ನ್ಯೂಸ್

ಚಿನ್ನ ಕಳ್ಳಸಾಗಣೆ ಪ್ರಕರಣ; ರನ್ಯಾ ರಾವ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್​ಐ ಹಾಗೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಟಿ ರನ್ಯಾ ರಾವ್​ (Ranya Rao) ಮನೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇಸಿಐಅರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇಸಿಐಆರ್ ಎಂದರೆ ಎನ್​ಫೋರ್ಸ್​ಮೆಂಟ್ ಕೇಸ್ ಇನ್​ಫಾರ್ಮೇಷನ್ ರಿಪೋರ್ಟ್. ಅಕ್ರಮ ಹಣ ವರ್ಗಾವಣೆ ವಿಚಾರ ತಿಳಿದಿರುವುದರಿಂದ ಈ ಕೇಸ್ ದಾಖಲಾಗಿದೆ.

ನಟಿ ರನ್ಯಾ ರಾವ್ (Ranya Rao) ಅವರ ಫ್ಲ್ಯಾಟ್, ಉದ್ಯಮಿ ತರುಣ್ ರಾಜ್ ಅವರ ಮನೆ, ಆರ್​ಟಿ ನಗರದಲ್ಲಿರುವ ಜ್ಯೋತಿಷಿ ಕಚೇರಿ, ಪೊಲೀಸ್ ಅಧಿಕಾರಿಗಳು ಹಾಗೂ ಕಸ್ಟಮ್ಸ್ ಅಧಿಕಾರಿಗಳ ಮನೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದಾರೆ.

ಗೋಲ್ಡ್​ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.