ನ್ಯೂಸ್

ಡ್ರಗ್ಸ್​ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ತಮಿಳು ನಟರಾದ ಶ್ರೀಕಾಂತ್, ಕೃಷ್ಣಾಗೆ ಸಮನ್ಸ್ ನೀಡಿದ ಇಡಿ​| ED Summons

ಚೆನ್ನೈ: ಗ್ರೇಟರ್ ಚೆನ್ನೈ ಪೊಲೀಸರು ದಾಖಲಿಸಿರುವ ಡ್ರಗ್ಸ್​​ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ಭಾಗವಾಗಿ ತಮಿಳು ಸಿನಿಮಾ ನಟರಾದ ಕೆ. ಶ್ರೀಕಾಂತ್ ಮತ್ತು ಕೃಷ್ಣ ಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸಮನ್ಸ್(ED Summons) ಜಾರಿ ಮಾಡಿದೆ ಎಂದು ಗುರುವಾರ(ಅ. 23) ವರದಿಯಾಗಿದೆ.

ನಟ ಶ್ರೀಕಾಂತ್​ಗೆ ಅ. 28ರಂದು ಮತ್ತು ಕೃಷ್ಣಾಗೆ 29ರಂದು ನುಂಗಂಬಾಕ್ಕಂನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಜೂ. 18ರಂದು ಜಿಸಿಪಿ ತನ್ನ ಮಾದಕ ದ್ರವ್ಯ ವಿರೋಧಿ ಗುಪ್ತಚರ ಘಟಕದ (ಎಎನ್‌ಐಯು) ವಿಶೇಷ ತಂಡವು ಆರೋಪಿ ಪ್ರದೀಪ್ ಕುಮಾರ್‌ಗೆ ಕೊಕೇನ್ ಪೂರೈಸಿದ ಆರೋಪದ ಮೇಲೆ ಘಾನಾ ಮೂಲದ ಜಾನ್‌ನನ್ನು ಬಂಧಿಸಿದ ಬಳಿಕ ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಒಟ್ಟು 11.5ಗ್ರಾಂ ಕೊಕೇನ್, 10.3ಗ್ರಾಂ ಮೆಥಾಂಫೆಟಮೈನ್, 2.75ಗ್ರಾಂ ಎಂಡಿಎಂಎ, 2.4ಗ್ರಾಂ ಒಜಿ ಗಾಂಜಾ ಹಾಗೂ 30ಗ್ರಾಂ ಗಾಂಜಾವನ್ನು ಜಿಸಿಪಿ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಓರ್ವ ಆರೋಪಿಯಿಂದ 40 ಸಾವಿರ ರೂ. ಹಣ ವಶಪಡಿಸಿಕೊಂಡಿದ್ದು, ಪಿಎಂಎಲ್​ಎ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಇಡಿ ತಿಳಿಸಿದೆ.

ಪ್ರಕರಣದಲ್ಲಿ ಜಿಸಿಪಿ ಪ್ರಶಾಂತ್, ನಟ ಶ್ರೀಕಾಂತ್, ಜವಾಹರ್, ಕೃಷ್ಣ ಹಾಗೂ ಪಯಾಜ್ ಅಹ್ಮದ್ ಅವರನ್ನು ಬಂಧಿಸಿತ್ತು. ಜಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ, ಪ್ರದೀಪ್, ಜವಾಹರ್ ಮತ್ತು ಪ್ರಶಾಂತ್ ಇನ್ನೂ ಜೈಲಿನಲ್ಲಿದ್ದಾರೆ. ಶ್ರೀಕಾಂತ್ ಮತ್ತು ಕೃಷ್ಣ ಅವರಿಗೆ ಮದ್ರಾಸ್ ಹೈಕೋರ್ಟ್ ಜಾಮೀನು ನೀಡಿದೆ. (ಏಜೆನ್ಸೀಸ್)