ನ್ಯೂಸ್

ದೆಹಲಿ-ಎನ್​ಸಿಆರ್​ನಲ್ಲಿ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿ ಬಂದ ಜನರು! Earthquake

Earthquake : ದೆಹಲಿ ಮತ್ತು ಎನ್​ಸಿಆರ್ (ರಾಷ್ಟ್ರ ರಾಜಧಾನಿ​ ಪ್ರದೇಶ)ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಇಂದು (ಜುಲೈ 10) ಬೆಳಗ್ಗೆ 9.04 ರ ಸುಮಾರಿಗೆ ಒಂದು ನಿಮಿಷ ಕಾಲ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹರಿಯಾಣದ ಜಜ್ಜರ್​ನ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಸುಮಾರು 4.1 ತೀವ್ರತೆಯ ಭೂಕಂಪನ ಸಂಭವಿಸಿದೆ.

ರಾಷ್ಟ್ರ ರಾಜಧಾನಿ ಪ್ರದೇಶದ ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿ ಭೂಮಿ ಕಂಪಿಸಿದೆ. ಮನೆಯಲ್ಲಿನ ಫ್ಯಾನ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ತೂಗಾಡಲು ಪ್ರಾರಂಭಿಸಿದ ನಂತರ ನಿವಾಸಿಗಳು ಭಯದಿಂದಲೇ ತಮ್ಮ ಮನೆಗಳನ್ನು ಬಿಟ್ಟು ಹೊರಗಡೆ ಓಡಿ ಬಂದಿದ್ದಾರೆ.

ನೋಯ್ಡಾ ಮತ್ತು ಗುರುಗ್ರಾಮ್‌ನ ಕಚೇರಿ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದ್ದು, ಕಂಪ್ಯೂಟರ್​ಗಳು ನಡುಗಿದವು ಎಂದು ಉದ್ಯೋಗಿಗಳು ಅನುಭವ ಹಂಚಿಕೊಂಡಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಮೀರತ್ ಮತ್ತು ಶಾಮ್ಲಿಯವರೆಗೂ ಕಂಪನದ ಅನುಭವವಾಗಿದ್ದು, ಇದು ಜಜ್ಜರ್‌ನ ಭೂಕಂಪನ ಕೇಂದ್ರಬಿಂದುದಿಂದ ಸುಮಾರು 200 ಕಿ.ಮೀ ದೂರದಲ್ಲಿದೆ.