ನ್ಯೂಸ್

ಸೂಕ್ತ ಅನುಷ್ಠಾನ ಅಗತ್ಯ: ಪಿಎಂ ಶ್ರೀ ಯೋಜನೆಗೆ ರಾಜ್ಯದ 129 ಸರ್ಕಾರಿ ಶಾಲೆ ಆಯ್ಕೆ

Webdesk - Ravikanth

ಉತ್ತಮ ಭೌತಿಕ ಮೂಲಸೌಕರ್ಯಗಳನ್ನು ಒದಗಿಸುವುದರ ಜತೆಗೆ ಕಲಿಕೆಗೆ ಸೂಕ್ತ ಸಂಪನ್ಮೂಲ ಹಾಗೂ ವಾತಾವರಣ ಸೃಷ್ಟಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ವರ್ಧಿಸುವ ಮಹತ್ವದ ಧ್ಯೇಯೋದ್ದೇಶಗಳುಗಳ್ಳ ಪಿಎಂ ಶ್ರೀ ಯೋಜನೆಯಡಿ ರಾಜ್ಯ 129 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಸಲು ಮುಂದಾಗಿರುವುದು ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ವ್ಯಾಪಕ ಕೊಡುಗೆ ನೀಡುವ ಕ್ರಮವಾಗಬಹುದಾಗಿದೆ. ಸಮಾನ ಹಾಗೂ ಸಂತಸಭರಿತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸದುದ್ದೇಶದ ಈ ಯೋಜನೆಯು ಸೂಕ್ತ ರೀತಿಯಲ್ಲಿ ಜಾರಿಗೊಳ್ಳಬೇಕಾದುದು ಮಹತ್ವದ್ದಾಗಿದೆ. ಈ ಯೋಜನೆಯನ್ನು ಅದರ ಆಶಯಕ್ಕೆ ಅನುಗುಣವಾಗಿ ಅನುಷ್ಠಾನಗೊಳಿಸಿದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿಯಲ್ಲಿ 4 ಲಕ್ಷದಷ್ಟು ಕುಸಿತವಾಗಿರುವುದನ್ನು ತಡೆಗಟ್ಟಲು ಹಾಗೂ ಸರ್ಕಾರಿ ಶಾಲೆಗಳ ಬಗೆಗೆ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಾಧ್ಯವಾಗಬಹುದಾಗಿದೆ.

ಯೋಜನೆಗೆ ಆಯ್ಕೆಯಾಗಿರುವ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಅಭಿವೃದ್ಧಿ ಮಾಡಲಾಗುತ್ತದೆ. ಶಾಲೆಗಳು ಆವಿಷ್ಕಾರ-ಆಧಾರಿತ, ಕಲಿಕೆ-ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಿವೆ. ಸ್ಮಾರ್ಟ್ ತರಗತಿಗಳು, ಕ್ರೀಡೆಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಸಹ ಹೊಂದಲಿವೆ.

ಪ್ರಯೋಗಾಲಯ, ಗ್ರಂಥಾಲಯ ಮತ್ತು ಕಲಾ ಕೊಠಡಿಗಳ ಸೌಲಭ್ಯ ಗಳೊಂದಿಗೆ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಪಠ್ಯಕ್ರಮದ ಭಾಗವಾಗಿ ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಶಕ್ತಿ-ಸಮರ್ಥ ಮೂಲಸೌಕರ್ಯ ಮತ್ತು ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ದೇಶಾದ್ಯಂತ 14,500 ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ 5 ವರ್ಷಗಳ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ಪಿಎಂ ಶ್ರೀ ಯೋಜನೆಯು ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾಗಿರá-ವುದ ರಿಂದ, ಅನುಷ್ಠಾನ ವೆಚ್ಚದ 60 ಪ್ರತಿಶತ ವೆಚ್ಚವನ್ನು ಕೇಂದ್ರವು ಭರಿಸಲಿದ್ದು, ಉಳಿದ 40 ಪ್ರತಿಶತವನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಭರಿಸಲಿವೆ. ಕೆಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆಯನ್ನು ಶೇ. 90ರವರೆಗೆ ನೀಡಲು ಕೂಡ ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಈ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಳ್ಳುವ ಸಂಸ್ಥೆಗಳು ಮಾದರಿ ಶಾಲೆಗಳಾಗುತ್ತವೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಸಾರವನ್ನು ಬಿಂಬಿಸಲಿವೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಅಂದರೆ, ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗ ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಶಾಲೆಗಳು ಪ್ರಯೋಗಶಾಲೆಗಳಾಗಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಅಂಶಗಳನ್ನು ಅನುಷ್ಠಾನಕ್ಕೆ ತಂದು ಅದರ ಸಾಧಕ- ಬಾಧಕಗಳ ಬಗೆಗೆ ಪರಾಮರ್ಶೆಯನ್ನು ನಡೆಸಬಹುದಾಗಿದೆ. ಈ ಮೂಲಕ ಅಗತ್ಯವಿದ್ದರೆ ಮಾರ್ಪಾಡುಗಳನ್ನು ಮೂಲಕ ಇತರ ಶಾಲೆಗಳಿಗೂ ವಿಸ್ತರಿಸುವ ಚಿಂತನೆ ಕೈಗೊಳ್ಳಬಹುದಾಗಿದೆ. ಈ ಯೋಜನೆಯಡಿ ಒದಗಿಸಲಾಗುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಕೇವಲ ಅನುದಾನ ಕೊಟ್ಟರೆ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲಾಗದು. ಉದ್ದೇಶಿತ ಬದಲಾವಣೆಗಳನ್ನು ಅನುಷ್ಠಾನಕ್ಕೆ ತರಲು ಬೋಧಕರನ್ನು ಸಜ್ಜುಗೊಳಿಸುವ ಕೆಲಸ ಕೂಡ ಮಹತ್ವದ್ದಾಗಿದೆ.