ನ್ಯೂಸ್

ಸಂಪಾದಕೀಯ | ಅಕ್ರಮ ವಿದೇಶಿಯರ ಕಂಟಕ: ಫಲ ನೀಡದ ಕ್ರಮಗಳು

Webdesk - Ravikanth

ರಾಜ್ಯದ ಯಾವುದೇ ಭಾಗದಲ್ಲಿ ಬೆಳಕಿಗೆ ಬರುವ ಅಪರಾಧ ಕೃತ್ಯಗಳಿಗಿಂತ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಅಪರಾಧ ಕೃತ್ಯಗಳು ಜಗತ್ತಿನ ಗಮನ ಸೆಳೆಯುತ್ತವೆ. ಈ ಅಪರಾಧ ಕೃತ್ಯಗಳೇ ಬೆಂಗಳೂರು ಎಷ್ಟು ಸುರಕ್ಷಿತ ಎಂಬುದಕ್ಕೆ ಮಾನದಂಡವಾಗುತ್ತವೆ. ಬೆಂಗಳೂರಿನಲ್ಲಿ ಬೆಳಕಿಗೆ ಬರುವ ಅಪರಾಧ ಕೃತ್ಯಗಳನ್ನು ಅವಲೋಕನ ಮಾಡಿದರೆ ಅಕ್ರಮ ನುಸುಳುಕೋರರು, ವೀಸಾ ಅವಧಿ ಮುಗಿದ ಮೇಲೂ ಇಲ್ಲೇ ನೆಲೆಸಿದವರ ಪಾತ್ರ ಅಧಿಕ ಎಂಬುದು ವೇದ್ಯವಾಗುತ್ತದೆ.

ಪೊಲೀಸ್ ಇಲಾಖೆ ಅಂಕಿ-ಅಂಶಗಳನ್ನೇ ಆಧರಿಸಿ ಹೇಳುವುದಾದರೆ 8,862 ಮಂದಿ ವೀಸಾ ಅವಧಿ ಮುಗಿದ ಮೇಲೂ ಇಲ್ಲೇ ನೆಲೆಸಿದವರಿದ್ದಾರೆ. 718 ಮಂದಿ ಅಕ್ರಮ ನಿವಾಸಿಗಳಿದ್ದಾರೆ. ಅಕ್ರಮ ನಿವಾಸಿಗಳಲ್ಲಿ 450ಕ್ಕೂ ಅಧಿಕ ಮಂದಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ 501 ಮಂದಿ ವಿದೇಶಿಯರ ಮೇಲೆ ಕ್ರಿಮಿನಲ್ ಕೇಸ್​ಗಳಿವೆ. ಪೊಲೀಸ್ ಇಲಾಖೆ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಮತ್ತು ಆರೋಗ್ಯಕರ ಸಮಾಜ ನಿರ್ವಣಕ್ಕೆ ಹಲವು ವಿನೂತನ ಯೋಜನೆಗಳನ್ನು ರೂಪಿಸುತ್ತಲೇ ಇದೆ. ನಾಗರಿಕ ಸ್ನೇಹಿ ಪೊಲೀಸ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಆದರೆ ಇವೆಲ್ಲ ಎಷ್ಟರಮಟ್ಟಿಗೆ ಫಲ ನೀಡಿವೆ ಎಂದು ಅವಲೋಕನ ಮಾಡಿದರೆ ಆಶಾದಾಯಕ ಲಕ್ಷಣ ಕಾಣಿಸುತ್ತಿಲ್ಲ. ಗಾಂಜಾ, ಅಫೀಮು, ಕೊಕೇನ್​ನಂತಹ ಮಾದಕ ಪದಾರ್ಥಗಳು ಬೆಂಗಳೂರಿಗೆ ಬರಲು ಬಹುತೇಕ ಅಕ್ರಮ ವಿದೇಶಿಯರೇ ಕಾರಣ. ಈ ಮಾತನ್ನು ಪೊಲೀಸರೂ ಒಪು್ಪತ್ತಾರೆ. ರಾಜಧಾನಿಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಲು ವಿದೇಶಿ ಪ್ರಜೆಗಳು, ಮಾದಕ ವ್ಯಸನಿಗಳ ಕೊಡುಗೆ ದೊಡ್ಡದಿದೆ. ಎಂ.ಜಿ. ರಸ್ತೆ ಸೇರಿದಂತೆ ಬೆಂಗಳೂರಿನ ಹಲವೆಡೆ ಮಧ್ಯರಾತ್ರಿ ನಂತರ ರಸ್ತೆಗಳಲ್ಲಿ ಹುಚ್ಚಾಟಗಳು ಹೆಚ್ಚುತ್ತಿವೆ. ಎಂ.ಜಿ. ರಸ್ತೆಯ ಹುಚ್ಚಾಟಗಳಲ್ಲಿ ವಿದೇಶಿಯರೇ ಹೆಚ್ಚು ಎನ್ನುವುದನ್ನು ಪೊಲೀಸ್ ಇಲಾಖೆ ಅಂಕಿ ಅಂಶಗಳೇ ಹೇಳುತ್ತವೆ.

