ನ್ಯೂಸ್

ಆರ್​ಬಿಐ ಜಾಗರೂಕ ನಡೆ; ಡಿಜಿಟಲ್ ಕರೆನ್ಸಿ ಪ್ರಾಯೋಗಿಕ ಜಾರಿ

Webdesk - Ravikanth

ಭಾರತದ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು, ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ಕಪು್ಪಹಣ ವಹಿವಾಟು ತಡೆಯುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಡಿಜಿಟಲ್ ರೂಪಾಯಿ (ಇ- ರೂಪಾಯಿ) ಜಾರಿಗೆ ತಂದಿದೆ. ಈಗ ಚಲಾವಣೆಗೆ ತಂದಿರುವ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (ಸಿಬಿಡಿಸಿ) ಪ್ರಾಯೋಗಿಕ ರೂಪದ್ದಾಗಿದ್ದು, ಆರಂಭಿಕವಾಗಿ ಸರ್ಕಾರದ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದೆ. ಇದರ ಸಾಧಕ ಬಾಧಕ ಪರಿಶೀಲಿಸಿ ಹಾಗೂ ಇನ್ನಷ್ಟು ಸುಧಾರಣೆಯ ಸಾಧ್ಯತೆಗಳ ಕುರಿತು ಅಧ್ಯಯನ ಕೈಗೊಂಡ ನಂತರವೇ ಪೂರ್ಣಪ್ರಮಾಣದಲ್ಲಿ ಯೋಜನೆ ಜಾರಿಗೆ ಆರ್​ಬಿಐ ಆಲೋಚಿಸಿರುವುದು ಮುನ್ನೆಚ್ಚರಿಕೆಯ ಜಾಗರೂಕ ನಡೆಯಾಗಿದೆ. ಈಗಾಗಲೇ ಭಾರತದಲ್ಲಿ ಹಣದ ವಹಿವಾಟು ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದರೂ ಕರೆನ್ಸಿಗೆ ಡಿಜಿಟಲ್ ರೂಪ ನೀಡುತ್ತಿರುವುದು ಇದೇ ಮೊದಲು.

ನೈಜಿರಿಯಾ ಹಾಗೂ ಆಂಟಿಗುವಾ, ಬರ್ಬುಡಾ ಸೇರಿದಂತೆ ಕೆರೆಬಿಯನ್ ಒಕ್ಕೂಟದ ಏಳು ರಾಷ್ಟ್ರಗಳು ಈಗಾಗಲೇ ಡಿಜಿಟಲ್ ಕರೆನ್ಸಿ ಚಲಾವಣೆ ತಂದಿದ್ದು, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಜಗತ್ತಿನಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿರುವ ಈ ವ್ಯವಸ್ಥೆಯನ್ನು ಅಳೆದುತೂಗಿ ನೋಡುವ ಉದ್ದೇಶದಿಂದ ಆರ್​ಬಿಐ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಭಾರತ ಸರ್ಕಾರವು 2022ರ ಫೆಬ್ರವರಿ 1ರಂದು ಮಂಡಿಸಿದ ಬಜೆಟ್​ನಲ್ಲಿ 2022-23ರ ಆರ್ಥಿಕ ವರ್ಷದ ನಂತರ ಡಿಜಿಟಲ್ ರೂಪಾಯಿ ಜಾರಿಗೆ ತರುವುದಾಗಿ ಘೊಷಿಸಿತ್ತು. ಇತ್ತೀಚಿನ ದಿನಗಳಲ್ಲಿ ನೋಟು ಹಾಗೂ ನಾಣ್ಯದ ಚಲಾವಣೆ ಕಡಿಮೆಯಾಗುತ್ತಿದೆ. ಹಲವು ವರ್ಷಗಳಿಂದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್​ಗಳನ್ನು ಬಳಸಲಾಗುತ್ತಿದೆ. ಈಚೆಗೆ ಹಲವು ಬ್ಯಾಂಕ್​ಗಳು ಒಂದಾಗಿ, ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ಬಳಸಿಕೊಂಡಿರುವ ಫೋನ್-ಪೆ, ಗೂಗಲ್ ಪೆ ಮುಂತಾದವುಗಳ ಮೂಲಕ ವಹಿವಾಟು ವಿಸ್ತರಿಸುತ್ತಿದೆ. ಆರ್​ಬಿಐ ಹಾಗೂ ಭಾರತದ ಬ್ಯಾಂಕ್​ಗಳ ಒಕ್ಕೂಟ ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (ಎನ್​ಪಿಸಿಐ) ಮೂಲಕ ಜಾರಿಗೊಳಿಸಿದ ಯುಪಿಐ ವ್ಯವಸ್ಥೆ ಯಶಸ್ಸನ್ನು ಕಂಡಿದ್ದು, ವಿದೇಶದಲ್ಲಿಯೂ ಬಳಕೆಯಾಗುತ್ತ ಹೆಜ್ಜೆ ಇಟ್ಟಿದೆ.

