ರಾಜ್ಯದಲ್ಲಿ ಗಂಭೀರ ಹಾಗೂ ಸಾರ್ವಜನಿಕವಾಗಿ ಗಮನಸೆಳೆಯುವ ಮಹತ್ವದ ಪ್ರಕರಣಗಳನ್ನು ಸಾಮಾನ್ಯವಾಗಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ವೆುಂಟ್ (ಸಿಐಡಿ) ತನಿಖೆಗೆ ವಹಿಸುವ ರೂಢಿ ಇದೆ. ಸಾಮಾನ್ಯ ಪೊಲೀಸ್ ಇಲಾಖೆ ತನಿಖೆ ಬದಲಾಗಿ ಸಿಐಡಿಗೆ ವಹಿಸಿದರೆ ತನಿಖೆ ಚುರುಕುಗೊಂಡು ಉತ್ತಮ ಫಲಿತಾಂಶ ದೊರೆಯಬಹುದೆಂಬ ವಿಶ್ವಾಸ ಮನೆ ಮಾಡಿರುವುದೇ ಇದಕ್ಕೆ ಕಾರಣ. ಇಂತಹ ಸಿಐಡಿಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದೊಂದಿಗೆ ಗಂಭೀರ ಅಪರಾಧ ಪ್ರಕರಣಗಳ ಗುಪ್ತ ಮಾಹಿತಿ ಸಂಗ್ರಹಕ್ಕಾಗಿ ‘ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್ (ಸಿಐಯು) ಅನ್ನು ಹೊಸದಾಗಿ ಸ್ಥಾಪಿಸಿರುವುದು ತನಿಖೆಯನ್ನು ಇನ್ನಷ್ಟು ತ್ವರಿತವಾಗಿಸುವ ಹಾಗೂ ರ್ತಾಕ ಅಂತ್ಯಕ್ಕೆ ಕೊಂಡೊಯ್ಯಬಹುದಾದ ನಿರೀಕ್ಷೆಗಳನ್ನು ಮೂಡಿಸುವ ಕ್ರಮ ಎನ್ನಬಹುದಾಗಿದೆ.
ದೇಶದಲ್ಲಿ ಪ್ರಮುಖ ಅಪರಾಧ ಹಾಗೂ ಆರ್ಥಿಕ ಅಪರಾಧಗಳ ತನಿಖೆಯಲ್ಲಿ ಹೆಸರುವಾಸಿಯಾಗಿರುವ ಕೇಂದ್ರ ಸರ್ಕಾರದ ಅಡಿಯಲ್ಲಿನ ಸಿಬಿಐ ಮಾದರಿಯನ್ನು ಅನುಸರಿಸಿ ಪ್ರಕರಣಗಳ ತ್ವರಿತ ತನಿಖೆ ಹಾಗೂ ವಿಚಾರಣೆಗೆ ಅನುಕೂಲವಾಗುವಂತೆ ಸಿಐಯು ಸ್ಥಾಪಿಸಲಾಗಿದೆ. ಪ್ರಕರಣದ ಸಾಕ್ಷ್ಯ ಸಂಗ್ರಹ, ಆರೋಪಪಟ್ಟಿ ಸಲ್ಲಿಕೆ, ಕೋರ್ಟ್ ವಿಚಾರಣೆ ಮುಂತಾದವುಗಳ ಕುರಿತು ಸಿಐಯು ಮೇಲ್ವಿಚಾರಣೆ ನಡೆಸಲಿದೆ. ಸಿಐಡಿಯು ಉನ್ನತ ತನಿಖಾ ಸಂಸ್ಥೆಯಾಗಿದ್ದರೂ ಯಾವುದೇ ಪ್ರಕರಣದಲ್ಲಿ ನೇರವಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರ ಅದಕ್ಕಿಲ್ಲ. ಸರ್ಕಾರ ತನಿಖೆ ನಡೆಸಲು ವಹಿಸಿದರೆ ಮಾತ್ರ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಸಿಐಡಿಗೆ ಹಸ್ತಾಂತರಿಸಲಾಗುತ್ತದೆ. ಹೀಗಾಗಿ ಸಿಬಿಐಗೆ ಪ್ರಕರಣಗಳನ್ನು ಹಸ್ತಾಂತರಿಸುವಲ್ಲಿ ಸಾಕಷ್ಟು ಸಮಯ ಕಳೆದುಹೋಗುವುದರಿಂದ, ಅಪರಾಧ ಜರುಗಿದ ತಕ್ಷಣವೇ ಲಭ್ಯವಾಗಬಹುದಾದ ಪ್ರಮುಖ ಸಾಕ್ಷ್ಯಾಧಾರಗಳ ಕೊರತೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಅಪರಾಧಗಳು ದಾಖಲಾದ ಕೂಡಲೇ ಮಾಹಿತಿ ಸಂಗ್ರಹಿಸುವ ಉದ್ದೇಶದೊಂದಿಗೆ ಈ ಹೊಸ ಘಟಕ ಸ್ಥಾಪಿಸಿರುವುದು ಮಹತ್ವದ ಕ್ರಮವಾಗಿದೆ.