ಕರ್ನಾಟಕದ ಪೊಲೀಸ್ ಇಲಾಖೆಗೆ ಒಳ್ಳೆಯದ ಹೆಸರಿದೆ. ಮಾಜಿ ಪ್ರಧಾನಿ ರಾಜೀವಗಾಂಧಿ ಹಂತಕರನ್ನೇ ಸೆರೆ ಹಿಡಿದದ್ದು ಬೆಂಗಳೂರಿನ ಪೊಲೀಸರು. ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿಗೆ ಕೊರತೆ ಇಲ್ಲ. ಆದರೂ ರಾಜಧಾನಿಯಲ್ಲಿ ನಿತ್ಯ ಬೆಳಕಿಗೆ ಬರುತ್ತಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಸಹಜವಾಗಿ ಕೇಳಿಬರುತ್ತದೆ. ಕರ್ನಾಟಕ ಪೊಲೀಸ್ ಇಲಾಖೆ ದಕ್ಷ ಅಧಿಕಾರಿಗಳಿಂದ ಹೇಗೆ ಹೆಸರು ಗಳಿಸಿದೆಯೋ ಅದೇ ರೀತಿ ಕೆಲವು ದುರ್ಬಲ ಮತ್ತು ಅಪರಾಧಿಗಳೊಂದಿಗೆ ಶಾಮೀಲಾಗುವ, ಅವರ ಕೃತ್ಯಗಳಿಗೆ ಸಹಾಯವಾಗುವ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರಿಗಳಿಂದ ಕೆಟ್ಟ ಹೆಸರನ್ನೂ ಸಂಪಾದಿಸಿದೆ. ಕೆಲವು ದಿನಗಳ ಹಿಂದೆ ಅಪರಾಧ ಪ್ರಕರಣವೊಂದರ ಆರೋಪಿಗಳ ಬಂಧನಕ್ಕೆ ಕೇರಳಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸರು ಕೇರಳದ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ಇಲಾಖೆಗೆ ಒಂದು ಕಪು್ಪ ಚುಕ್ಕೆ. ಆರೋಪಿಗಳು ಶಿಕ್ಷೆಯಿಂದ ಪಾರಾಗಲು ಪೊಲೀಸ್ ಅಧಿಕಾರಿಗಳು ನೆರವಾಗುವುದರಿಂದಲೂ ಅಪರಾಧ ಕೃತ್ಯಗಳು ಹೆಚ್ಚುತ್ತವೆ.

ಬೆಂಗಳೂರು ಸುರಕ್ಷಿತವಲ್ಲ ಎಂಬ ಸಂದೇಶ ಜಗತ್ತಿಗೆ ಹೋಗದಂತೆ ನೋಡಿಕೊಳ್ಳ ಬೇಕಾದ್ದು ಸರ್ಕಾರದ ಜವಾಬ್ದಾರಿ. ಪೊಲೀಸ್ ಇಲಾಖೆ ವೈಫಲ್ಯಗಳು ಸರ್ಕಾರಕ್ಕೆ ಕಳಂಕ ತರುವುದರಲ್ಲಿ ಸಂದೇಹ ಇಲ್ಲ. ಹೀಗಾಗಿ ಬೆಂಗಳೂರಿನಲ್ಲಿ ನಿತ್ಯ ಬೆಳಕಿಗೆ ಬರುತ್ತಿರುವ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೂ ಇಂಥ ಕೃತ್ಯಗಳನ್ನು ನಿಯಂತ್ರಿಸಲು ಇಲಾಖೆಗೆ ಮುಕ್ತ ಅವಕಾಶ ನೀಡಬೇಕು. ರಾಜಕೀಯ ಹಸ್ತಕ್ಷೇಪಗಳೂ ಕೂಡ ಅಪರಾಧ ಕೃತ್ಯ ಹೆಚ್ಚಳಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ.