ನ್ಯೂಸ್

ಕವಿತಾಗೆ ಲೋಕಸಭೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಇಡಿ ದಾಳಿ! ಕಾರಣ ಪ್ರಶ್ನಿಸಿದ ಬಿಆರ್​ಎಸ್​

ಮೋಹನ್​ ಶೆಟ್ಟಿ

ಹೈದರಾಬಾದ್: ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂದು (ಮಾರ್ಚ್​ 15) ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಜಾರಾ ಹಿಲ್ಸ್‌ನಲ್ಲಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ.ಕವಿತಾ ಅವರ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, ಶೋಧಗಳು ಚುರುಕಾಗಿ ಸಾಗುತ್ತಿದ್ದು, ದಾಳಿಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಕವಿತಾ ಮತ್ತು ಅವರ ಸಹಚರರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಗರದ ಇತರ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ವರದಿಯಾಗಿದೆ.

ದೆಹಲಿ ಅಬಕಾರಿ ನೀತಿ ಅಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ವಿರುದ್ಧ ಕೆ.ಕವಿತಾ ಅವರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸದ್ಯ ಸುಪ್ರೀಂಕೋರ್ಟ್ ಶುಕ್ರವಾರ ಮಾರ್ಚ್ 19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಸಿಬಿಐನಿಂದ ಸಮನ್ಸ್ ಪಡೆದಿರುವ ಕವಿತಾ ಮುಂಬರುವ ಸಂಸತ್ತಿನ ಚುನಾವಣೆಯ ಕಾರಣ ನೋಟಿಸ್ ಅನ್ನು ಮುಂದೂಡುವಂತೆ ಸಂಸ್ಥೆಗೆ ಮನವಿ ಮಾಡಿದ್ದರು.

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರವರಿ 28ರಂದು ಸುಪ್ರೀಂಕೋರ್ಟ್ ಕವಿತಾಗೆ ನೀಡಲಾದ ರಕ್ಷಣೆಯನ್ನು ಮಾರ್ಚ್ 13ರವರೆಗೆ ವಿಸ್ತರಿಸಿತು. ಹಿಂದಿನ ಸಮನ್ಸ್ ಸಮಯದಲ್ಲಿ, ಕವಿತಾ ಹಿಂದಿನ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಮತ್ತು ಅರುಣ್ ರಾಮಚಂದ್ರ ಪಿಳ್ಳೈ ಅವರ ಹೇಳಿಕೆಗಳನ್ನು ಆಲಿಸಿತ್ತು.

ಇಡಿ ದಾಳಿಯ ಸಮಯವನ್ನು ಬಿಆರ್​​ಎಸ್​ ಪ್ರಶ್ನಿಸಿದೆ: ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಒಂದು ದಿನ ಮುಂಚಿತವಾಗಿ ಬಿಆರ್‌ಎಸ್ ಎಂಎಲ್‌ಸಿ ನಿವಾಸದ ಮೇಲೆ ದಾಳಿ ನಡೆಸಿರುವ ಸಮಯವನ್ನು ಬಿಆರ್‌ಎಸ್ ನಾಯಕ ಕ್ರಿಶಾಂಕ್ ಪ್ರಶ್ನಿಸಿದ್ದಾರೆ. “ಚುನಾವಣೆ ಸಂಹಿತೆಗೆ ಕೇವಲ 24 ಗಂಟೆಗಳ ಮೊದಲು ಕವಿತಾ ಮೇಲೆ ಇಡಿ ರೈಡ್ ಮಾಡಿದ್ದೇಕೆ?" ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).