ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಇದರಿಂದ, ಠೇವಣಿದಾರರಿಗೆ ಆಗುವ ಮೋಸಕ್ಕೆ ಕಡಿವಾಣ ಹಾಕಲು ಅನುವಾಗಬಹುದಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಮೋಸ ಮಾಡುವುದನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸುವುದು ಈ ವಿಧೇಯಕದಲ್ಲಿನ ಮಹತ್ವದ ತಿದ್ದುಪಡಿಯಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಮಾಡುವ ಮೋಸದ ಪ್ರಕರಣಗಳ ವಿಚಾರಣೆಗಾಗಿಯೇ ವಿಶೇಷ ನ್ಯಾಯಾಲಯ ಅಸ್ತಿತ್ವಕ್ಕೆ ತರುವ ಉದ್ದೇಶವೂ ಈ ತಿದ್ದುಪಡಿ ವಿಧೇಯಕದಲ್ಲಿದೆ. ಯಾವುದಾದರೂ ಹಣಕಾಸು ಸಂಸ್ಥೆಯ ವಿರುದ್ಧ ವಿವಿಧ ಪ್ರದೇಶಗಳಲ್ಲಿ ಹಾಗೂ ವಿವಿಧ ಠಾಣೆಗಳಲ್ಲಿ ಮೋಸದ ಪ್ರಕರಣಗಳು ದಾಖಲಾಗಿದ್ದರೆ, ಅವುಗಳನ್ನೆಲ್ಲ ಕ್ರೋಡೀಕರಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸಹ ಅವಕಾಶ ಕಲ್ಪಿಸಲಾಗುತ್ತಿದೆ. ಇದಲ್ಲದೆ, ಪ್ರಕರಣಗಳ ತನಿಖೆಗೆ ವಿಶೇಷ ಅಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ. ಇವೆಲ್ಲವು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದರೆ ಮೋಸ ಹೋದ ಠೇವಣಿದಾರರಿಗೆ ಶೀಘ್ರ ಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಅನುಕೂಲವಾಗಲಿದೆ.
ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ತನ್ನ ಠೇವಣಿದಾರರಿಗೆ ಅಂದಾಜು 50 ಕೋಟಿ ರೂಪಾಯಿ ಹಣ ವಾಪಸ್ ನೀಡದಿರುವ ಪ್ರಕರಣ ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್, ಗುರು ರಾಘವೇಂದ್ರ ಬ್ಯಾಂಕ್ ಹಗರಣಗಳು ಈಚಿನ ದಿನಗಳಲ್ಲಿ ಬಯಲಾಗಿರುವ ದೊಡ್ಡ ಮೊತ್ತದ ಪ್ರಕರಣಗಳಾಗಿವೆ. ಈ ಪ್ರಕರಣಗಳಲ್ಲಿ ಸಾವಿರಾರು ಕೋಟಿ ರೂಪಾಯಿಯಷ್ಟು ಹಣವು ಠೇವಣಿದಾರರಿಗೆ ವಾಪಸಾಗದೆ ಸಿಲುಕಿಕೊಂಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿದಾರರಿಗೆ ವಂಚನೆ ಮಾಡಿ ಬಾಗಿಲು ಮುಚ್ಚುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ರೀತಿಯ ವಂಚನೆಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಕೈಗೊಳ್ಳುವ ಇಂತಹ ಕ್ರಮಗಳು ಮಾತ್ರ ಸಾಲದು; ಸಾರ್ವಜನಿಕರು ಕೂಡ ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗದೆ, ತಾವು ಠೇವಣಿ ಇಡುವ ಸಂಸ್ಥೆಯ ವಿಶ್ವಾಸಾರ್ಹತೆ ಪರಿಶೀಲಿಸಿ ಮುಂದುವರಿಯುವುದು ಕೂಡ ಅಷ್ಟೇ ಮಹತ್ವದ್ದಾಗಿದೆ.
ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ 2022ಕ್ಕೆ ಕೂಡ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಅನಧಿಕೃತ ಸಾಗುವಳಿ ಭೂಮಿ ಸಕ್ರಮಕ್ಕಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಇದ್ದ ಕೊನೆಯ ದಿನಾಂಕವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ಈ ತಿದ್ದುಪಡಿಯು ಅವಕಾಶ ಕಲ್ಪಿಸುತ್ತದೆ. ಕಳೆದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರವು ಇದಕ್ಕೆ ಸಂಬಂಧಪಟ್ಟಂತೆ ಅಧ್ಯಾದೇಶ ಹೊರಡಿಸಿದ್ದು, ಈಗ ಅದು ವಿಧೇಯಕದ ರೂಪ ಪಡೆದುಕೊಂಡಿದೆ. ಈ 2 ಕ್ರಮಗಳಿಂದ ಜನರಿಗೆ ಪ್ರಯೋಜನ ನಿರೀಕ್ಷಿಸಬಹುದು.