ನ್ಯೂಸ್

ಕರೊನಾ ಎಫೆಕ್ಟ್, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಅಭಾವ: 3 ತಿಂಗಳು ಪರಿಸ್ಥಿತಿ ಬಗೆ ಹರಿಯುವುದು ಅನುಮಾನ

ಬೇಲೂರು ಹರೀಶ ಬೆಂಗಳೂರು

ಕರೊನಾದಿಂದಾಗಿ ಟೆಂಡರ್ ಪ್ರಕ್ರಿಯೆ ವಿಳಂಬಗೊಂಡಿ ರುವುದು ಮತ್ತಿತರ ಕಾರಣಗಳಿಂದಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಾಗಿದೆ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್​ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್​ಡಬ್ಲ್ಯುಎಸ್) ಸಮರ್ಪಕವಾಗಿ ಔಷಧ ಸಂಗ್ರಹವಾಗದ ಪರಿಣಾಮ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ.

ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಔಷಧ ಸಂಗ್ರಹಿಸಲು ಕೆಡಿಎಲ್​ಡಬ್ಲ್ಯುಎಸ್ ಟೆಂಡರ್ ಕರೆಯುತ್ತದೆ. ಆದರೆ, ಈ ವರ್ಷ ಕರೊನಾ ಕಾರಣಕ್ಕಾಗಿ ಒಂದೂ ಟೆಂಡರ್ ಕರೆದಿಲ್ಲ. ಒಂದೊಮ್ಮೆ ಔಷಧ ಪೂರೈಕೆ ಸಂಸ್ಥೆಗಳನ್ನು ಟೆಂಡರ್​ಗೆ ಆಹ್ವಾನಿಸಿ ಪ್ರಕ್ರಿಯೆ ಮುಗಿಸಲು ಮುಂದಾದರೂ ಸರಾಸರಿ 3 ತಿಂಗಳಾದರೂ ಬೇಕಾಗುತ್ತದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧ ಸಿಗದೆ ಬಡ ರೋಗಿಗಳು ಖಾಸಗಿ ಮೆಡಿಕಲ್ ಸ್ಟೋರ್​ಗಳಿಗೆ ಹೋಗುವಂತಾಗಿದೆ.

ಏನಿದು ಕೆಡಿಎಲ್​ಡಬ್ಲ್ಯುಎಸ್?: ಆರೋಗ್ಯ ಇಲಾಖೆಯ ಅಧೀನದ ಕೆಡಿಎಲ್​ಡಬ್ಲ್ಯುಎಸ್ ಔಷಧಗಳನ್ನು ಸಂಗ್ರಹಿಸಿ 23 ಜಿಲ್ಲಾ, 161 ತಾಲೂಕು ಆಸ್ಪತ್ರೆ, 203 ಸಮುದಾಯ ಆರೋಗ್ಯ ಕೇಂದ್ರ, 2331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧ ಪೂರೈಕೆ ಮಾಡುವ ಜವಾಬ್ದಾರಿ ಹೊಂದಿದೆ.

ನಾಯಿ ಕಡಿತ ಔಷಧ ಸಮಸ್ಯೆ: ಜೀವರಕ್ಷಕಗಳ ಅಭಾವದ ಜತೆಗೆ ನಾಯಿ ಹಾಗೂ ಹಾವು ಕಡಿತ ಔಷಧಕ್ಕೂ ಬರ ಎದುರಾಗಿದೆ. ಕಳೆದ ವರ್ಷ ಖರೀದಿಸಿ ಸಂಗ್ರಹಿಸಿ ಅಲ್ಪಸ್ವಲ್ಪ ಉಳಿದಿರುವ ಔಷಧಗಳನ್ನೇ ಬಳಸಲಾಗುತ್ತಿದೆ.

ಯಾವೆಲ್ಲ ಔಷಧ ಖಾಲಿ?

ಶ್ವಾಸಕೋಶ, ಕರುಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋ ನಿಯಾ, ಕ್ಯಾನ್ಸರ್, ಅಸ್ತಮಾ, ಮಧುಮೇಹ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಮೂಳೆ, ತುರಿಕೆ, ಫಂಗಸ್, ಮೈಗ್ರೇನ್, ಶೀತ, ಅನಸ್ತೇಷಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪು್ಪಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸಂಬಂಧಿತ ಗಂಭೀರ ಕಾಯಿಲೆಗಳ ನಿವಾರಿಸುವ ಔಷಧ, ಮಾತ್ರೆ ಹಾಗೂ ಚುಚ್ಚುಮದ್ದು ಸಹಿತ 150ಕ್ಕೂ ಹೆಚ್ಚು ಔಷಧ ಖಾಲಿ ಆಗಿವೆ.

ಬೇಡಿಕೆ ಹೆಚ್ಚು

2017ರಲ್ಲಿ 337 ಕೋಟಿ ರೂ. ಹಾಗೂ 2018ರಲ್ಲಿ 360 ಕೋಟಿ ರೂ.ಮೊತ್ತದ ಔಷಧಗಳನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಳ ಹಾಗೂ ಆಸ್ಪತ್ರೆಗಳಿಂದ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ 487.75 ಕೋಟಿ ರೂ. ಮೊತ್ತದ ಔಷಧಗಳನ್ನು ಕೋರಲಾಗಿದೆ. ಆದರೆ, ಕರೊನಾ ಕಾರಣದಿಂದಾಗಿ ಅಧಿಕಾರಿಗಳು ಯಾವುದೇ ಟೆಂಡರ್ ಆಹ್ವಾನಿಸಿಲ್ಲ. ನಾಮ್ೇವಾಸ್ತೆ ಎಂಬಂತೆ 4ಜಿ ಅಡಿ ಸ್ವಲ್ಪ ಪ್ರಮಾಣದಲ್ಲಿ ಔಷಧ ಖರೀದಿಸಿದ್ದಾರೆ.

ಔಷಧ ಅಭಾವ ಇದ್ದರೆ ಕೂಡಲೇ ಸರ್ಕಾರದಿಂದ ಅನುಮತಿ ಪಡೆದು ಟೆಂಡರ್ ನಡೆಸುತ್ತೇವೆ. ಇಲ್ಲವಾದರೆ ಲಾಕ್​ಡೌನ್ ಮುಗಿದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಟೆಂಡರ್ ಕರೆದಿದ್ದರೂ ಪೂರೈಕೆದಾರರು ಪಾಲ್ಗೊಂಡಿರಲಿಲ್ಲ.

| ಡಾ.ಆರ್.ಪಾಟೀಲ್ ಓಂಪ್ರಕಾಶ್​ನಿರ್ದೇಶಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೆಲ ಔಷಧಗಳ ಅಭಾವ ಇರುವುದು ನಿಜ. ಕೋವಿಡ್-19ರ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಟೆಂಡರ್ ನಡೆದಿಲ್ಲ. ಶೀಘ್ರದಲ್ಲೇ ಔಷಧ ಪೂರೈಕೆಗಾಗಿ ಟೆಂಡರ್ ನಡೆಸುತ್ತೇವೆ. ತುರ್ತು ಔಷಧ ಅವಶ್ಯಕತೆ ಇರುವ ಸಂದರ್ಭದಲ್ಲಿ 4ಜಿ ವಿನಾಯಿತಿಯಡಿ ಖರೀದಿಸುತ್ತೇವೆ.

| ಜಾವೇದ್ ಅಖ್ತರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