ನ್ಯೂಸ್

ಸಂಪಾದಕೀಯ | ಗಂಭೀರವಾಗಿ ಪರಿಗಣಿಸಲಿ: ಪ್ರಾಣಹಾನಿ, ಬೆಳೆಹಾನಿ ಪ್ರತಿವರ್ಷ ಹೆಚ್ಚಳ

Webdesk - Ravikanth

ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ಸಂಘರ್ಷದಲ್ಲಿ ಪ್ರಾಣಹಾನಿ ಮತ್ತು ಬೆಳೆಹಾನಿ ಎರಡೂ ಉಂಟಾಗುತ್ತಿದೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸರ್ಕಾರ ಆಗಾಗ್ಗೆ ಸಭೆಗಳನ್ನು ನಡೆಸುತ್ತಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಮಾನವ - ವನ್ಯಜೀವಿಗಳ ಸಂಘರ್ಷದ ಪರಿಣಾಮ ಮತ್ತು ಪರಿಹಾರ ಕುರಿತು ಸಚಿವ ಈಶ್ವರ ಖಂಡ್ರೆ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಮಾನವ ಪ್ರಾಣ ಹಾನಿ ತಡೆಯುವುದರೊಂದಿಗೆ ಬೆಳೆ ರಕ್ಷಣೆ ಮಾಡಬೇಕು. ಅದೇ ರೀತಿಯಲ್ಲಿ ರೈತರು ಬೆಳೆ ರಕ್ಷಣೆಗೆ ಅನುಸರಿಸುವ ವಿದ್ಯುತ್ ಬೇಲಿಯ ಸ್ಪರ್ಶದಿಂದ ಅಥವಾ ಬೇಲಿಯ ಉರುಳಿನಿಂದ ವನ್ಯಜೀವಿಗಳು ಸಾವಿಗೀಡಾಗಬಾರದು. ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಆನೆ ಮಾತ್ರ ಅಲ್ಲ, ವನ್ಯಜೀವಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ವನ್ಯಜೀವಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಸವಾಲೇ ಸರಿ. ಹೀಗಾಗಿ ಬೆಳೆ ರಕ್ಷಣೆಗೆ ತಮಗೆ ತೋಚಿದ ಪರಿಹಾರ ಕ್ರಮ ಅನುಸರಿಸುತ್ತಾರೆ. ಈ ಪರಿಹಾರ ಕ್ರಮಗಳೇ ಕೆಲವು ವೇಳೆ ಪ್ರಾಣಿಗಳ ಜೀವ ತೆಗೆದುಕೊಳ್ಳುತ್ತವೆ. ಪ್ರಾಣಿಗಳ ಜೀವವೂ ಅಮೂಲ್ಯ ಹಾಗೆಯೇ ರೈತನ ಜೀವ ಮತ್ತು ಬೆಳೆ ರಕ್ಷಣೆಯೂ ಮುಖ್ಯ.

ಎಲ್ಲ ಆನೆಗಳೂ ದಾಳಿ ಮಾಡುವುದಿಲ್ಲ. ಕೆಲವು ಆನೆಗಳು ಮಾತ್ರ ಪದೇಪದೆ ದಾಳಿ ಮಾಡಲಿದ್ದು, ಅಂತಹ ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಇದರಿಂದ ಆನೆಗಳ ಚಲನವಲನದ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಪುಂಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವ ಮೊದಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ವಿವರಿಸಿದ್ದಾರೆ.

