ಸಮಕಾಲೀನ ಜಗತ್ತಿನಲ್ಲಿ ಭಾಷೆಯೊಂದು ತನ್ನ ಪಾರಮ್ಯವನ್ನು ಮೆರೆಯಬೇಕೆಂದರೆ ಅದು ಮನೆಯಂಗಳದ ಭಾಷೆಯಾಗಿ, ದೈನಂದಿನ ವ್ಯಾವಹಾರಿಕ ಭಾಷೆಯಾಗಿ ಮಾತ್ರ ಉಳಿದರೆ ಸಾಲದು; ಅದು ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿಯೂ ವಿಕಸಿತಗೊಳ್ಳಬೇಕು. ಹಾಗಾಗಿ, ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ರೂಪಿಸಲು ನಾವು ಸ್ಪಷ್ಟ ಕಾರ್ಯಸೂಚಿಯೊಂದಿಗೆ ದಿಟ್ಟ ಹೆಜ್ಜೆ ಇರಿಸಬೇಕಿದೆ ಎಂದು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಹಾವೇರಿಯಲ್ಲಿ ಶುಕ್ರವಾರ ಆರಂಭವಾದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಕರೆ ನೀಡಿರುವುದು ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಬೆಳವಣಿಗೆ ದೃಷ್ಟಿಯಿಂದ ಸಮಯೋಚಿತವಾಗಿದೆ.
ಸಮ್ಮೇಳನಾಧ್ಯಕ್ಷರ ಈ ಅಭಿಪ್ರಾಯ -ಅನಿಸಿಕೆಗಳನ್ನು ರಾಜ್ಯ ಸರ್ಕಾರ ಮಾತ್ರವಲ್ಲದೆ, ಕನ್ನಡಿಗರು ಕೂಡ ಗಂಭೀರವಾಗಿ ಪರಿಗಣಿಸುವ ತುರ್ತಿದೆ. ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡದ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನ್ಯಾಯವಾಗುತ್ತಿದೆ. ರಾಜ್ಯದ ಹೊರಭಾಗದ ಗಡಿಯಲ್ಲಿ ಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸಬೇಕು. ಒಳನಾಡಿನಲ್ಲಿ ಹಿಂದಿನ ಸರ್ಕಾರ ಆತುರದ ನಿರ್ಧಾರ ಕೈಗೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದ್ದು, ಅವುಗಳನ್ನು ಪುನರಾರಂಭಿಸಬೇಕು. ಹೊರರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆ ನಿಂತವರು ಕನ್ನಡ ಕಲಿಯಬೇಕು. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು. ಐದನೇ ತರಗತಿಯವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವಂತಾಗಬೇಕು ಎಂದು ಸಮ್ಮೇಳನಾಧ್ಯಕ್ಷರು ಕನ್ನಡ ಕಾಳಜಿಯ ಸಲಹೆಗಳನ್ನು ನೀಡಿದ್ದಾರೆ.
ಕನ್ನಡ ಭಾಷೆಗೆ ಶಾಸನಾತ್ಮಕ ಮಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಬೇಕು. ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು ಎಂದು ಅವರು ಹೇಳಿರುವುದು ಕಾರ್ಯಗತಗೊಳಿಸಬಹುದಾದಂಥವಾಗಿವೆ. ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಶಾಸನಾತ್ಮಕ ಮಾನ್ಯತೆ ದೊರೆಯುವುದು. ಬರುವ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಿ, ರಾಷ್ಟ್ರಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು ಎಂದು ದೊಡ್ಡರಂಗೇಗೌಡರು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕನ್ನಡ ಅಭಿವೃದ್ಧಿಗೆ ಮಸೂದೆ ಮಂಡನೆಗೆ ಮುನ್ನ ವಿಧಾನಸಭೆಯ ಒಳಗೆ ಹಾಗೂ ಹೊರಗಡೆ ಸುದೀರ್ಘ ಚರ್ಚೆ ಆಗಬೇಕು. ಮುಂಬರುವ ಅಧಿವೇಶನದಲ್ಲಿ ಮಸೂದೆ ಅನುಮೋದಿಸಲಾಗುವುದು ಎಂದು ಹೇಳಿದ್ದಾರೆ. ಹಾವೇರಿ ಸಮ್ಮೇಳನವಲ್ಲದೆ, ಬೆಂಗಳೂರಿನ ಪರ್ಯಾಯ ಸಾಹಿತ್ಯ ಸಮ್ಮೇಳನದಲ್ಲಿ ಆಗುವ ಚರ್ಚೆಗಳನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದೂ ಅವರು ಹೇಳಿರುವುದು ಮುಕ್ತ ಹಾಗೂ ಸಕಾರಾತ್ಮಕ ಧೋರಣೆಯ ಪ್ರತೀಕವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಒಡಮೂಡುವ ಮಾತುಗಳು, ಸಲಹೆಗಳನ್ನು ಕಾರ್ಯರೂಪಕ್ಕೆ ತರುವುದು ಸಹ ಮುಖ್ಯವಾಗುತ್ತದೆ. ಕನ್ನಡ ಅಭಿವೃದ್ಧಿ ಮಸೂದೆಯನ್ನು ಸಮಗ್ರವಾಗಿಸಿ ಜಾರಿಗೆ ತರುವುದು ಭಾಷೆ ಮತ್ತು ನಾಡಿನ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗುವ ನಿರೀಕ್ಷೆಯಿದೆ.