ಪ್ರಧಾನಿ ನರೇಂದ್ರ ಮೋದಿ ಅವರು 5 ಜಿ ಸೇವೆಗಳಿಗೆ ಇಂದು ಚಾಲನೆ ನೀಡುತ್ತಿರುವುದು ಮೊಬೈಲ್ಫೋನ್ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಐದನೇ ಪೀಳಿಗೆ ಮೊಬೈಲ್ಫೋನ್ ಜಾಲ ಈ ಮೂಲಕ ಭಾರತದಲ್ಲಿ ಬಳಕೆಗೆ ಬರಲಿದೆ. ಇದು ಸುಧಾರಿತ ತಂತ್ರಜ್ಞಾನವಾಗಿದ್ದು, 4ಜಿಗೆ ಹೋಲಿಸಿದರೆ ಹತ್ತಾರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ. 4 ಜಿ ಗರಿಷ್ಠ ವೇಗವು 1 ಜಿಬಿಪಿಎಸ್ (ಗಿಗಾ ಬೈಟ್ಸ್ ಪರ್ ಸೆಕೆಂಡ್) ಆಗಿದ್ದರೆ, 5 ಜಿ ಗರಿಷ್ಠ ವೇಗವು 20 ಜಿಬಿಪಿಎಸ್ ಇರಲಿದೆ.
ಹೀಗಾಗಿ, ಕ್ಷಣಾರ್ಧದಲ್ಲಿ ವಿಡಿಯೋ, ಫೋಟೋ ಸೇರಿದಂತೆ ದೊಡ್ಡ ಗಾತ್ರ ಫೈಲ್ಗಳ ರವಾನೆಗೆ ಅವಕಾಶ ಲಭಿಸಿ ಡಿಜಿಟಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಾಣಲಿದೆ. 1980ರ ಸುಮಾರಿಗೆ ಜಾಗತಿಕವಾಗಿ ಬಳಕೆಗೆ ಬಂದ 1 ಜಿ ತಂತ್ರಜ್ಞಾನವು ಅನಲಾಗ್ ಧ್ವನಿಯನ್ನು ಒಳಗೊಂಡಿತ್ತು. ನಂತರ ಅಂದಾಜು ಪ್ರತಿ 10 ವರ್ಷಗಳಿಗೊಮ್ಮೆ ಸುಧಾರಿತ ತಂತ್ರಜ್ಞಾನವನ್ನು ಬಳಕೆಗೆ ತರಲಾಗಿದೆ. 1990ರ ಸುಮಾರಿಗೆ 2 ಜಿ ಮೂಲಕ ಡಿಜಿಟಲ್ ಧ್ವನಿ ತಂತ್ರಜ್ಞಾನ; 2000ರಲ್ಲಿ 3 ಜಿ ಮೂಲಕ ಕೇವಲ ಮಾತುಕತೆಯಲ್ಲದೆ, ಮೊಬೈಲ್ ಡಾಟಾ ರವಾನೆಗೂ ಅವಕಾಶ ದೊರೆಯಿತು. 2010ರ ಸುಮಾರಿಗೆ 4 ಜಿ ತಂತ್ರಜ್ಞಾನದ ಜಾಲ ವ್ಯಾಪಿಸುವ ಮೂಲಕ ಸ್ಮಾರ್ಟ್ಫೋನ್ ಯುಗ ಆರಂಭವಾಯಿತು. ಮೊಬೈಲ್ಫೋನ್ ಉಪಕರಣವು ಸಂಭಾಷಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದತ್ತಾಂಶ ಹಂಚಿಕೆಗೆ ಬಳಕೆಯಾಗತೊಡಗಿ, ಇಡೀ ವಿಶ್ವವೇ ಅಂಗೈ ಬೆರಳುಗಳಲ್ಲಿ ನೆಲೆ ನಿಲ್ಲುವಂತಾಯಿತು. ಫೇಸ್ಬುಕ್, ವಾಟ್ಸ್ ಆಪ್, ಟ್ವೀಟರ್ ಮೊದಲಾದ ಸಾಮಾಜಿಕ ಜಾಲತಾಣಗಳ ಬಳಕೆಯಂತೂ ಕಲ್ಪನೆ ಮೀರಿದ ವೇಗದಲ್ಲಿ ಬೆಳೆಯಿತು.
ಭಾರತದಲ್ಲಿ 4 ಜಿ ಜಾಲಕ್ಕೆ ಚಾಲನೆ ದೊರೆತದ್ದು 2012ರ ಎಪ್ರಿಲ್ 10ರಂದು. ಇದಾದ ಸರಿಸುಮಾರು 10 ವರ್ಷಗಳ ನಂತರ 5ನೇ ಪೀಳಿಗೆಯ ಮೊಬೈಲ್ಫೋನ್ ಜಾಲ ಲಭ್ಯವಾಗುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ನಡೆಸಿದ 5 ಜಿ ತರಂಗಾಂತರ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೊತ್ತ ಸಂಗ್ರಹವಾಗಿದೆ. ಹರಾಜಿಗಿಟ್ಟ 72 ಗಿಗಾ ಹರ್ಟ್ಜ್ ತರಂಗಾಂತರಗಳ ಪೈಕಿ 51.2ರಷ್ಟು ಗಿಗಾ ಹರ್ಟ್ಜ್ ತರಂಗಾಂತರಗಳನ್ನು ವಿವಿಧ ಕಂಪನಿಗಳು ಖರೀದಿಸಿವೆ. ಈಗಾಗಲೇ ಈ ತಂತ್ರಜ್ಞಾನಕ್ಕೆ ಅಗತ್ಯವಿರುವ ಫೋನ್ಗಳು ಮಾರುಕಟ್ಟೆ ಪ್ರವೇಶಿಸಿ ಸಾಕಷ್ಟು ಜನರ ಕೈಸೇರಿದ್ದು, ಹೊಸ ತಂತ್ರಜ್ಞಾನ ಬಳಸಲು ಅವರೆಲ್ಲ ಕಾತರರಾಗಿದ್ದಾರೆ.
2023 ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲೆಡೆ 5ಜಿ ಸೇವೆ ಒದಗಿಸುವುದಾಗಿ ಜಿಯೋ ಹಾಗೂ ಏರ್ಟೆಲ್ ಕಂಪನಿಗಳು ಪ್ರಕಟಿಸಿವೆ. ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸ್ವಾಗತಾರ್ಹವೇ. ಆದರೆ, ಮೊಬೈಲ್ಫೋನ್ನ ಮಿತಿಮೀರಿದ ಬಳಕೆಯಿಂದಾಗುವ ಸಾಧಕ-ಬಾಧಕಗಳತ್ತಲೂ ಗಮನ ನೀಡಬೇಕಾಗಿದೆ. ಕೆಲ ಮಕ್ಕಳು, ಯುವಕರು ಮೊಬೈಲ್ ದಾಸರಾಗಿದ್ದು, ಗೇಮ್ ಆಡುವ, ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಹೊರಸೂಸುವ ವಿಕಿರಣವು ಅನಾರೋಗ್ಯಕ್ಕೆ ಕೂಡ ಕಾರಣವಾಗುತ್ತಿದ್ದು, ಇದರ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲವಾದರೂ ಇತಿ-ಮಿತಿಯಲ್ಲಿ ಉಪಯೋಗಿಸುವ ಬಗೆಗೆ ಜಾಗೃತಿ ಮೂಡಿಸುವ ಅಗತ್ಯ ಇದೆ.