ಸಾಕಷ್ಟು ಜಾಗೃತಿ, ಮುನ್ನೆಚ್ಚರಿಕೆ, ನಿರ್ಬಂಧ ಕ್ರಮಗಳ ನಡುವೆಯೇ ಆನ್ಲೈನ್ ಬೆಟ್ಟಿಂಗ್ ಹಾಗೂ ಲೋನ್ ಆಪ್ಗಳ ಹಾವಳಿ ಮುಂದುವರಿದಿದೆ. ಜೂಜಿನ ಗೀಳಿಗೆ ಸಿಲುಕಿ ಗೋಳಾಡುವವರ ಹಾಗೂ ಆನ್ಲೈನ್ ಸಾಲದ ಹೆಚ್ಚಿನ ಬಡ್ಡಿಯ ವಂಚನೆಗೆ ಸಿಲುಕಿ ಪರದಾಡುವವರ ಸಂಖ್ಯೆಯು ಹೆಚ್ಚುತ್ತಲೇ ಸಾಗಿರುವುದು ಆಂತಕಕಾರಿ ಸಂಗತಿಯಾಗಿದೆ. ಜುಲೈ 2022 ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಆಗಸ್ಟ್ 2019 ಮತ್ತು ಡಿಸೆಂಬರ್ 2021ರ ನಡುವೆ ರಾಷ್ಟ್ರೀಯ ಸೈಬರ್ ಕ್ರೖೆಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನ ವೆಬ್ಸೈಟ್ಗಳ ವಿರುದ್ಧ 5,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ.
ಇದಲ್ಲದೆ, ಭಾರತದಲ್ಲಿ ಹೊರಭಾಗದ ವೆಬ್ಸೈಟ್ಗಳು ನಿರ್ಭಯವಾಗಿ ಕಾರ್ಯನಿರ್ವಹಿಸುತ್ತವೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ರೀತಿ ವಂಚನೆಗೆ ಒಳಗಾದರೂ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬುದು ಸೇರಿ ಅನೇಕ ಕಾರಣಗಳಿಗಾಗಿ ದೂರು ದಾಖಲಿಸದವರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಭಾರತದ ಕಾನೂನಿನ ಪ್ರಕಾರ ಜೂಜಾಟವನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಆದರೆ, ಇಂಟರ್ನೆಟ್ ಅಸ್ತಿತ್ವದಲ್ಲಿರುವುದಕ್ಕಿಂತ ಮುಂಚೆಯೇ ಅಂಗೀಕರಿಸಲ್ಪಟ್ಟ ಕಾನೂನು ಇದಾಗಿರುವುದರಿಂದ ಆನ್ಲೈನ್ ಜೂಜಿನ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. ಹೀಗಾಗಿ, ಆನ್ಲೈನ್ ಕ್ಯಾಸಿನೊ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಪ್ರಕಾರ, ಆನ್ಲೈನ್ ಚಟುವಟಿಕೆಗಳನ್ನು ನಿಯಂತ್ರಿಸಬಹುದಾಗಿದೆ ಹೊರತು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ.
ಆನ್ಲೈನ್ ಗೇಮ್ಗಳನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಕಾನೂನು ನಿಬಂಧನೆಯನ್ನು ಕರ್ನಾಟಕ ಹೈಕೋರ್ಟ್ 2022ರ ಫೆಬ್ರುವರಿಯಲ್ಲಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋಟ್ನಲ್ಲಿ ಮೇಲ್ಮನವಿ ಸಲ್ಲಿಸಿದ ಕರ್ನಾಟಕ ಸರ್ಕಾರವು, ಕಳೆದ ಮೂರು ವರ್ಷಗಳಲ್ಲಿ 28,000 ಪ್ರಕರಣಗಳನ್ನು ದಾಖಲಿಸುವ ಮೂಲಕ ಸೈಬರ್ ಅಪರಾಧವು ಶಿಖರ ಮಟ್ಟ ತಲುಪಿರುವುದರಿಂದ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಿಕೊಳ್ಳಲು ಆನ್ಲೈನ್ ಗೇಮಿಂಗ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಹೇಳಿದೆ.
ಆನ್ಲೈನ್ ಗೇಮಿಂಗ್ನಿಂದಾಗಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಕುಟುಂಬಗಳು ನಾಶವಾಗಿವೆ ಎಂಬುದರತ್ತಲೂ ಸರ್ಕಾರ ಗಮನಸೆಳೆದಿದೆ. ಈಗ ಬಿಹಾರ ಪೊಲೀಸರು ಕೂಡ 100ಕ್ಕೂ ಹೆಚ್ಚು ಜೂಜು/ಗೇಮಿಂಗ್ ಮತ್ತು ಸಾಲ ನೀಡುವ ಅಪ್ಲಿಕೇಶನ್ಗಳನ್ನು ನಿಷೇಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೋರಿದ್ದಾರೆ. ಇಂತಹ ಲೋನ್ ಲೆಂಡಿಂಗ್ ಅಪ್ಲಿಕೇಶನ್ಗಳ ಮೂಲಕ ಸಾಲ ಪಡೆದ ಜನರಿಗೆ ಹೆಚ್ಚಿನ ಬಡ್ಡಿ ದರದ ಸುಲಿಗೆ ಮತ್ತು ಕಿರುಕುಳದ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ಸಾಲದ ಅಪ್ಲಿಕೇಶನ್ಗಳು ಗ್ರಾಹಕರ ಫೋನ್ನಲ್ಲಿರುವ ಎಲ್ಲಾ ಮಾಹಿತಿ ಕನ್ನ ಹಾಕುತ್ತವೆ. ಸಾಲ ಮರುಪಾವತಿಸಲು ವಿಫಲವಾದರೆ, ಅವರ ಸಂಪರ್ಕ ಪಟ್ಟಿಯಲ್ಲಿರುವ ಜನರಿಗೆ ಅಶ್ಲೀಲ ಮಾಹಿತಿ ಕಳುಹಿಸಿ ಕಿರುಕುಳ ನೀಡುತ್ತವೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆನ್ಲೈನ್ ಜೂಜು ನಿಷೇಧಿಸುವ ಸ್ಪಷ್ಟ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತರುವ ಅಗತ್ಯವಿದೆ. ಇಂಟರ್ನೆಟ್ ಮತ್ತು ಪ್ಲೇಸ್ಟೋರ್ನಲ್ಲಿ ಲಭ್ಯವಿರುವ ನೋಂದಾಯಿಸದ ಅಥವಾ ಕಾನೂನುಬಾಹಿರ ಸಾಲದ ಅಪ್ಲಿಕೇಶನ್ಗಳಿಂದ ಯಾವುದೇ ಸಾಲ ತೆಗೆದುಕೊಳ್ಳದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಅಲ್ಲದೆ, ಸಾಕಷ್ಟು ಅಕ್ರಮ ಲೋನ್ ಆಪ್ಗಳನ್ನು ನಿಷೇಧಿಸಿದೆ. ಈ ಕುರಿತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ.