ನ್ಯೂಸ್

ಜಲಕ್ಷಾಮದ ಅಪಾಯ; ವಿಶ್ವ ಜಲ ಅಭಿವೃದ್ಧಿ ವರದಿ ಆತಂಕಕಾರಿ

Webdesk - Ravikanth

ವಿಶ್ವಸಂಸ್ಥೆಯ ವಿಶ್ವ ಜಲ ಅಭಿವೃದ್ಧಿ ವರದಿ 2023ರ ಪ್ರಕಾರ 2050ರ ವೇಳೆಗೆ ಜಲಕ್ಷಾಮ ಎದುರಿಸುತ್ತಿರುವ ಜಾಗತಿಕ ನಗರಗಳ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ. ನೀರಿನ ಅಭಾವ ಎದುರಿಸುತ್ತಿರುವ ನಗರಗಳಲ್ಲಿನ ಜನಸಂಖ್ಯೆ 2016ರಲ್ಲಿ 93.3 ಕೋಟಿ ಇದ್ದುದು, 2050ರ ವೆಳೆಗೆ 240 ಕೋಟಿ ತಲುಪಲಿದೆ. ಭಾರತ, ಈಶಾನ್ಯ ಚೀನಾ, ಪಾಕಿಸ್ತಾನದಲ್ಲಿ ಜಲಕ್ಷಾಮ ಹೆಚ್ಚಾಗಿದೆ. ಕಡಿಮೆ ಲಭ್ಯತೆ ಮತ್ತು ಬೇಡಿಕೆ ಹೆಚ್ಚಳ ಕಾರಣ ನೀರಿನ ಅಭಾವ ನಿಶ್ಚಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಆತಂಕಕಾರಿ ಸಂಗತಿಯಾಗಿದೆ.

ಭೂಮಿಯ ಶೇ. 70ರಷ್ಟು ಭಾಗ ನೀರಿನಿಂದಲೇ ಆವೃತವಾಗಿದ್ದರೂ ಈ ಪೈಕಿ ಕುಡಿಯಲು ಯೋಗ್ಯವಾಗಿರುವ ನೀರಿನ ಪ್ರಮಾಣ ಶೇ. 1ರಷ್ಟು ಮಾತ್ರ. ಈ ಸೀಮಿತ ಸಿಹಿನೀರಿನ ಸಂಪನ್ಮೂಲಗಳು ಕೂಡ ಅಸಮಾನವಾಗಿ ಹಂಚಿಕೆಯಾಗಿವೆ. ಹೆಚ್ಚುತ್ತಿರುವ ಜನಸಂಖ್ಯೆ ಹೊಂದಿರುವ ಬಿಸಿ, ಶುಷ್ಕ ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಲಭ್ಯತೆ ಇಲ್ಲ. ವಿಶ್ವ ಸಂಸ್ಥೆ ವರದಿಯಲ್ಲೂ ಇದು ಬಿಂಬಿತವಾಗಿದೆ. ಕಾಡುಗಳು ಮತ್ತು ಇತರ ಪ್ರಕೃತಿಯ ನಷ್ಟಗಳು ನೀರಿನ ಹರಿವನ್ನು ಅಡ್ಡಿಪಡಿಸುತ್ತಿವೆ. ಕಾಡುಗಳನ್ನು ನಾಶಪಡಿಸುವ, ಅನಿಲ, ತೈಲ ಮತ್ತು ಕಲ್ಲಿದ್ದಲ್ಲನ್ನು ಇಂಧನಕ್ಕಾಗಿ ಸುಡುವ ಮಾನವ ಚಟುವಟಿಕೆಗಳು ನೀರಿಗಾಗಿ ಪ್ರಪಂಚವು ಅವಲಂಬಿತವಾಗಿರುವ ಮಳೆ ಸುಸೂತ್ರವಾಗಿ ಸುರಿಯುವುದಕ್ಕೆ ಅಡ್ಡಿಯಾಗಿವೆ. ಅಲ್ಲದೆ, ಹವಾಮಾನ ಬದಲಾವಣೆಯು ಬಿಸಿಯಾದ ಭೂಮಿಯಲ್ಲಿ ತೀವ್ರವಾದ ಮತ್ತು ಅನಿರೀಕ್ಷಿತ ಮಳೆಯನ್ನು ತರುತ್ತಿದೆ. ಈ ಕಾರಣಗಳಿಂದಾಗಿ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ನೀರಿನ ಭದ್ರತೆಯು ದುರ್ಬಲಗೊಳ್ಳುತ್ತಿದೆ ಎಂದು ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ.

