ಚೆನ್ನೈ: ಕುಡಿದ ಮತ್ತಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಆರು ಮಹಿಳೆಯ ಮೇಲೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಿದ್ದಾರೆ. ಆರು ಮಹಿಳೆಯರು ಕೂಡ ಚೆನ್ನೈನ ಕನ್ನಗಿ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.
ಈ ಘಟನೆ ಸೋಮವಾರ ನಡೆದಿದ್ದು, ಮಹಿಳೆಯರೆಲ್ಲರು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ಎಲ್ಲರು ಮದ್ಯ ಸೇವನೆ ಮಾಡಿದರು. ಇದೇ ಮತ್ತಿನಲ್ಲಿ ಜನನಿಬಿಡ ರಸ್ತೆ ಪ್ರವೇಶಿಸಿದ ಮಹಿಳೆಯರು ಮತ್ತಿನಲ್ಲಿ ಸಾರ್ವಜನಿಕವಾಗಿಯೇ ಗದ್ದಲ ಸೃಷ್ಟಿಸಿದರು. ವಾಹನಗಳಿಗೆ ಅಡ್ಡ ಹಾಕಿ ಸಂಚಾರಕ್ಕೆ ಅಡ್ಡಿಪಸಿದರು.
ಇದೇ ಸಂದರ್ಭದಲ್ಲಿ ಸಂಬಳ ಹಂಚಿಕೆ ವಿಚಾರವಾಗಿ ಮಹಿಳೆಯರ ನಡುವೆ ವಾಗ್ವಾದ ಕೂಡ ನಡೆಯಿತು. ಅಲ್ಲದೆ, ಘರ್ಷಣೆಗೂ ಕಾರಣವಾಯಿತು. ಆರೋಪಿಗಳು ಬಸ್ ಸೇರಿದಂತೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದರು. ಇವರ ವರ್ತನೆ ನೋಡಿ ಬೇಸತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಚಾರ ತಡೆ ಮತ್ತು ಗಲಾಟೆ ಮಾಡಿದ್ದಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದೆಡೆ ಮಹಿಳೆಯರ ಹೈಡ್ರಾಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್)