ನೂತನ ಶಿಕ್ಷಣ ನೀತಿ ಅನುಸಾರ ನೈತಿಕ ಶಿಕ್ಷಣ ಜಾರಿ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಧಾರ್ವಿುಕ ಮುಖಂಡರು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ನಡೆಸಿದ ಮಹತ್ವಪೂರ್ಣ ಚರ್ಚೆಯಲ್ಲಿ, ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕೆಂಬ ಒತ್ತಾಸೆ ವ್ಯಕ್ತವಾಗಿದೆ. ಈ ಕ್ರಮ, ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಮೌಲ್ಯಗಳ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಪರಿಹಾರವಾಗಿ ಹೊರಹೊಮ್ಮಬಹುದು ಎಂದು ನಿರೀಕ್ಷಿಸಬಹುದಾಗಿದೆ. ಸಾಮಾನ್ಯ ಜ್ಞಾನ ಹಾಗೂ ನೈತಿಕ ವಿಜ್ಞಾನ ವಿಷಯಗಳು ಈಗಾಗಲೇ ತಕ್ಕಮಟ್ಟಿಗೆ ಶಾಲೆಗಳ ಪಠ್ಯಕ್ರಮದಲ್ಲಿ ಸೇರಿವೆ. ಆದರೆ, ಇವು ಎಷ್ಟು ಪರಿಣಾಮಕಾರಿ ಎಂಬುದು ಪ್ರಶ್ನಾರ್ಹವಾಗಿದೆ.
ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ದೇಶದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿರುವ ಕರ್ನಾಟಕವು ನೈತಿಕ ಶಿಕ್ಷಣ ಅಳವಡಿಕೆ ವಿಚಾರದಲ್ಲಿ ಶಿಕ್ಷಣ ತಜ್ಞರು, ಧಾರ್ವಿುಕ ಮುಖಂಡರ ಜೊತೆ ಗಹನವಾದ ಚರ್ಚೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಸೂಕ್ಷ್ಮ ವಿಷಯ ಸಹ ಆಗಿರುವುದರಿಂದ, ಎಲ್ಲ ಸಮುದಾಯಗಳ ಧಾರ್ವಿುಕ ನಾಯಕರ ಜೊತೆಗೆ ರ್ಚಚಿಸುವ ಸಂವೇದನೆಯನ್ನು ಸರ್ಕಾರ ತೋರಿರುವುದು ಗಮನಾರ್ಹ. ವರ್ತಮಾನದ ಅನೇಕ ಸಮಸ್ಯೆಗಳಿಗೆ ನೈತಿಕ ಅಧಃಪತನ ಕಾರಣವೆಂಬುದನ್ನು ಗಮನಿಸಿದರೆ, ಇಂಥ ಶಿಕ್ಷಣದ ಅನಿವಾರ್ಯತೆ ಮನದಟ್ಟಾಗುತ್ತದೆ. ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣ ಸೇರ್ಪಡೆ ಮಾಡಿ ಬೋಧಿಸುವುದರಿಂದ ಎಳೆಯ ವಯಸ್ಸಿನ ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಮಕ್ಕಳು ಬೆಳೆದು ದೊಡ್ಡವರಾದಾಗ ಜೀವನದಲ್ಲಿ, ಈ ಬೋಧನೆಯಲ್ಲಿನ ಒಂದಿಷ್ಟು ಅಂಶಗಳನ್ನಾದರೂ ಪಾಲಿಸಿದರೆ ಉತ್ತಮ ಸಮಾಜ ನಿರ್ವಣಕ್ಕೆ ಅನುಕೂಲಕರವಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನೈತಿಕ ಪ್ರಜ್ಞೆ ಬೆಳೆದಾಗ ಆತ ತಪು್ಪ ಮಾಡಲು ಹಿಂಜರಿಯುತ್ತಾನೆ. ಏನಾದರೂ ಸಮಸ್ಯೆ ತಲೆದೋರಿದಾಗ ತಪ್ಪು ಹಾಗೂ ಅತಿರೇಕದ ಮಾರ್ಗ ಹಿಡಿಯುವ ಬದಲು ಸೂಕ್ತ ಮಾರ್ಗ ಶೋಧಿಸಲು ಮುಂದಾಗುತ್ತಾನೆ. ಇಂತಹ ಸಕಾರಾತ್ಮಕ ಆಲೋಚನೆಗಳು ಮೂಡಲು ನೈತಿಕ ಪ್ರಜ್ಞೆ ಅಗತ್ಯ. ಆದರೆ, ಇದು ಏಕಾಏಕಿ ಬರುವಂಥದ್ದಲ್ಲ. ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಸರಿ- ತಪ್ಪುಗಳ ವ್ಯತ್ಯಾಸ ತಿಳಿದಾಗ ಹಾಗೂ ಅದರ ಪರಿಣಾಮಗಳ ಬಗೆಗೆ ಅರಿವಾದಾಗ ನೀತಿಮಾರ್ಗದಲ್ಲಿ ನಡೆಯುವುದು ರೂಢಿಗತವಾಗುತ್ತದೆ. ಹೀಗಾಗಿ, ಶಾಲೆಯಿಂದಲೇ ಇಂತಹ ಬೋಧನೆಗೆ ಅವಕಾಶ ಕಲ್ಪಿಸುವುದು ಸಮಂಜಸ ಕ್ರಮವಾಗುತ್ತದೆ. ಸಮಾಜದಲ್ಲಿ ಅಪರಾಧ ತಡೆಗೂ ಇದು ಸಾಕಷ್ಟು ಕೊಡುಗೆ ನೀಡಬಹುದಾಗಿದೆ.
ರಾಮಾಯಣ, ಮಹಾಭಾರತದ ಕಥೆಗಳು, ಹಲವು ಸಂತರು, ಸಾಧಕರ ಜೀವನಪಾಠಗಳ ಮೂಲಕ ನೀತಿ ಪಾಠಗಳನ್ನು ಈಗಾಗಲೇ ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಬೋಧಿಸಲಾಗುತ್ತದೆ. ಆದರೆ, ಇದು ಇನ್ನಷ್ಟು ಸಮಗ್ರವಾಗಿ, ಪರಿಣಾಮಕಾರಿಯಾಗಿ ಹಾಗೂ ನಿರಂತರವಾಗಿ ಇರುವಂತೆ ವ್ಯವಸ್ಥಿತ ಚೌಕಟ್ಟನ್ನು ರೂಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಚರ್ಚೆಗೆ ಮುಂದಾಗಿರುವುದು ಸೂಕ್ತ ಹೆಜ್ಜೆಯಾಗಿದ್ದು, ಈ ಕುರಿತಂತೆ ಇನ್ನಷ್ಟು ಚರ್ಚೆ- ಪರಾಮರ್ಶೆ ನಡೆದು, ಆದಷ್ಟು ಶೀಘ್ರ ಕಾರ್ಯಗತವಾಗುವುದು ಅಪೇಕ್ಷಣೀಯ.