ಪ್ರಮುಖ ಪ್ರಕರಣಗಳು, ಆರ್ಥಿಕ ಅಪರಾಧಗಳ ತನಿಖೆಗಾಗಿ ಸರ್ಕಾರವು 1974ರ ಏಪ್ರಿಲ್ 15ರಂದು ರಾಜ್ಯದಲ್ಲಿ ಅಪರಾಧ ತನಿಖಾ ಇಲಾಖೆಯನ್ನು ಸ್ಥಾಪಿಸಿದೆ. ಗಂಭೀರ ಪ್ರಕರಣಗಳ ತನಿಖೆಯಲ್ಲಿ ಸೂಕ್ತ ಫಲಿತಾಂಶ ನೀಡಿದರೆ ಮಾತ್ರ ಸಾರ್ವಜನಿಕರಲ್ಲಿ ವಿಶ್ವಾಸ ಮತ್ತು ನಂಬಿಕೆ ಮೂಡುತ್ತದೆ. ಆದರೆ, ಈ ಉದ್ದೇಶವನ್ನು ಸಿಐಡಿ ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದು ಮಾತ್ರ ಪ್ರಶ್ನಾರ್ಹ ಸಂಗತಿಯಾಗಿ ಉಳಿದಿದೆ. 2018ರಿಂದ ಈವರೆಗೂ 854 ಪ್ರಕರಣಗಳು ಇನ್ನೂ ತನಿಖೆ ಹಂತದಲ್ಲಿಯೇ ಉಳಿದುಕೊಂಡಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಸಂಗತಿಯಾಗಿದೆ.
ಈ ಇಲಾಖೆಯಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ಮಾಡುವ ಸಾಮರ್ಥ್ಯ ಇರುವ ಸಿಬ್ಬಂದಿಗೆ ಕೊರತೆ ಏನಿಲ್ಲ. ಆದರೆ, ಅವರು ತಮ್ಮತನಿಖೆಯನ್ನು ಸ್ವತಂತ್ರವಾಗಿ ಕೈಗೊಳ್ಳಲು ಎಷ್ಟರ ಮಟ್ಟಿಗೆ ಮುಕ್ತ ವಾತಾವರಣ ಕಲ್ಪಿಸಲಾಗಿದೆ ಎಂಬುದು ಮಾತ್ರ ಪ್ರಶ್ನಾರ್ಹವಾಗಿದೆ. ಸರ್ಕಾರದ ಅಧೀನದಲ್ಲಿ ಇರುವ ಇಲಾಖೆ ಇದಾಗಿರುವುದರಿಂದ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ, ಒತ್ತಡ ಬಹುತೇಕ ಪ್ರಕರಣಗಳಲ್ಲಿ ಇದ್ದೇಇರುತ್ತದೆ. ಹೀಗಾಗಿ, ತನಿಖೆಗಳು ವಿಳಂಬವಾಗುವ, ಹಾದಿತಪು್ಪವ ಸಾಧ್ಯತೆಗಳು ಅಧಿಕ. ಪೊಲೀಸ್ ಇಲಾಖೆ ಹೊರತುಪಡಿಸಿದ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಂಡು, ಸಿಐಡಿಯನ್ನು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಿದರೆ ಪ್ರಕರಣಗಳು ರ್ತಾಕ ಅಂತ್ಯದತ್ತ ಸಾಗಲು ಸಾಧ್ಯವಾಗುತ್ತದೆ.