ನ್ಯೂಸ್

'ಡಂಕಿ' ಧಮಾಕ: ಬಾಲಿವುಡ್​ನಲ್ಲಿ ಶಾರುಖ್-ಹಿರಾನಿ​ ಕಾಂಬಿನೇಷನ್ ಮಾಡಿತು​ ಕಮಾಲ್!

ಮೋಹನ್​ ಶೆಟ್ಟಿ

ಮುಂಬೈ: ಬಾಲಿವುಡ್ ಬಾದ್ ಷಾ ಶಾರುಖ್​ ಖಾನ್​ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 11 ದಿನ ಕಳೆದಿದ್ದು, ಇದೀಗ ಬಾಕ್ಸ್ ಆಫೀಸ್​ನಲ್ಲಿ ಒಟ್ಟು 380 ಕೋಟಿ ರೂ. ಗಳಿಕೆ ಕಂಡಿದೆ. ಡಿಸೆಂಬರ್​ 21ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಕ್ಲಾಸ್​ ಸಿನಿಮಾ ಆದ್ದರಿಂದ ಮಂದಗತಿಯಲ್ಲಿ ಕಲೆಕ್ಷನ್​ ಮಾಡಿದೆ. ಕೇವಲ ಭಾರತದಲ್ಲಿಯೇ ಚಿತ್ರವು 150 ಕೋಟಿ ರೂ. ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಶಾರುಖ್ ಅಭಿನಯದ ಈ ಹಿಂದಿನ ಸಿನಿಮಾಗಳಾದ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ 'ಡಂಕಿ' ಕೂಡ ಸೇರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ರಿಲೀಸ್ ಆದ ಮೊದಲ ದಿನವೇ 29 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಹಂತ ಹಂತವಾಗಿ ಉತ್ತಮ ಮೊತ್ತವನ್ನೇ ತನ್ನದಾಗಿಸಿಕೊಂಡಿದೆ.

ಚಿತ್ರದಲ್ಲಿ ಶಾರುಖ್​​ ಖಾನ್​, ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ. ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ ಮೂಲಕ ತೋರಿಸಿದ್ದಾರೆ.

'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.