ನ್ಯೂಸ್

ರಾಜ್ಯದ ರೈತರಿಗೆ ಅನುಕೂಲಕರ: ಬೆಂಬಲ ಬೆಲೆಯಲ್ಲಿ ಹೆಚ್ಚಿನ ರಾಗಿ, ಜೋಳ ಖರೀದಿ

Webdesk - Ravikanth

ಬೆಂಬಲ ಬೆಲೆ ಯೋಜನೆಯಡಿ ಹೆಚ್ಚಿನ ಪ್ರಮಾಣದ ರಾಗಿ ಹಾಗೂ ಜೋಳ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ರಾಜ್ಯದ ರೈತರ ಆದಾಯ ಹೆಚ್ಚಿಸಲು ಅನುಕೂಲಕರವಾಗುವಂತಹ ಬೆಳವಣಿಗೆಯಾಗಿದೆ.

ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ ಅಂದಾಜು 4 ಲಕ್ಷ ಟನ್ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ಆದರೆ, ಈ ಬಾರಿ 8 ಲಕ್ಷ ಟನ್ ರಾಗಿಯನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ರಾಗಿ ಬೆಳೆಗಾರರಿಗೆ ಶುಭ ಸುದ್ದಿಯಾಗಿದೆ. ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದ ಅನೇಕ ರಾಜ್ಯಗಳಿಂದ ರಾಗಿಗೆ ವ್ಯಾಪಕ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಾಜು 4 ಲಕ್ಷ ಟನ್ ರಾಗಿಯನ್ನು ಹೆಚ್ಚುವರಿಯಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಬಿಪಿಎಲ್ ಪಡಿತರ ಕಾರ್ಡ್​ನ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಅಕ್ಕಿ ಬದಲಾಗಿ 2 ಕೆಜಿ ರಾಗಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಉತ್ತರ ಕರ್ನಾಟಕದಲ್ಲಿ 2 ಕೆಜಿ ಜೋಳ ಹಾಗೂ ಕರಾವಳಿ ಭಾಗದಲ್ಲಿ 2 ಕೆಜಿ ನುಚ್ಚಕ್ಕಿಯನ್ನು ಪಡಿತರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಪಡಿತರದಲ್ಲಿ ಪೂರೈಸಲು ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 4-5 ಲಕ್ಷ ಟನ್ ರಾಗಿಯ ಅಗತ್ಯತೆ ಬೀಳುತ್ತದೆ. ರಾಜ್ಯದಲ್ಲಿ ಬೆಂಬಲ ಬೆಲೆಯಡಿ ಅಂದಾಜು 1 ಲಕ್ಷ ಟನ್ ಜೋಳವನ್ನು ಖರೀದಿಸಲಾಗುತ್ತಿದ್ದು, ಈ ಬಾರಿ 3 ಲಕ್ಷ ಟನ್ ಜೋಳ ಖರೀದಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಜಾರಿಗೊಳಿಸಲು ಅಗತ್ಯವಿರುವ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮವು ಮುಂದಾಗಿಲ್ಲ. ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಇದಕ್ಕೆ ಬದಲಾಗಿ ಪ್ರತಿ ಪಡಿತರ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಣದ ಬದಲಾಗಿ ಪಡಿತರದಲ್ಲಿ ರಾಗಿ, ಜೋಳ ನೀಡುವ ಬಗೆಗೂ ಸರ್ಕಾರ ಚಿಂತನೆ ನಡೆಸುವುದು ಅಗತ್ಯವಿದೆ. ಇದರಿಂದ ಪಡಿತರ ಫಲಾನುಭವಿಗಳಿಗೂ ಹಾಗೂ ರಾಜ್ಯದ ರೈತರಿಗೂ ಅನುಕೂಲವಾಗುತ್ತದೆ. ಹೆಚ್ಚಿನ ಧಾನ್ಯವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದು ರೈತರ ಆದಾಯ ಹೆಚ್ಚಿಸಲು ನೆರವಾಗುತ್ತದೆ. ಜೋಳ, ರಾಗಿ ಸಿರಿಧಾನ್ಯಗಳಾಗಿದ್ದು, ಹೆಚ್ಚಿನ ಪೌಷ್ಠಿಕಾಂಶಗಳನ್ನು ಒಳಗೊಂಡಿರುವುದರಿಂದ ಪಡಿತರ ಫಲಾನುಭವಿಗಳ ಆರೋಗ್ಯ ವರ್ಧನೆಗೂ ಸಹಾಯವಾಗುತ್ತದೆ.

ರಾಗಿ, ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಂದಾಗಿರುವುದು ಉತ್ತಮ ನಿರ್ಧಾರವೇ ಆಗಿದ್ದರೂ ಖರೀದಿಯಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮೊಟ್ಟಮೊದಲನೆ ಯದ್ದಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸೂಕ್ತ ಸಮಯದಲ್ಲಿ ತೆರೆಯಬೇಕು. ಬೆಳೆ ಮಾರಾಟ ಅವಧಿಯ ಕೊನೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತದೆ. ಈ ಮೊದಲೇ ಬೆಳೆಗಾರರಿಂದ ಫಸಲು ಖರೀದಿಸುವ ಮಧ್ಯವರ್ತಿಗಳು ಇದರಿಂದ ಲಾಭ ಮಾಡಿಕೊಳ್ಳುತ್ತಾರೆ ಎಂಬ ಆರೋಪವಿದೆ. ಖರೀದಿ ದಿನಾಂಕಗಳನ್ನು ಸರಿಯಾಗಿ ತಿಳಿಸದ್ದರಿಂದ ರೈತರು ಖರೀದಿ ಕೇಂದ್ರಗಳಲ್ಲಿ ಮೂರ್ನಾಲ್ಕು ದಿನ ಕಾಯುವಂತಾಗುತ್ತದೆ. ತೂಕದಲ್ಲೂ ಮೋಸ ನಡೆಯುತ್ತದೆ. ರೈತರ ಬದಲಾಗಿ ಮಧ್ಯವರ್ತಿಗಳಿಂದ ಹೆಚ್ಚಿನ ಖರೀದಿ ಮಾಡಲಾಗುತ್ತದೆ ಎಂಬ ದೂರುಗಳಿದ್ದು, ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳುವುದು ಅತ್ಯಗತ್ಯ.