ಜಲಕ್ಷಾಮವು ಆಹಾರ ಭದ್ರತೆಗೂ ಧಕ್ಕೆಯುಂಟು ಮಾಡುತ್ತದೆ. ಆಹಾರದ ಮೂಲವಾಗಿರುವ ಬೆಳೆಗಳು ಮಳೆ ನೀರು ಹಾಗೂ ಇತರೆ ನೀರಾವರಿ ಸೌಲಭ್ಯಗಳನ್ನೇ ಅವಲಂಬಿಸಿವೆ. ಮರುಬಳಕೆಯ ಇಂಧನವಾದ ಜಲವಿದ್ಯುತ್ ಉತ್ಪಾದನೆಗೂ ನೀರು ಅಗತ್ಯ. ನೀರಿನ ಕೊರತೆಯು ರಾಜಕೀಯ ಅಸ್ಥಿರತೆ, ಸಂಘರ್ಷ, ಸ್ಥಳಾಂತರದ ಪ್ರಚೋದನೆಗೂ ಕಾರಣವಾಗಬಹುದಾಗಿದೆ. ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿರುವ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಜರುಗಿದರೆ ಅದು ನೀರಿಗಾಗಿ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇನ್ನು ರಾಜ್ಯದಲ್ಲೂ ಜಲಕ್ಷಾಮದ ಈ ಬಾರಿ ಕಂಡುಬರುವ ಮುನ್ನೆಚ್ಚರಿಕೆ ನೀಡಲಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 17 ಜಿಲ್ಲೆಗಳು ತೀವ್ರವಾದ ನೀರಿನ ತೊಂದರೆ ಅನುಭವಿಸಲಿವೆ ಎಂದು ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನೆ ಸಂಸ್ಥೆ ಹೇಳಿದೆ. ಭಾರಿ ಜಲಕ್ಷಾಮ ಎದುರಿಸಲಿರುವ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿ ಇದ್ದು, ರಾಯಚೂರು. ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ,

ಬೀದರ್ ಹಾಗೂ ಬೆಳಗಾವಿ ನಂತರದಲ್ಲಿವೆ. ಬೆಂಗಳೂರು 12ನೇ ಸ್ಥಾನದಲ್ಲಿದೆ. ಅರಣ್ಯ ಸಂರಕ್ಷಣೆ, ನದಿ, ಕೆರೆ ಸೇರಿದಂತೆ ಜಲಮೂಲಗಳ ರಕ್ಷಣೆ, ಇಂಗುಗುಂಡಿ ನಿರ್ವಣ, ಬೋರ್​ವೆಲ್ ಮತ್ತು ಬಾವಿಗಳಿಗೆ ಮರುಪೂರಣ ವ್ಯವಸ್ಥೆ, ಮಳೆ ಕೊಯ್ಲು ಪದ್ಧತಿ ಅಳವಡಿಕೆ ಮುಂತಾದ ಕ್ರಮಗಳ ಮೂಲಕ ಜಲಕ್ಷಾಮವನ್ನು ತಗ್ಗಿಸಬಹುದಾಗಿದೆ. ಇದಲ್ಲದೆ, ನೀರನ್ನು ಪೋಲಾಗದಂತೆ ಹಿತಮಿತವಾಗಿ ಬಳಕೆ ಮಾಡುವುದು ಕೂಡ ಬಹುಮುಖ್ಯವಾಗಿದೆ.