ನ್ಯೂಸ್

ಪ್ರಧಾನಮಂತ್ರಿ ಕಿಸಾನ್ ಪರಿಹಾರಕ್ಕೆ ಇ-ಕೆವೈಸಿ ಕಡ್ಡಾಯ: ತಪ್ಪಿದರೆ ಆರ್ಥಿಕ ನೆರವು ಕಡಿತ; ಮಾರ್ಚ್ ಅಂತ್ಯದವರೆಗೆ ಗಡುವು..

| ಕೆ.ಎನ್.ರಾಘವೇಂದ್ರ ಮಂಡ್ಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಬೇಕಾದಲ್ಲಿ ರೈತರಿನ್ನು ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇದಕ್ಕಾಗಿ ಮಾರ್ಚ್ 31ರವರೆಗೆ ಗಡುವು ನಿಗದಿಪಡಿಸಲಾಗಿದ್ದು, ಸೂಚನೆ ಪಾಲಿಸದಿದ್ದರೆ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ನೆರವು ನೀಡಲು ನೈಜ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೇಂದ್ರ ಈ ಹೊಸ ಆದೇಶ ಹೊರಡಿಸಿದೆ.

ಯೋಜನೆಗೆ ನೋಂದಣಿಯಾಗಿದ್ದವರ ಪೈಕಿ 2,40,828 ರೈತರನ್ನು ದಾಖಲಾತಿ ಸಮಸ್ಯೆ, ಸಂಶಯಾತ್ಮಕ ಪ್ರಕರಣ ಹಾಗೂ ತಾಂತ್ರಿಕ ತೊಂದರೆಯಿಂದ ಅನರ್ಹಗೊಳಿಸಿದ ಪರಿಣಾಮ ಪರಿಹಾರಕ್ಕೆ ಆಯ್ಕೆ ಮಾಡಿಲ್ಲ. ಉಳಿದಂತೆ 55,96,152 ರೈತರಿಗೆ ವರ್ಷಕ್ಕೆ ಮೂರು ಕಂತು ಅಂದರೆ ಒಟ್ಟು ಆರು ಸಾವಿರ ರೂ. ಪರಿಹಾರ ಅಥವಾ ಆರ್ಥಿಕ ನೆರವು ಸಿಕ್ಕಿದೆ.

ಇ-ಕೆವೈಸಿ ಲಾಭವೇನು?: ಇ-ಕೆವೈಸಿ ಮಾಡಿಕೊಂಡರೆ ಅರ್ಹ ರೈತರ ಖಚಿತ ಮಾಹಿತಿ ಲಭ್ಯವಾಗಲಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಬೇಕಿದೆ. ಒಂದೇ ಕುಟುಂಬದ ಹಲವರ ಹೆಸರಿನಲ್ಲಿ ಆರ್​ಟಿಸಿ ಇದ್ದ ಕಾರಣ ಎರಡು ಅಥವಾ ಮೂರು ಜನರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಆಧಾರ್ ಲಿಂಕ್ ಮಾಡುವುದರಿಂದ ಕುಟುಂಬದ ಮಾಹಿತಿ ಲಭ್ಯವಾಗುವುದರಿಂದ ಎಷ್ಟೇ ಜನರ ಹೆಸರಿನಲ್ಲಿ ಆರ್​ಟಿಸಿಗಳಿದ್ದರೂ ಒಬ್ಬರಿಗಷ್ಟೇ ನೆರವು ಸಿಗಲಿದೆ. ಐಟಿ ಕಟ್ಟುತ್ತಿರುವವರ ಮಾಹಿತಿಯೂ ಲಭ್ಯವಾಗಲಿದೆ.

ಇ-ಕೆವೈಸಿ ಪ್ರಕ್ರಿಯೆ ಹೇಗೆ?: ರೈತರೇ ಮಾಹಿತಿ ಅಪ್​ಲೋಡ್ ಮಾಡಲು ಇ-ಕೆವೈಸಿಯಲ್ಲಿ ಅವಕಾಶವಿದೆ. ಇದಲ್ಲದೆ ನಾಗರಿಕ ಸೇವಾ ಕೇಂದ್ರದ ಮೂಲಕವೂ ಸಲ್ಲಿಸಬಹುದು. ರೈತರೇ ಮಾಡಿಕೊಳ್ಳುವುದಾದರೆ http://pmkisan.gov.in ಪೋರ್ಟಲ್​ನ Farmers Cornerನ e-KYC ಮೂಲಕ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್​ನಲ್ಲಿರುವ ಮೊಬೈಲ್ ಸಂಖ್ಯೆ ದಾಖಲಿಸಬೇಕು. ನಂತರ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ಸಂಖ್ಯೆ ದಾಖಲಿಸಿ SUBMIT FOR AUTH ಎಂಬ ಬಟನ್ ಒತ್ತಬೇಕು. ಆಗ ಪರಿಶೀಲನೆ ನಡೆದು e-KYC Is Successfully submitted ಎಂಬ ವಾಕ್ಯ ಕಾಣಿಸುತ್ತದೆ. ಇನ್ನು ಯಾವ ಫಲಾನುಭವಿ ಮೊಬೈಲ್ ಸಂಖ್ಯೆ , ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಇ-ಕೆವೈಸಿ ಕಳುಹಿಸಿದ ಒಟಿಪಿ ಸ್ವೀಕೃತವಾಗುವುದಿಲ್ಲವೋ ಅವರು ನಾಗರಿಕ ಸೇವಾ ಕೇಂದ್ರ(ಸಿಎಸ್​ಸಿ)ದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಕೈ ಬೆರಳಿನ ಗುರುತು ಆಧಾರದಲ್ಲಿ ಮಾಡಲಾಗುತ್ತದೆ. ಈ ವಿಚಾರದಲ್ಲಿ ಗೊಂದಲವಿದ್ದರೂ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂರ್ಪಸಬಹುದು. ಮಾ. 31ರೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ಫಲಾನುಭವಿಗಳಿಗೆ ಮುಂದಿನ ಚಾತುರ್ವಸಿಕ (2022 ಏಪ್ರಿಲ್​-ಜುಲೈ) ಆರ್ಥಿಕ ನೆರವು ಸಿಗುವುದಿಲ್ಲ.