ನ್ಯೂಸ್

ಮುಡಾ ಅಕ್ರಮಕ್ಕೆ ಸಾಕ್ಷ್ಯ ನೀಡಿದ ಇಡಿ; ಲೋಕಾಯುಕ್ತಕ್ಕೆ ಸಮಗ್ರ ಮಾಹಿತಿ ಹಂಚಿಕೆ

ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಗರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಾಧಿಕಾರದ 14 ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಪ್ರಕರಣದಲ್ಲಿ ಅಕ್ರಮ ನಡೆದಿರುವುದಕ್ಕೆ ಹಲವು ಪುರಾವೆ ಪತ್ತೆಯಾಗಿರುವುದಾಗಿ ಇಡಿ (ಜಾರಿ ನಿರ್ದೇಶನಾಲಯ) ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಹಂಚಿಕೊಳ್ಳಲಾದ ವರದಿ ಯಲ್ಲಿ - ಮುಡಾದ ಒಟ್ಟು 1,095 ಸೈಟ್​ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿರುವುದಾಗಿ ಇಡಿ ಹೇಳಿದೆ. ಪಾರ್ವತಿ ಅವರಿಗೆ ಮಾಡಲಾದ ಭೂಪರಿವರ್ತನೆಯಲ್ಲಿ ಶಾಸನಬದ್ಧ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಕಚೇರಿ ಕಾರ್ಯ ವಿಧಾನಗಳ ಉಲ್ಲಂಘನೆ, ಅನವಶ್ಯಕ ಒಲವು ತೋರಿರುವುದು, ಪ್ರಭಾವದ ಬಳಕೆ, ಫೋರ್ಜರಿ ಮಾಡಿರುವುದಕ್ಕೆ ಸಾಕ್ಷ್ಯಗಳು ಪತ್ತೆ ಆಗಿದೆ ಎಂದು ಇಡಿ ವಿವರಿಸಿದೆ.

ಸಿಕ್ಕಿತೇ ಪುರಾವೆ?: ಸಿದ್ದರಾಮಯ್ಯ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಮುಡಾದಲ್ಲಿ ಅಕ್ರಮ ಚಟುವಟಿಕೆಗಳು ಪಾರ್ವತಿ ಪ್ರಕರಣದೊಂದಿಗೆ ಮುಗಿದಿಲ್ಲ. ಒಟ್ಟು 1,095 ಸೈಟ್​ಗಳನ್ನು ರೂ. 700 ಕೋಟಿ ರೂ.ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದೊಂದಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂದು ಇಡಿ ಆರೋಪಿಸಿದೆ.

ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಹೆಚ್ಚಿನ ನಿವೇಶನ ಹಂಚಲಾಗಿದೆ. ಆದರೆ, ಈ ಅಕ್ರಮ ಹಂಚಿಕೆಯ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದುಬಂದಿದೆ.

ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿರುವ ಮೈಸೂರಿನ (ವಿಜಯನಗರ ಲೇಔಟ್ ಮೂರು ಮತ್ತು ನಾಲ್ಕನೇ ಹಂತ) ಹೆಚ್ಚಿನ ದರ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಪಾರ್ವತಿ ಅವರಿಗೆ 14 ಪರಿಹಾರ ಸೈಟ್​ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ಲೋಕಾಯುಕ್ತಕ್ಕೆ ಕಳುಹಿಸಲಾದ ಇತ್ತೀಚಿನ ಸಂವಹನ ವರದಿಯಲ್ಲಿ - ಸೈಟ್ ಹಂಚಿಕೆಯಲ್ಲಿ ಶಾಸನಬದ್ಧ ಮಾರ್ಗಸೂಚಿ ಉಲ್ಲಂಘಿಸಿ 14 ಸೈಟ್​ಗಳನ್ನು ಪಾರ್ವತಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಗಮನಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಪಾರ್ವತಿ ಅವರಿಗೆ ಈ ಹಂಚಿಕೆ ಮಾಡಿದಾಗ, ಅವರ ಮಗ ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಮುಡಾ ಮಂಡಳಿಯ ಸದಸ್ಯರಾಗಿದ್ದರು ಎಂದು ಇಡಿ ಹೇಳಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದರು.

