ನ್ಯೂಸ್

ಸಂಪಾದಕೀಯ | ಸಮಗ್ರ ಯೋಜನೆ ಬೇಕು; ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ

ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ವಿಮಾನ ನಿಲ್ದಾಣಗಳೂ ಸಹ ಪ್ರಮುಖ ಪಾತ್ರವಹಿಸುವುದನ್ನು ಅಲ್ಲಗಳೆಯಲಾಗದು. ಅದರಲ್ಲೂ ಐಟಿಬಿಟಿಯಂತಹ ವಲಯಗಳಿರುವಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಇದಲ್ಲದೆ, ಈಗ ಜನಸಾಮಾನ್ಯರ ಪ್ರವಾಸ ಆದ್ಯತೆಗಳು ಹಾಗೂ ಆಸಕ್ತಿಗಳು ಸಹ ಬದಲಾಗಿವೆ. ಕರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಪ್ರವಾಸೋದ್ಯಮ ಕಳೆಗುಂದಿತ್ತಾದರೂ ಈಗ ಮತ್ತೆ ಮೊದಲಿನ ಚಟುವಟಿಕೆಗಳು ಕ್ರಮೇಣ ಗರಿಗೆದರತೊಡಗಿದೆ. ಹೀಗಾಗಿ ಸಾರಿಗೆ ಸಂಪರ್ಕ ಪ್ರಮುಖವಾಗುತ್ತದೆ. ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರು ಬುಧವಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದು, ರಾಜ್ಯದ ಹಲವು ವಿಮಾನ ನಿಲ್ದಾಣಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಲಾಗಿದೆ. ದಾವಣಗೆರೆ, ರಾಯಚೂರಲ್ಲಿ ಹೊಸ ನಿಲ್ದಾಣ ಸ್ಥಾಪನೆಗೆ ವಿವರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸೂಚನೆ ನೀಡಲಾಗಿದೆ.

ಮೈಸೂರು ನಿಲ್ದಾಣ ವಿಸ್ತರಣೆ, ನವೆಂಬರ್​ನಲ್ಲಿ ಶಿವಮೊಗ್ಗ ನಿಲ್ದಾಣ ಉದ್ಘಾಟನೆ... ಹೀಗೆ ವಿವಿಧ ವಿಚಾರಗಳು ಚರ್ಚೆಯಾಗಿ ಕೆಲ ನಿರ್ದಿಷ್ಟ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸರ್ಕಾರದ ಅವಧಿ ಮುಗಿಯುವುದರ ಒಳಗಾಗಿ ಈ ನಿರ್ಣಯ ಜಾರಿಗೆ ಸಂಕಲ್ಪಿಸಲಾಗಿದೆ. ರಾಜ್ಯದ ಅಭಿವೃದ್ಧಿ, ಉದ್ಯಮಿಗಳನ್ನು ಆಕರ್ಷಿಸುವುದು, ಜನರ ಸಂಪರ್ಕಕ್ಕೆ ಉತ್ತಮ ಜಾಲ- ಈ ಮುಂತಾದ ಪ್ರಯೋಜನಗಳೂ ಇದರಲ್ಲಿವೆಯಾದ್ದರಿಂದ ಸರ್ಕಾರದ ಆಲೋಚನೆ ಸಮಂಜಸವಾಗಿದೆ. ಎರಡನೆಯ ಹಾಗೂ ಮೂರನೇ ಹಂತದ ನಗರಗಳಿಗೂ ವಿಮಾನ ಸೇವೆ ವಿಸ್ತರಿಸಿ, ಜನಸಾಮಾನ್ಯರಿಗೂ ಈ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಘೋಷಿಸಿತು. ತದನಂತರದಲ್ಲಿ ವಿವಿಧ ರಾಜ್ಯಗಳಲ್ಲಿ ಹಲವೆಡೆ ವಿಮಾನ ನಿಲ್ದಾಣಗಳು ಸ್ಥಾಪನೆಯಾಗಿವೆ. ಈ ಯೋಜನೆಯ ಯಶಸ್ಸಿನ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಇವೆಯಾದರೂ ಇದೊಂದು ವಿಶಿಷ್ಟ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ.

ಇಲ್ಲಿ ಒಂದು ಸಂಗತಿ ಗಮನಿಸಬೇಕು. ಕೇವಲ ವಿಮಾನ ನಿಲ್ದಾಣ ಸ್ಥಾಪಿಸಿದರೆ ಸಾಲದು. ಅದಕ್ಕೆ ಪೂರಕವಾಗಿ ರಸ್ತೆ ಇತ್ಯಾದಿ ಮೂಲಸೌಕರ್ಯ ಸಹ ಸುಧಾರಿಸಬೇಕಾಗುತ್ತದೆ. ಬೆಂಗಳೂರಿನಂತಹ ಬೃಹನ್ನಗರಗಳು ಈಗಾಗಲೇ ಉದ್ಯಮಗಳು ಹಾಗೂ ಜನರಿಂದ ಕಿಕ್ಕಿರಿದಿದ್ದು, ಇನೂ ಹೆಚ್ಚು ಧಾರಣಾ ಸಾಮರ್ಥ್ಯ ಅವುಗಳ ಬಳಿ ಉಳಿದಿಲ್ಲ. ಹೀಗಾಗಿ ಅಭಿವೃದ್ಧಿಯ ದಿಕ್ಕನ್ನು ಬೇರೆಡೆಯತ್ತಲೂ ತಿರುಗಿಸಬೇಕಾದುದುದು ಈ ಕಾಲಘಟ್ಟದಲ್ಲಿ ಅನಿವಾರ್ಯ. ಇದರಿಂದ ಉದ್ಯೋಗಸೃಷ್ಟಿ ಜತೆಗೆ ಇತರ ಪ್ರದೇಶಗಳಿಗೂ ಅಭಿವೃದ್ಧಿಯ ಅವಕಾಶ ತೆರೆದಂತಾಗುತ್ತದೆ. ಹಾಗೆ ಆಗಬೇಕು ಎಂದಾದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಈ ಸರ್ಕಾರಕ್ಕೆ ಇನ್ನು ಒಂದು ವರ್ಷವಷ್ಟೇ ಅವಕಾಶ ಇದ್ದು, ನಂತರದಲ್ಲಿ ಚುನಾವಣೆ ಎದುರಾಗುತ್ತದೆ. ಈ ಸೀಮಿತ ಅವಧಿಯಲ್ಲಿ ಅಂದುಕೊಂಡ ಕಾರ್ಯಗಳನ್ನು ಸರ್ಕಾರ ಎಷ್ಟರಮಟ್ಟಿಗೆ ನೆರವೇರಿಸುತ್ತದೆ ಎಂಬುದು ಆಯಕಟ್ಟಿನ ಸ್ಥಾನದಲ್ಲಿರುವವರ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಅವಲಂಬಿಸಿದೆ.