ನ್ಯೂಸ್

ಬಿಹಾರ, ಪಶ್ಚಿಮ ಬಂಗಾಳ ಎರಡೂ ರಾಜ್ಯಗಳ ಮತದಾರ ಪಟ್ಟಿಯಲ್ಲಿ ಹೆಸರು; ಪ್ರಶಾಂತ್ ಕಿಶೋರ್​ಗೆ ನೋಟಿಸ್ ನೀಡಿದ ಚುನವಣಾ ಆಯೋಗ| Prashant Kishor

ನವದೆಹಲಿ: ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡೂ ರಾಜ್ಯಗಳ ಮತದಾರ ಪಟ್ಟಿಯಲ್ಲಿ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್(Prashant Kishor) ಹೆಸರಿರುವ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಈ ಬಗ್ಗೆ ವಿವರಣೆ ನೀಡುವಂತೆ ಅವರಿಗೆ ಭಾರತೀಯ ಚುನಾವಣಾ ಆಯೋಗ ಮಂಗಳವಾರ(ಅ. 28) ನೋಟಿಸ್ ನೀಡಿದೆ.

ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾ ಸಂಸದೀಯ ಕ್ಷೇತ್ರದ ಮಣಿಕ್ತಲಾ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 621 ರ ಮತದಾರರ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯನ್ನು ಉಲ್ಲೇಖಿಸಿ ಆಯೋಗ ವಿವರಣೆ ಕೇಳಿದೆ.

ಚುನಾವಣೆಯಲ್ಲಿ ಆಯೋಗ ನೀಡಿದ ನೋಟಿಸ್​ನಲ್ಲಿ, ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 17 ರ ಪ್ರಕಾರ, ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಾರದು. ಈ ನಿಬಂಧನೆಯ ಉಲ್ಲಂಘನೆಯು ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 31ರ ಅಡಿಯಲ್ಲಿ ದಂಡದ ಕ್ರಮಕ್ಕೆ ಗುರಿಯಾಗುತ್ತದೆ, ಇದು ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುತ್ತದೆ ಎಂದು ಹೇಳಿದ್ದು,  ದಯವಿಟ್ಟು ಮೂರು ದಿನಗಳಲ್ಲಿ ನಿಮ್ಮ ವಿವರಣೆಯನ್ನು ನೀಡಿ ಎಂದು ಹೇಳಿದೆ.

2021ರ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪ್ರಚಾರ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಅವರು ಬಂಗಾಳದಲ್ಲಿ ಕೆಲಸ ಮಾಡಿದ್ದರು. ಅವರ ವಿಳಾಸವನ್ನು 121 ಕಾಲಿಘಾಟ್ ರಸ್ತೆ ಎಂದು ಪಟ್ಟಿ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದು ಸಿಎಂ ಬ್ಯಾನರ್ಜಿ ಅವರ ಭಭಾನಿಪುರ ಕ್ಷೇತ್ರದಲ್ಲಿದೆ, ಅಲ್ಲಿಯೇ ಟಿಎಂಸಿ ಮುಖ್ಯ ಕಚೇರಿ ಇದೆ. (ಏಜೆನ್ಸೀಸ್)