ಈ ಭೂಮಿಯ ಡಿ-ನೋಟಿಫಿಕೇಶನ್ ಪ್ರಕ್ರಿಯೆ ಯಾವುದೇ ತರ್ಕ, ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆ ಆಧರಿಸಿಲ್ಲ. ಸಿಎಂ ಸಹಾಯಕ ಎಸ್​ಜಿ ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಮುಡಾ ಕಚೇರಿಯಲ್ಲಿ ವಿನಾಕಾರಣ ತಮ್ಮ ಪ್ರಭಾವ ಬೀರಿದ್ದಾರೆ. ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅವರು ನಕಲಿ ಸಹಿ ಮಾಡಿ ಪ್ರಭಾವ ಬೀರಿದ್ದರು ಎಂದು ಇಡಿ ಪತ್ತೆ ಹಚ್ಚಿದೆ. ಜಮೀನು ಸೈಟ್​ಗಳನ್ನು ತಪ್ಪು ಅಂಶಗಳು ಮತ್ತು ಪ್ರಭಾವ ಬಳಸಿ, ಕಾನೂನುಬಾಹಿರವಾಗಿ ಡಿ-ನೋಟಿಫೈ ಮಾಡಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಅವರು ಜಮೀನನ್ನು ಕೃಷಿ ಭೂಮಿಯಾಗಿ ಖರೀದಿಸಿದರು. ದೇವರಾಜು ಅವರು ಮಲ್ಲಿಕಾರ್ಜುನ ಸ್ವಾಮಿಗೆ ಜಮೀನು ಮಾರಾಟ ಮಾಡುವ ಮುನ್ನ ಮೂಡಾದಿಂದ ಹಂಚಿಕೆ ಮಾಡಲಾಗಿತ್ತು ಎಂದು ಇಡಿ ತಿಳಿಸಿದೆ.

ಈ ಪ್ರಕರಣದಲ್ಲಿ ಶೋಧ ನಡೆಸಿದ್ದ ವೇಳೆ ಹಂಚಿಕೆ ಪತ್ರಗಳನ್ನು ನೀಡಲು ಮುಡಾ ಬಳಸಿದ್ದ ದೊಡ್ಡ ಪ್ರಮಾಣದ (5,000ರಲ್ಲಿ 1,946) ಹೆಚ್ಚಿನ ಭದ್ರತಾ ಬಾಂಡ್ ಪೇಪರ್ ಕಾಣೆಯಾಗಿವೆ. ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಆಪ್ತ ಸಹಾಯಕ ಪ್ರಶಾಂತ್ ರಾಜು ಎಂಬ ವ್ಯಕ್ತಿ (ಹಂಚಿಕೆ ಪತ್ರಗಳ ವಿತರಣೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ) ಈ ಬಾಂಡ್ ಪೇಪರ್​ಗಳನ್ನು ಹಿಂಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ. ಜಿಟಿ ದಿನೇಶ್ ಕುಮಾರ್ ಅವರಿಂದ ಹಂಚಿಕೆ ಪತ್ರಗಳನ್ನು ನೀಡಲು ಈ ಹೈ-ಸೆಕ್ಯುರಿಟಿ ಬಾಂಡ್ ಪೇಪರ್ ಬಳಸಲಾಗಿದೆ ಎಂದು ಇಡಿ ಹೇಳಿದೆ.

ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಾಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಜಮೀನಿನ ಭೂ ಪರಿವರ್ತನೆಗಾಗಿ ಕೈಗೊಂಡಿರುವ ಪ್ರಕ್ರಿಯೆಗಳು ನೆಪಮಾತ್ರಕ್ಕಾಗಿ ನಡೆದಿವೆಯಷ್ಟೇ ಎಂದು ಇಡಿ ಆರೋಪಿಸಿದೆ.

ಸ್ಥಳೀಯ ಪ್ರದೇಶದ ಕಂದಾಯ ಆಡಳಿತಾಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಸರ್ವೆಯರ್, ಕಂದಾಯ ನಿರೀಕ್ಷಕರು, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಸ್ಥಳದಲ್ಲಿ ಮುಡಾದಿಂದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದನ್ನು ನಮೂದಿಸಲು ವಿಫಲರಾಗಿದ್ದಾರೆ ಎಂದು ಇಡಿ ಹೇಳಿದೆ. ಇಲ್ಲಿ ಯಾವುದೇ ಅನಧಿಕೃತ ನಿರ್ಮಾಣ ನಡೆದಿಲ್ಲ ಎಂದು ಅವರು ವರದಿ ಮಾಡಿದ್ದಾರೆ. ಆದರೆ ವಾಸ್ತವ ಹಾಗಿರಲಿಲ್ಲ ಎಂದು ಇಡಿ ತಿಳಿಸಿದೆ. ಭೂಪರಿವರ್ತನೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದರು ಎಂಬುದನ್ನೂ ಗಮನಿಸಬೇಕು ಎಂದು ಇಡಿ ಹೇಳಿದೆ.

ಸಾಕ್ಷ್ಯಾಧಾರ ತಿರುಚಲಾಗಿದೆ: 2014 ಜೂ.14ರಂದು ಪಾರ್ವತಿ ಮುಡಾಕ್ಕೆ ಸಲ್ಲಿಸಿದ ಪರಿಹಾರ ಪತ್ರದಲ್ಲಿ ಯಾವುದೇ ಬದಲಾವಣೆಯ ದೃಢೀಕರಣವಿಲ್ಲದೆ, ವಾಕ್ಯವನ್ನು ಅಳಿಸಲು ವೈಟ್ನರ್ ಲೈನಿಂಗ್ ಬಳಸಿರುವುದು ಕಂಡುಬಂದಿದ್ದರಿಂದ ಸಾಕ್ಷ್ಯಾಧಾರಗಳ ತಿರುಚುವಿಕೆ ಎದ್ದುಕಾಣುತ್ತದೆ. ಪಾರ್ವತಿ ಅವರ ಕಡತದ ಪ್ರಕ್ರಿಯೆಯು ಸಾಮಾನ್ಯ ಕಾರ್ಯವಿಧಾನವನ್ನು ಉಲ್ಲಂಘಿಸಿ ನಡೆಸಲಾಗಿದೆ ಮತ್ತು ಆಗಿನ ಮುಡಾ ಆಯುಕ್ತರು ಹಂಚಿಕೆ ಮಾಡಲು ಸೈಟ್​ಗಳ ಆಯ್ಕೆ ಮಾಡಿದ್ದರು ಎಂದು ಇಡಿ ವಿವರಿಸಿದೆ.

ನಿವೇಶನ ಹಂಚಿಕೆಯ ಪ್ರಸ್ತಾವನೆಯನ್ನು ನಿವೇಶನ ಹಂಚಿಕೆ ವಿಭಾಗ ತಿಳಿಸಲಿಲ್ಲ. ಅದನ್ನು ಮುಡಾದ ಅಂದಿನ ಆಯುಕ್ತ ಡಿ ಬಿ ನಟೇಶ್ ತಮ್ಮ ಸ್ವಂತ ಇಚ್ಛೆಯ ಮೇರೆಗೆ ನೇರವಾಗಿ ಕೈಗೆತ್ತಿಕೊಂಡು ಮುಂದುವರಿದರು. ಇದು ಅನವಶ್ಯಕ ಅನುಕೂಲ ಮಾಡಿಕೊಟ್ಟಿರುವುದನ್ನೇ ಎತ್ತಿಹಿಡಿದಿದೆ ಎಂದು ಇಡಿ ಪ್ರತಿಪಾದಿಸಿದೆ.

ಡಿ-ನೋಟಿಫಿಕೇಶನ್, ಜಮೀನು ಖರೀದಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿ ಪರಿವರ್ತನೆಗಳ ಸಂಪೂರ್ಣ ಪ್ರಕ್ರಿಯೆಯು ಮುಡಾದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಲೇಔಟ್​ನಲ್ಲಿ ಪ್ರಧಾನ ಭೂಮಿಯನ್ನು ಪ್ರಭಾವದಿಂದ ಸ್ವಾಧೀನಪಡಿಸಿಕೊಳ್ಳಲೇ ರೂಪಿಸಲಾಗಿತ್ತು. ಅಲ್ಲದೆ, ನಂತರ ಅದನ್ನು ಪಾರ್ವತಿ ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ಈ ಅಕ್ರಮ ಭೂಮಿಯನ್ನು ಕಳಂಕಿತ ಅಲ್ಲ ಎಂದು ಬಿಂಬಿಸಲಾಯಿತು ಎಂದು ಇಡಿ ವಿವರಿಸಿದೆ.

ಮುಡಾ ಹಗರಣ-ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿಚಾರಣೆ: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ರಾಜೇಂದ್ರ ಚೋಳನ್ ಮಂಗಳವಾರ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸಿದರು. ಶಾಂತಿನಗರದ ಇಡಿ ಕಚೇರಿಗೆ ಹಾಜರಾದ ದೀಪಾ ಅವರಿಂದ ಇಲಾಖೆ ಮೇಲೆ ಬಂದಿರುವ ಕೆಲ ಆರೋಪಗಳ ಬಗ್ಗೆ ಪ್ರಶ್ನಿಸಿ ಹೇಳಿಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಮುಡಾ ಕಚೇರಿಯಲ್ಲಿ ಕೆಲ ದಾಖಲೆ ಪತ್ರಗಳು ಟ್ಯಾಂಪರಿಂಗ್ ಮತ್ತು ದಾಖಲೆಗಳು ಕಳವಾಗಿದ್ದವು. ಈ ಕುರಿತ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿಲ್ಲ. ಆದರಿಂದ ಮತ್ತೆ ವಿಚಾರಣೆಗೆ ಕರೆದರೆ ಬರಬೇಕೆಂದು ಸೂಚಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿಯನ್ನು ಇಡಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇಡಿ ಪುರಾವೆ

  • 1095 ಸೈಟ್​ಗಳು ಅಕ್ರಮ ಹಂಚಿಕೆ
  • ಸಿಎಂ ಪತ್ನಿ ನಿವೇಶನದಲ್ಲೂ ಅಕ್ರಮ
  • ಮಾರ್ಗಸೂಚಿ ಉಲ್ಲಂಘನೆ ಸ್ಪಷ್ಟ
  • ಫೋರ್ಜರಿಗೆ ಸಾಕ್ಷ್ಯ ಇದೆ ಎಂದ ಜಾರಿ ನಿರ್ದೇಶನಾಲಯ