ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ಭಾರಿ ಸದ್ದುಮಾಡಿ, ಸಿಐಡಿ ವಿಚಾರಣೆ ನಡೆದ ಸಂಗತಿ ಗೊತ್ತೇ ಇದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪರೀಕ್ಷೆ ಬರೆದ ಅನೇಕ ಅಭ್ಯರ್ಥಿಗಳನ್ನು ಅಕ್ರಮದ ಆರೋಪದ ಮೇಲೆ ಬಂಧಿಸಲಾಗಿದೆ. ಇವರಲ್ಲಿ 52 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡುವ ಕುರಿತಂತೆ ರಾಜ್ಯ ಪೊಲೀಸ್ ನೇಮಕಾತಿ ವಿಭಾಗ ಪ್ರಕ್ರಿಯೆ ಆರಂಭಿಸಿರುವುದು ಗಮನಾರ್ಹ. ಹೀಗೆ ಡಿಬಾರ್ ಆದಲ್ಲಿ ಅಂಥವರು ಮುಂದೆ ಯಾವುದೇ ಸರ್ಕಾರಿ ನೇಮಕಾತಿ ಪರೀಕ್ಷೆಗೆ ಕೂಡ್ರಲು ಬರುವುದಿಲ್ಲ. ಆದರೆ ಈ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಸಿಐಡಿ ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ವರದಿ ಸಲ್ಲಿಕೆಯಾಗಬೇಕಿದೆ. ಈ ಅಂತಿಮ ವರದಿ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಇತ್ಯಾದಿ ದಾಖಲೆಗಳೊಂದಿಗೆ, ಕಾನೂನುಬದ್ಧವಾಗಿ ಡಿಬಾರ್ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಇಂಥ ಕ್ರಮಗಳು ಅರೋಪವನ್ನು ಪುಷ್ಟೀಕರಿಸುವ ಎಲ್ಲ ದಾಖಲೆಗಳನ್ನು ಹೊಂದಿರಬೇಕಾದುದು ಅತ್ಯಗತ್ಯ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಯಾರಿಗೂ ಅನಗತ್ಯವಾಗಿ ತೊಂದರೆಯಾಗಿದೆ ಅಥವಾ ಅನ್ಯಾಯವಾಗಿದೆ ಎಂಬ ಭಾವನೆಗೆ ಆಸ್ಪದ ಇರಬಾರದು. ಈ ನೇಮಕಾತಿ ಪ್ರಕರಣ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿದ್ದು, ಇದನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಕಠಿಣ ಸಂದೇಶ ನೀಡಲು ಮುಂದಾಗಿರುವುದು ಸೂಕ್ತವೇ ಆಗಿದೆ. ಸರ್ಕಾರಿ ನೇಮಕಾತಿಗಳು ತೀವ್ರ ಪೈಪೋಟಿಯಿಂದ ಕೂಡಿರುತ್ತಿದ್ದು, ಸಣ್ಣ ಸಂಖ್ಯೆಯ ಹುದ್ದೆಗಳಿಗೂ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಉನ್ನತ ಶಿಕ್ಷಣ ಅರ್ಹತೆ ಹೊಂದಿದವರು ಸಹ ಕೆಳಹಂತದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದನ್ನು ಕಾಣಬಹುದು. ಅರ್ಜಿ ಹಾಕಿದವರಲ್ಲಿ ಅರ್ಹರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕಾದುದು ಬಹು ಮುಖ್ಯ. ಹೀಗಾಗಬೇಕು ಎಂದಾದಲ್ಲಿ ಜರಡಿ ವ್ಯವಸ್ಥೆ ಅಂದರೆ ಆಯ್ಕೆ ಪ್ರಕ್ರಿಯೆ ಕಟ್ಟುನಿಟ್ಟಾಗಿರಬೇಕು ಹಾಗೂ ಅಕ್ರಮಕ್ಕೆ ಆಸ್ಪದ ಇರದಂತಿರಬೇಕು.
ಏಕೆಂದರೆ ಮುಂದೆ ಇವರು ಸರ್ಕಾರಿ ವ್ಯವಸ್ಥೆಯ ಭಾಗವಾಗಿ ಆಡಳಿತ ಯಂತ್ರಾಂಗದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ; ಜನರಿಗೆ ಸಮರ್ಪಕವಾದ ಸೇವೆ ನೀಡಬೇಕಾಗುತ್ತದೆ. ಒಂದು ವೇಳೆ, ಅಕ್ರಮ ಮಾರ್ಗದಿಂದ ಹುದ್ದೆ ಗಿಟ್ಟಿಸಿಕೊಂಡರೆ ಅವರು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ? ನೇಮಕಾತಿಯಲ್ಲಿ ಅವ್ಯವಹಾರಗಳು ನಡೆದರೆ, ಮೊದಲೇ ಸರ್ಕಾರಿ ವ್ಯವಸ್ಥೆಯ ಬಗೆಗೆ ನಕಾರಾತ್ಮಕ ಅಭಿಪ್ರಾಯ ಹೊಂದಿರುವ ಜನರಿಗೆ ಮತ್ತಷ್ಟು ನಿರಾಸೆ ಖಂಡಿತ. ಇನ್ನೊಂದು ಸಂಗತಿಯೂ ಇಲ್ಲಿ ಮುಖ್ಯ. ಉತ್ತಮ ಹುದ್ದೆ ಪಡೆಯಬೇಕು, ಒಳ್ಳೆಯ ಸಂಬಳ ಗಳಿಸಿ ಉತ್ತಮ ಜೀವನ ನಡೆಸಬೇಕು ಎಂಬ ಆಸೆಗಳಿರುವುದು ಸಾಮಾನ್ಯ. ಆದರೆ ಆ ಗುರಿಯ ಜತೆಗೆ ಅದನ್ನು ಈಡೇರಿಸಿಕೊಳ್ಳುವ ಹಾದಿ ಸಹ ಮುಖ್ಯವಾಗಬೇಕು. ಗುರಿಯೊಂದೇ ಮುಖ್ಯ; ಮಾರ್ಗ ಯಾವುದಾದರೂ ಸರಿ ಎಂಬ ನಿಲುವು ಸರಿಯಲ್ಲ. ಹೀಗಾಗಿ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಕನಸು ನನಸು ಮಾಡಿಕೊಳ್ಳಲು ನೇರಮಾರ್ಗವನ್ನು ಆಶ್ರಯಿಸಬೇಕೆ ವಿನಾ ಅಡ್ಡದಾರಿಯನ್ನಲ್ಲ. ಕಟ್ಟುನಿಟ್ಟು ನಿಯಮಗಳ ಜತೆಗೆ, ಇಂಥದೊಂದು ನೀತಿಸಂಹಿತೆ ಸ್ವಯಂಪ್ರೇರಿತವಾಗಿ ರೂಢಿಗತವಾಗಬೇಕು. ಅಂದಾಗ, ಅಕ್ರಮದ ಆಲೋಚನೆ ಹತ್ತಿರವೂ ಸುಳಿಯುವುದಿಲ್ಲ.