ಇನ್ನು ನೋಟುಗಳ ಬದಲಾಗಿ ದೊಡ್ಡ ಪ್ರಮಾಣದ ಹಣದ ವಹಿವಾಟುಗಳಲ್ಲಿ ಕ್ರಿಪ್ಟೊಕರೆನ್ಸಿ ಬಳಸುವ ಪ್ರವೃತ್ತಿ ಇತ್ತೀಚಿನ ಹೆಚ್ಚುತ್ತಿದೆ. ಭಾರತದಲ್ಲಿ ಕ್ರಿಪ್ಟೊಕರೆನ್ಸಿಗೆ ಅಧಿಕೃತ ಮಾನ್ಯತೆ ನೀಡಿಲ್ಲ. ಇದೇ ವೇಳೆ ಅದನ್ನು ಅಕ್ರಮ ಎಂದೂ ಘೋಷಿಸಲಾಗಿಲ್ಲ. ಹೀಗಾಗಿ, ಕ್ರಿಪ್ಟೊಕರೆನ್ಸಿಯ ಚಲಾವಣೆ ಎಷ್ಟು ಸುರಕ್ಷಿತ ಎಂಬ ಗೊಂದಲಗಳು ಮುಂದುವರಿದಿವೆ. ಭಾರತದ ಡಿಜಿಟಲ್ ಕರೆನ್ಸಿ ಜಾರಿಗೊಂಡರೆ ಕ್ರಿಪ್ಟೊಕರೆನ್ಸಿಗೆ ಪರ್ಯಾಯವಾಗಬಹುದಾಗಿದ್ದು, ಕಪು್ಪಹಣ ವಹಿವಾಟು ನಿಯಂತ್ರಿಸಲು ಅನುಕೂಲಕರವಾಗಬಹುದಾಗಿದೆ. ‘ಪ್ರಸ್ತುತ ಹಣದ ಸ್ವರೂಪಗಳನ್ನು ಬದಲಿಸದೆ ಹಾಗೂ ಅಸ್ತಿತ್ವದಲ್ಲಿರುವ ಪಾವತಿ ವ್ಯವಸ್ಥೆ ಮಾರ್ಪಾಡು ಮಾಡದೆ ಬಳಕೆದಾರರಿಗೆ ಹೆಚ್ಚುವರಿ ಪಾವತಿ ಮಾರ್ಗವನ್ನು ಒದಗಿಸುವ ಪೂರಕ ವ್ಯವಸ್ಥೆಯನ್ನು ಜಾರಿಗೊಳಿಸುವುದೇ ಸಿಬಿಡಿಸಿ ಗುರಿಯಾಗಿದೆ’ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಪರಿಣಾಮಕಾರಿ ಹಾಗೂ ಸುರಕ್ಷಿತ ಆಗಿರುವ ಭಾರತದ ಅತ್ಯಾಧುನಿಕ ಪಾವತಿ ವ್ಯವಸ್ಥೆಗಳಿಂದ ಬೆಂಬಲಿತವಾಗಿರುವ ಡಿಜಿಟಲ್ ರೂಪಾಯಿ ವ್ಯವಸ್ಥೆ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ನಿರೀಕ್ಷೆಯನ್ನು ಆರ್​ಬಿಐ ಹೊಂದಿದೆ.