ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಭಾರಿ ಪ್ರಮಾಣದ ಮಾದಕವಸ್ತು (Drugs) ಕಳ್ಳಸಾಗಣೆಯ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ದೆಹಲಿಯಲ್ಲಿ 5600 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಪತ್ತೆ, ಭೋಪಾಲ್ನಲ್ಲಿ ಡ್ರಗ್ಸ್ ತಯಾರಿಕೆ ಕಾರ್ಖಾನೆ ಪತ್ತೆ, 1800 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, ಗುಜರಾತ್ನ ಕಛ್ನಲ್ಲಿ 120 ಕೋಟಿ ರೂ.ನ ಕೊಕೇನ್ ವಶ... ಹೀಗೆ ಪ್ರತಿದಿನವೆಂಬಂತೆ ಪ್ರಕರಣಗಳು ವರದಿಯಾಗುತ್ತಿವೆ. ಡ್ರಗ್ಸ್ ಬಳಕೆದಾರರೂ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದ್ದಾರೆ ಎಂಬುದು ಇದರ ಅರ್ಥ.
ಡ್ರಗ್ಸ್ ಹಾವಳಿಗೆ ಕರ್ನಾಟಕವೂ ಹೊರತಲ್ಲ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಇದರ ಪಿಡುಗು ಮೇರೆ ಮೀರಿದೆ. ಇದರ ಸಾಗಾಣಿಕೆ, ಮಾರಾಟ, ಬಳಕೆ ಬಗ್ಗೆ ಪೊಲೀಸರಿಗೆ ಗೊತ್ತಿಲ್ಲವೆಂದೇನಿಲ್ಲ. ಎಷ್ಟೋ ಕಡೆ ಹಿರಿಯ ಪೊಲೀಸ್ ಅಧಿಕಾರಿಗಳ ನೆರಳಿನಲ್ಲೇ ಈ ಕಪ್ಪುವ್ಯವಹಾರ ರಾಜಾರೋಷವಾಗಿ ಸಾಗಿದೆ. ಇದಕ್ಕೆಲ್ಲ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಬೇಕಾಗಿದೆ. ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಸಕ್ರಿಯವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲಿನ ಮಾದಕವಸ್ತುಗಳ ಜಾಲದಲ್ಲಿ ಶೇಕಡ 40ರಷ್ಟು ವಿದೇಶಿಯರ ಪಾತ್ರ ಇದೆ. ಹೊಸಹೊಸ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕಾನೂನುಬಾಹಿರ ಕೃತ್ಯಗಳಿಗೆ ಬಳಸುವ ಡಾರ್ಕ್ವೆಬ್ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಭಾರತಕ್ಕೆ ಆಮದಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.
ಈಚಿನ ಸಮಯದಲ್ಲೇ ಪಂಜಾಬಿನ ನಿದರ್ಶನ ನಮ್ಮ ಕಣ್ಮುಂದೆ ಇದೆ. ಅಲ್ಲಿ ಉಗ್ರ ಹಾವಳಿಯನ್ನು ಮಟ್ಟಹಾಕಿದ ನಂತರ ಪಾಕಿಸ್ತಾನವು ಮಾದಕವಸ್ತುಗಳ ಪರೋಕ್ಷ ಯುದ್ಧವನ್ನು ನಡೆಸತೊಡಗಿ ಅಪಾರ ಹಾನಿಯುಂಟುಮಾಡಿತು. ಯುವಜನರು ಒಮ್ಮೆ ಇಂಥ ಚಟಕ್ಕೆ ದಾಸರಾದರೆ ಬಿಡುವುದು ಕಷ್ಟ ಹಾಗೂ ಅದರಿಂದ ಕೌಟುಂಬಿಕ, ಸಾಮಾಜಿಕವಾಗಿ ಅನೇಕ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಆರಂಭದಲ್ಲೇ ಈ ಪಿಡುಗನ್ನು ನಿಯಂತ್ರಿಸಬೇಕಾದುದು ಅನಿವಾರ್ಯ.
ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ. ಹೊರದೇಶಗಳಿಂದ ಭಾರತದೊಳಕ್ಕೆ ಡ್ರಗ್ಸ್ ಸಾಗಣೆಯಾಗುವ ಮಾರ್ಗಗಳನ್ನು ಶಾಶ್ವತವಾಗಿ ಮುಚ್ಚಬೇಕಾಗಿದೆ. ಇದು ಜಾಗತಿಕ ಮಟ್ಟದ ಸಮಸ್ಯೆ ಆಗಿರುವುದರಿಂದ ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕವೂ ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಈ ಹೋರಾಟದಲ್ಲಿ ಸರ್ಕಾರದ ಜತೆ ಸಮಾಜದ ಸಹಭಾಗಿತ್ವ ಕೂಡ ಅಷ್ಟೇ ಮುಖ್ಯ. ಸಮಾಜ ಹಾಗೂ ಜನರ ಬೆಂಬಲ ಮತ್ತು ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಈ ಸಮಸ್ಯೆಗೆ ಪರಿಹಾರ ಕಷ್ಟ.