ಟು ಕಮಿಷನ್ ಕೇಳಿದ ಆರೋಪದ ಮೇಲೆ ಪಂಜಾಬ್ ಆರೋಗ್ಯ ಸಚಿವ ಡಾ.ವಿಜಯ ಸಿಂಗ್ಲಾ ಅವರನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಿಂದ ಕೈಬಿಟ್ಟಿದ್ದಾರೆ. ಮಾತ್ರವಲ್ಲ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರ ವಿರೋಧಿ ವಿಭಾಗಕ್ಕೆ ಸೂಚಿಸಿದ್ದು, ಸಿಂಗ್ಲಾ ಬಂಧನವಾಗಿದೆ.

ಕಮಿಷನ್ ಬೇಡಿಕೆ ವಿಚಾರವು ಪ್ರತಿಪಕ್ಷಗಳಿಗೆ ಗೊತ್ತಾಗುವ ಮುನ್ನ, ಮಾಧ್ಯಮಗಳಲ್ಲಿ ಬರುವ ಮೊದಲೇ ಮುಖ್ಯಮಂತ್ರಿ ಮಾನ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ಉತ್ತಮ ಸಂದೇಶ ರವಾನಿಸಿದಂತಾಗಿದೆ. ಆದರೆ, ಯಾವುದೇ ಪಕ್ಷಗಳು ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಗುತ್ತಿಗೆದಾರರಿಂದ ಸಚಿವರು ಕಮಿಷನ್​ಗೆ ಬೇಡಿಕೆ ಇಟ್ಟ ವಿಷಯ ಕರ್ನಾಟಕದಲ್ಲೂ ಭಾರಿ ಚರ್ಚೆ, ವಾದ-ವಿವಾದಕ್ಕೆ ಗುರಿಯಾಯಿತು. ಆರೋಪ ಎದುರಿಸಿದ ಸಚಿವರು ರಾಜೀನಾಮೆ ನೀಡಿದ್ದು ಬಿಟ್ಟರೆ ಈ ಪ್ರಕರಣ ಇನ್ನೂ ರ್ತಾಕ ಅಂತ್ಯ ಕಂಡಿಲ್ಲ. ಹಲವು ಇಲಾಖೆಗಳಲ್ಲಿ ಲಂಚದ ಹಾವಳಿ ಹಾಗೆಯೇ ಇದೆ, ಪರಿಸ್ಥಿತಿ ಏನೂ ಬದಲಾಗಿಲ್ಲ ಎಂದು ಗುತ್ತಿಗೆದಾರರು ಅಳಲು ತೋಡಿಕೊಳ್ಳುತ್ತಿದ್ದು, ಭ್ರಷ್ಟಾಚಾರದ ವಿರುದ್ಧ ಇಲ್ಲೂ ಕಠಿಣ ಕ್ರಮಗಳನ್ನು ಏಕೆ ಕೈಗೊಳ್ಳಲಾಗುತ್ತಿಲ್ಲ? ಪಂಜಾಬಿನಲ್ಲಿ ಈ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಮಾನ್ ಖುದ್ದು ಆಂತರಿಕ ತನಿಖೆ ನಡೆಸಿದ್ದು, ಸಿಂಗ್ಲಾ ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಮಾರ್ಚ್ 28ರಂದು ಇದೇ ಸಿಂಗ್ಲಾ, ‘ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಅದಾದ, ಎರಡು ತಿಂಗಳೊಳಗೇ ಭ್ರಷ್ಟಾಚಾರ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

ಪಂಜಾಬಿನ ಪ್ರಕರಣ ಎಲ್ಲ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆ ಆಗಬೇಕು. ಸರ್ಕಾರವೇ ನೀಡಿದ ಅನುದಾನ ಬಿಡುಗಡೆ ಮಾಡಲು, ಜನರ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳಿದರೆ ಶ್ರೀಸಾಮಾನ್ಯರ ಗತಿ ಏನು? ವ್ಯವಸ್ಥೆ ಸುಧಾರಣೆ ಸರಳವಾದ ಪ್ರಕ್ರಿಯೆಯಲ್ಲ. ಈ ನಿಟ್ಟಿನಲ್ಲಿ ಪ್ರಬಲ ಇಚ್ಛಾಶಕ್ತಿ ಮತ್ತು ಭ್ರಷ್ಟಾಚಾರ ವಿರುದ್ಧ ಕಠಿಣ ನಿಲುವು ಅಗತ್ಯ.