ನ್ಯೂಸ್

VIDEO | ಕುಡಿದ ಮತ್ತಿನಲ್ಲಿ ಹೆಬ್ಬಾವು ಹಿಡಿದು ಫೋಟೋ ಕೇಳಿದ ವ್ಯಕ್ತಿ; ಮುಂದೇನಾಯ್ತು? ಈ ವಿಡಿಯೋ ನೋಡಿ

ಮೋಹನ್​ ಶೆಟ್ಟಿ

ತಿರುವನಂತಪುರಂ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹೊತ್ತೊಯ್ಯುವಾಗ ರಸ್ತೆಯ ಪಕ್ಕದಲ್ಲಿದ್ದ ಪೆಟ್ರೋಲ್ ಪಂಪ್‌ ಬಳಿ ಬಂದಿದ್ದಾನೆ. ಅಲ್ಲಿದ್ದ ಸಿಬ್ಬಂದಿಗಳ ಬಳಿ ಬಂದು ಫೋಟೋ ತೆಗೆಯುವಂತೆ ಮನವಿ ಮಾಡಿದ್ದಾನೆ. ವ್ಯಕ್ತಿಯ ಹುಚ್ಚಾಟಕ್ಕೆ ಮೊದ ಮೊದಲು ಹೆಚ್ಚು ಸ್ಪಂದಿಸಿದ ಹುಡುಗರು, ತದನಂತರ ಹೆಬ್ಬಾವು ಆತನ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಾಗ ಬಿಡಿಸಲು ಕೂಡಲೇ ಮುಂದಾದ ಘಟನೆ ತಿರುವನಂತಪುರಂನ ಕಣ್ಣೂರಿನಲ್ಲಿ ವರದಿಯಾಗಿದೆ.

ಘಟನೆಯ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯನ್ನು ಚಂದ್ರನ್ ಎಂದು ಗುರುತಿಸಲಾಗಿದೆ. "ಮದ್ಯಪಾನ ಮಾಡಿದ್ದ ವ್ಯಕ್ತಿ, ಹೆಬ್ಬಾವನ್ನು ಕೈಯಲ್ಲಿಡಿದು ವಳಪಟ್ಟಣ ಪೆಟ್ರೋಲ್ ಪಂಪ್‌ ಸಿಬ್ಬಂದಿಗಳ ಬಳಿ ಬಂದು ಫೋಟೋ ತೆಗೆದುಕೊಡುವಂತೆ ಕೇಳಿದರು. ಹೆಬ್ಬಾವಿನೊಂದಿಗೆ ಫೋಟೋ ಕ್ಲಿಕ್ ಮಾಡಬೇಕೆಂದು ಅವರು ಒತ್ತಾಯಿಸಿದರು" ಎಂದು ಅಭಿಷೇಕ್ ಹೇಳಿದ್ದಾರೆ.

"ಹೆಬ್ಬಾವು ತನ್ನ ಕುತ್ತಿಗೆಯ ಮೇಲೆ ಇರುವ ದೃಶ್ಯವನ್ನು ನಾವು ಕ್ಲಿಕ್ ಮಾಡಬೇಕೆಂದು ಆತ ಕೇಳಿದರು. ಕುಡಿದಿದ್ದರಿಂದ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇರಲಿಲ್ಲ. ನೋಡ ನೋಡುತ್ತಿದ್ದಂತೆ ಹೆಬ್ಬಾವು ಅವರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಿತು. ಉಸಿರುಗಟ್ಟಿದ ಕೂಡಲೇ ವ್ಯಕ್ತಿ ನೆಲಕ್ಕೆ ಕುಸಿದು ಬಿದ್ದರು" ಎಂದು ಅಭಿಷೇಕ್ ಹೇಳಿದರು.

"ನಾನು ಯಾವತ್ತೂ ಹಾವನ್ನು ಹತ್ತಿರದಿಂದ ಕಂಡಿರಲಿಲ್ಲ. ಆದರೆ ಚಂದ್ರನ್ ಬಿಡಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ನೋಡಿ ಭಯವಾಯಿತು. ವ್ಯಕ್ತಿ ಜೀವ ಉಳಿಸಬೇಕು ಎಂದು ಕೂಡಲೇ ಹೆಬ್ಬಾವಿನ ಬಾಲವನ್ನು ಗಟ್ಟಿಯಾಗಿ ಎಳೆದೆ. ತಕ್ಷಣ ಅದು ತನ್ನ ಬಿಗಿಯನ್ನು ಸಡಿಲಗೊಳಿಸಿತು" ಎಂದು ಅಭಿಷೇಕ್​ ಹೇಳಿದರು. ಈ ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್).