ರೈಲ್ವೆ ಬ್ಯಾರಿಕೇಡ್ ಕ್ರಮ ಕೂಡ ಆನೆಗಳನ್ನು ನಾಡಿನತ್ತ ಬರುವುದನ್ನ ತಡೆಯಲು ನೆರವಾಗಲಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಜನವಸತಿ, ತೋಟ - ಗದ್ದೆಗಳ ಬಳಿ ಆನೆಗಳು ಕಾಣಿಸಿಕೊಂಡಾಗ ತ್ವರಿತವಾಗಿ ಕಾಡಿಗೆ ಮರಳಿಸಲು ಮತ್ತು ಸಮೀಪದಲ್ಲಿ ವಾಸವಾಗಿರುವ ಜನರಿಗೆ ಜನರಿಗೆ ವಾಟ್ಸ್ ಆಪ್, ಎಸ್​ಎಂಎಸ್ ಮತ್ತಿತರ ಪ್ರಚಾರ ವಿಧಾನಗಳ ಮೂಲಕ ಮಾಹಿತಿ ನೀಡಿ, ಜೀವಹಾನಿ ತಗ್ಗಿಸಲು ಪ್ರಯತ್ನಿಸಿ ಎಂದು ಸಚಿವರು ನಿರ್ದೇಶಿಸಿದ್ದಾರೆ.

ವಾಸ್ತವವಾಗಿ ಅಧಿಕಾರಿಗಳು ನೀಡಿರುವ ಸಲಹೆಗಳಾಗಲಿ, ಮೊಬೈಲ್ ಬಳಕೆಯಿಂದ ರೈತರನ್ನು ಅಲರ್ಟ್ ಮಾಡುವ ಸಚಿವರ ಸಲಹೆಯಾಗಲಿ ಮೇಲ್ನೋಟಕ್ಕೆ ಕಾರ್ಯಸಾಧುವಲ್ಲ ಎನಿಸುತ್ತಿದೆ. ರೈಲ್ವೆ ಬ್ಯಾರಿಕೇಡ್ ಹಾಕಿದ್ದರೂ ಕೆಲವೆಡೆ ಆನೆಗಳು ಈ ಬ್ಯಾರಿಕೇಡ್ ದಾಟಿಕೊಂಡು ಬಂದ ನಿದರ್ಶನಗಳಿವೆ. ಹಾಗೆಯೇ ಬ್ಯಾರಿಕೇಡ್​ನಲ್ಲಿ ಸಿಲುಕಿ ಪ್ರಾಣವನ್ನೂ ಕಳೆದುಕೊಂಡಿವೆ.

ಹಲವು ಕಾರಣಗಳಿಗೆ ಈಗಾಗಲೇ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ವನ್ಯಜೀವಿಗಳ ದಾಳಿಯೂ ಈ ಕಾರಣಗಳಲ್ಲಿ ಒಂದು. ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ವನ್ಯಜೀವಿಗಳ ದಾಳಿಗೆ ಬೇಸತ್ತಿರುವ ರೈತರು ಭೂಮಿ ಉಳುಮೆ ಮಾಡುವುದನ್ನು ಬಿಟ್ಟಿದ್ದಾರೆ. ರೈತರು ಮತ್ತು ವನ್ಯಜೀವಿ ಪ್ರೇಮಿಗಳನ್ನು ದೂರ ಇಟ್ಟು ಕೈಗೊಳ್ಳುವ ತೀರ್ವನಗಳು ನಿರೀಕ್ಷಿತ ಫಲ ನೀಡದೇ ಹೋಗಬಹುದು. ಹೀಗಾಗಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ವಿಹಿತ. ಕಾಡು ಪ್ರಾಣಿಗಳ ದಾಳಿಯಿಂದ ಸಂಭವಿಸುವ ಬೆಳೆಹಾನಿಗೆ ಪರಿಹಾರ ನೀಡಲು ರೂಪಿಸಿರುವ ಮಾರ್ಗಸೂಚಿಗಳಲ್ಲೂ ಮಾರ್ಪಾಡು ಮಾಡಬೇಕು. ವನ್ಯಜೀವಿಗಳು ಅತಿ ಹೆಚ್ಚು ದಾಳಿ ಮಾಡುವ ಜಿಲ್ಲೆಗಳ ರೈತ ಮುಖಂಡರು, ವನ್ಯಜೀವಿ ಪ್ರೇಮಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಗಳನ್ನೂ ಪರಿಗಣಿಸಿ ಕಾರ್ಯಸಾಧುವಾದ ಪರಿಹಾರ ಕ್ರಮಗಳನ್ನು ರೂಪಿಸಬೇಕು.