ನ್ಯೂಸ್

ಮಿಡತೆ ತಿಂದರೆ ಕರೊನಾ ದೂರಾಗುತ್ತಂತೆ; ಸಂಸದ ಕೊಟ್ಟ ಸೂಪರ್​ ಐಡಿಯಾ...!

ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ ಘೋಷಣೆಗೂ ಮುನ್ನ ಕರ್ನಾಟಕದ ವಿಧಾನ ಮಂಡಲ ಕಲಾಪದಲ್ಲಿ 'ಅಲ್ಕೋಹಾಲ್​ ಕುಡಿದರೆ ಕರೊನಾ ನಿವಾರಣೆಯಾಗುತ್ತೆ' ಎಂಬ ಬಗ್ಗೆ ಭಾರಿ ಚರ್ಚೆಗಳಾಗಿದ್ದವು. ಈಗ ಇಂಥದ್ದೇ ಚರ್ಚೆ ಪಾಕಿಸ್ತಾನದ ಸಂಸತ್​ನಲ್ಲೂ ಚರ್ಚೆಯಾಗಿ ಭಾರಿ ವೈರಲ್​ ಆಗಿದೆ. ಆದರೆ, ಅಲ್ಲಿ ಅಲ್ಕೋಹಾಲ್​ ಬದಲು ಮಿಡತೆ ಬಗ್ಗೆ ಚರ್ಚೆ ನಡೆದಿದೆ.

ಮಿಡತೆ ತಿಂದರೆ ಕರೊನಾ ಗುಣವಾಗುತ್ತೆ. ಕರೊನಾ ಇಲ್ಲದವರೂ ಮಿಡತೆ ತಿಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಪಾಕಿಸ್ತಾನದ ಸಂಸದ ರಿಯಾಜ್​ ಪಠ್ಯಾಣಾ ವಾದವಾಗಿದೆ. ಈ ವಾದವನ್ನವರು ವೈಯಕ್ತಿಕವಾಗಿ ಮಾಡಿಲ್ಲ. ಅತ್ಯಂತ ಗಂಭೀರ ವಿಷಯಗಳು ಚರ್ಚೆಯಾಗುವ ಸಂಸತ್​ ಸದನದಲ್ಲಿಯೇ ಮಾಡಿದ್ದಾರೆ.

ಕಲಾಪದಲ್ಲಿ ಮಾತನಾಡಿದ ರಿಯಾಜ್​, ಮಿಡತೆ ತಿಂದರೆ ಕರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಇದನ್ನು ಪಾಕಿಸ್ತಾನದ ಜನರು ತಿನ್ನುವುದರಿಂದ ಎರಡು ಲಾಭಗಳಿವೆ. ಒಂದು ಕರೊನಾವನ್ನು ದೂರವಿಡಬಹುದು ಹಾಗೂ ದೇಶವನ್ನು ಆಗಾಗ ಕಾಡುವ ಮಿಡತೆಗಳ ಹಾವಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದಷ್ಟೇ ಅಲ್ಲ, ಈ ವಿಚಾರವಾಗಿ ಸಂಶೋಧನೆ ನಡೆಸಬೇಕೆಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಒತ್ತಾಯ ಮಾಡಬೇಕೆಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್​ ಆಗಿದೆ.

ಕೆಲ ದಿನಗಳ ಹಿಂದಷ್ಟೇ ಮತ್ತೊಬ್ಬ ಸಂಸದ ನಾವು ಮಲಗಿದ್ದರೆ ಕರೊನಾ ಕೂಡ ಮಲಗಿರುತ್ತೆ. ನಮಗೆ ತೊಂದರೆ ಕೊಡುವುದಿಲ್ಲ ಎಂಬ ಸಲಹೆ ನೀಡಿದ್ದ. ಕೆಲವರು ಮಿಡತೆ ಪಾಕಿಸ್ತಾನದ ಆಹಾರವಾಗಬಹುದು ಎಂದು ಕಾಲೆಳೆದಿದ್ದರೆ, ಸಂಸತ್​ ನಮ್ಮ ಮನರಂಜನೆಗೆ ಎಂದೂ ಮೋಸ ಮಾಡಲ್ಲ ಎಂದಿದ್ದಾರೆ.