ಮಡಿಕೇರಿ: ರಾಜ್ಯದ ಎಲ್ಲೆಡೆ ಡ್ರಗ್ಸ್ ಮಾಫಿಯಾದ್ದೇ ಸುದ್ದಿ. ಸ್ಯಾಂಡಲ್ವುಡ್ ನಟ-ನಟಿಯರು-ಮ್ಯೂಸಿಷಿಯನ್ಸ್ಗಳ ಡ್ರಗ್ಸ್ ವ್ಯಸನದ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರೋರಾತ್ರಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ತಂಡವನ್ನ ಕೊಡಗು ಜಿಲ್ಲಾ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಅಯ್ಯಂಗೇರಿ ಗ್ರಾಮದ ಮಜೀದ್ ಸೂಫಿ (35), ಶಿಯಾಬುದ್ದೀನ್ (32) ಮತ್ತು ಬೆಂಗಳೂರಿನ ಶಿವಾಜಿನಗರದ ಮುಜಾಮಿಲ್ (31) ಬಂಧಿತರು. ಜಿಲ್ಲೆಯ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ಇವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ.27ರ ರಾತ್ರಿ ಮಡಿಕೇರಿ ನಗರದ ಲಾಡ್ಜ್ ವೊಂದರ ಮುಂಭಾಗ ಈ ಮೂವರು ಆರೋಪಿಗಳ ಗ್ಯಾಂಗ್ ಡ್ರಗ್ಸ್ ಸಪ್ಲೈ ಮಾಡೋ ವಿಷ್ಯ ತಿಳಿದು ಮಡಿಕೇರಿ ನಗರದ ಠಾಣೆ, ಡಿಸಿಐಬಿ ಪೊಲೀಸರ ಟೀಂ ದಾಳಿ ಮಾಡಿತ್ತು. ಈ ವೇಳೆ ಸ್ಥಳದಿಂದ ಕಾಲ್ಕಿತ್ತ ಮೂವರನ್ನ ಸಿನಿಮಾ ಶೈಲಿಯಲ್ಲಿ ಕುಶಾಲನಗರದ ಗುಡ್ಡೆ ಹೊಸೂರು ಬಳಿ ಬಂಧಿಸಲಾಯಿತು. ಮತ್ತೊಂದು ಕಾರಿನಲ್ಲಿ ಇದ್ದ ಐವರು ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗಿರೋ ಐವರಲ್ಲಿ ಇಬ್ಬರು ವಿದೇಶಿಗರು ಇದ್ದರು ಎಂಬ ಮಾಹಿತಿ ಗೊತ್ತಾಗಿದೆ.
ಬಂಧಿತರಿಂದ 300 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಟಾಟಾ ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ಇತರ ಐವರು ಆರೋಪಿಗಳು ತಪ್ಪಿಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.