ನ್ಯೂಸ್

ಸಡಿಲಾಗದ ಇ.ಡಿ. ಹಿಡಿತ; ನಾಳೆಯೂ ರಾಹುಲ್ ಗಾಂಧಿ ವಿಚಾರಣೆ: ಬರ್ತ್​ಡೇ ಸಂಭ್ರಮಕ್ಕೂ ಕುತ್ತು?

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆಯಿಂದ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿದ್ದು, ನಾಳೆಯೂ ವಿಚಾರಣೆಗೆ ಹಾಜರಾಗಲು ಇ.ಡಿ. ಸೂಚನೆ ನೀಡಿದ್ದರಿಂದ, ಸತತ ಮೂರು ದಿನ ವಿಚಾರಣೆ ಎದುರಿಸುವಂತಾಗಿದೆ.

ಇಂದು ಬೆಳಗ್ಗೆಯಿಂದಲೂ ದೆಹಲಿಯಲ್ಲಿರುವ ಇ.ಡಿ. ಹೆಡ್ ಕ್ವಾರ್ಟರ್ಸ್‌ನಲ್ಲಿ ರಾಹುಲ್ ಗಾಂಧಿಯ ವಿಚಾರಣೆ ನಡೆಸಲಾಗಿದ್ದು, ಮಧ್ಯಾಹ್ನದ ಊಟದ ವಿರಾಮದ ಬಳಿಕ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಾಗಿದೆ. ಒಟ್ಟಿನಲ್ಲಿ ಇವತ್ತೊಂದೇ ದಿನ ಹತ್ತು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿದಂತಾಗಿದೆ.

ಇನ್ನು ನಾಳೆಯೂ ವಿಚಾರಣೆ ನಡೆಯಲಿರುವುದರಿಂದ ಸದ್ಯಕ್ಕೆ ರಾಹುಲ್ ಮೇಲೆ ಜಾರಿ ನಿರ್ದೇಶನಾಲಯದ ಹಿಡಿತ ಸಡಿಲಗೊಳ್ಳುವಂತೆ ಕಾಣುತ್ತಿಲ್ಲ. ಜೂ.19ರಂದು ರಾಹುಲ್ ಗಾಂಧಿಯ 52ನೇ ಜನ್ಮದಿನಾಚರಣೆ ಇರಲಿದ್ದು, ಹುಟ್ಟಿದಹಬ್ಬದ ಸಂಭ್ರಮವನ್ನೂ ಇ.ಡಿ. ಮಸಕು ಮಾಡುವುದೇ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡತೊಡಗಿದೆ.