ಹುಕ್ಕಾ ಬಾರ್ ಸೇರಿದಂತೆ ತಂಬಾಕು ಉತ್ಪನ್ನ ನಿಷೇಧಿಸುವ ಉದ್ದೇಶದಿಂದ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಸ್ಥ್ಯ ಸಮಾಜ ನಿರ್ವಣದ ಆಶಯಕ್ಕೆ ಪೂರಕವಾಗಿದೆ. ಅಪರಾಧ ಕೃತ್ಯಗಳಿಗೆ ಮಾದಕ ಪದಾರ್ಥಗಳ ಬಳಕೆಯೂ ಕಾರಣ ಎಂಬುದನ್ನು ಪೊಲೀಸ್ ಇಲಾಖೆಯೇ ಒಪ್ಪಿಕೊಂಡಿದೆ. ಹೀಗಾಗಿ ಹುಕ್ಕಾಬಾರ್, ತಂಬಾಕು ಉತ್ಪನ್ನಗಳ ನಿಷೇಧ ಕೂಡ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಪೂರಕವಾಗಬಹುದು.
ಈ ಹಿಂದಿನ ಕೋಟ್ಪಾ ಕಾಯ್ದೆಯಲ್ಲಿ ಸಿಗರೇಟ್ ಸೇವನೆಗೆ ಮಾತ್ರ ನಿಷೇಧ ಇತ್ತು. ಈಗ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯನ್ನೂ ನಿಷೇಧಿಸಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಹುಕ್ಕಾ ಬಾರ್ಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ಹುಕ್ಕಾ ಬಾರ್ಗಳಲ್ಲಿ ನಡೆಯುವ ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಬೀಳಬಹುದು. ತಂಬಾಕು ಉತ್ಪನ್ನ ಬಳಕೆ ಮಾದಕ ಪದಾರ್ಥಗಳ ಬಳಕೆಯ ಮೊದಲ ಹಂತ. ತಂಬಾಕು ಉತ್ಪನ್ನಗಳ ದುಶ್ಚಟ ಬೆಳೆದ ನಂತರ ವ್ಯಸನಿಗಳು ಮಾದಕ ಪದಾರ್ಥಗಳತ್ತ ಚಿತ್ತ ಹರಿಸುತ್ತಾರೆ.
ಅಪರಾಧ ಕೃತ್ಯಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವುದು ಮಾದಕ ಪದಾರ್ಥಗಳು. ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುವ ವಿದ್ಯಾರ್ಥಿಗಳು ಕ್ರಮೇಣ ಡ್ರಗ್ಸ್ಗೆ ಬಲಿಯಾಗಿ ತಮ್ಮ ದುಶ್ಚಟಗಳಿಗೆ ಹಣ ಹೊಂದಿಸಲು ಸಣ್ಣಪುಟ್ಟ ಕಳ್ಳತನಕ್ಕೆ ಇಳಿಯುತ್ತಾರೆ. ಈ ಹಂತದಲ್ಲಿ ಹಾದಿತಪ್ಪಿ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳನ್ನು ಆರಂಭಿಸುತ್ತಾರೆ.
ತಂಬಾಕು ಉತ್ಪನ್ನ ಖರೀದಿ ಮಾಡಲು 18 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಕಾನೂನಿನಲ್ಲಿ ಅವಕಾಶ ಇದೆ. ಸರ್ಕಾರ ವಯೋಮಿತಿಯನ್ನು 18 ವರ್ಷದ ಬದಲು 21 ವರ್ಷ ನಿಗದಿಪಡಿಸಲು ನಿರ್ಧರಿಸಿದೆ. ತಂಬಾಕು ಉತ್ಪನ್ನಗಳ ವ್ಯಸನ ಬೆಳೆಸಿಕೊಂಡ ಬಳಿಕ ಯುವಕರು ಡ್ರಗ್ಸ್, ಮಾದಕ ವಸ್ತುಗಳ ವ್ಯಸನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆಲ್ಲ ತಂಬಾಕು ಉತ್ಪನ್ನಗಳ ಸೇವನೆಯೇ ಕಾರಣ ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್. ಗುಂಡೂರಾವ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಂಬಾಕು ಖರೀದಿಗೆ ನಿಗದಿಪಡಿಸಲು ನಿರ್ಧರಿಸಿರುವ ವಯೋಮಿತಿಯನ್ನು ಮತ್ತಷ್ಟು ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು.
ಶಾಲಾ-ಕಾಲೇಜುಗಳ ಬಳಿ ಇರುವ ಬಹುತೇಕ ಟೀ ಸ್ಟಾಲ್ಗಳಲ್ಲಿ ತಂಬಾಕು ಉತ್ಪನ್ನಗಳು, ಮಾದಕ ಪದಾರ್ಥಗಳು ಸಿಗುತ್ತವೆ. ಅತಿ ಹೆಚ್ಚು ವ್ಯಸನಿಗಳು ಹುಟ್ಟಿಕೊಳ್ಳುತ್ತಿರುವುದೂ ಶಾಲಾ ಕಾಲೇಜು ಹಂತದಲ್ಲೇ ಎಂಬುದು ನಿರ್ವಿವಾದ. ಶಾಲಾ-ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲು ನಿರ್ಧರಿಸಿರುವುದು ಒಳ್ಳೆಯದೇ. ಉದ್ಯಾನವನಗಳು ಮತ್ತು ಧಾರ್ವಿುಕ ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ಮಾಡುವುದು ಸೂಕ್ತವಾಗಿಯೇ ಇದೆ. ಆಸ್ಪತ್ರೆ, ಶಿಶುಪಾಲನಾ ಕೇಂದ್ರಗಳು, ಹೆಲ್ತ್ ಕೇರ್ ಸೆಂಟರ್, ಧಾರ್ವಿುಕ ಕೇಂದ್ರಗಳು, ಉದ್ಯಾನವನಗಳಲ್ಲಿ ನಿಷೇಧ ಕಡ್ಡಾಯವಾಗಿ ಜಾರಿಗೆ ಬರಬೇಕು. ಆಗ ಮಾತ್ರ ಸರ್ಕಾರದ ಆಶಯ ಈಡೇರಲಿದೆ.