ನ್ಯೂಸ್

ಜಾಮೀನಿನ ಮೇಲೆ ಹೊರಬಂದು ಮತ್ತೆ ಜೈಲು ಪಾಲಾದ ದಂಪತಿ! ಹೆಸರಿಗೆ ಟ್ಯಾಟೂ ಕಲಾವಿದರು, ಮಾಡುತ್ತಿದ್ದದ್ದು ನೀಚ ಕೃತ್ಯ

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳ ಮೂಲದ ದಂಪತಿ ಮತ್ತೆ ಡ್ರಗ್ಸ್​ ಕೇಸ್​ನಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದಾರೆ.

ಬಂಧಿತ ದಂಪತಿಯನ್ನು ಕೊಟ್ಟಾಯಂ ಮೂಲದ ಸಿಗಿಲ್​ ವರ್ಘೀಸ್​ ಮಂಬರಂಪಿಲ್​ (32) ಮತ್ತು ಕೊಯಮತ್ತೂರಿನ ವಿಷ್ಣುಪ್ರಿಯಾ (22) ಎಂದು ಗುರುತಿಸಲಾಗಿದೆ. ಬಂಧಿತರಿಂದ 7 ಕೋಟಿ ರೂ. ಮೌಲ್ಯದ ಹಶಿಶ್​ ಎಣ್ಣೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಬ್ಬರು ಸಹ ಟ್ಯಾಟೂ ಕಲಾವಿದರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ದಂಪತಿಯಿಂದ ಹಶಿಶ್​ ಎಣ್ಣೆಯನ್ನು ಸಂಗ್ರಹಿಸಿಕೊಂಡು ಅದನ್ನು ಅಗತ್ಯ ಇರುವವರಿಗೆ ಪೂರೈಕೆ ಮಾಡುತ್ತಿದ್ದ ಮಡಿವಾಳದ ನಿವಾಸಿ ವಿಕ್ರಮ್​ (23) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ 80 ಗ್ರಾಂ ಹಶಿಶ್ ಎಣ್ಣೆಯೊಂದಿಗೆ ವಿಕ್ರಮ್​ನನ್ನು ಪೊಲೀಸರು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಷ್ಣುಪ್ರಿಯಾ ಹಾಗೂ ಸಿಗಿಲ್ ಅವರ ಮನೆಯನ್ನು ಶೋಧಿಸಿದಾಗ 7 ಕೋಟಿ ರೂಪಾಯಿ ಮೌಲ್ಯದ 12 ಕೆಜಿ ಹಶಿಶ್ ಎಣ್ಣೆ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ದಂಪತಿ ಉತ್ತರ ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಸೋಮವಾರ ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ದಂಧೆ ನಡೆಸಿದ್ದರು. ಈ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ್ಣುಪ್ರಿಯಾ ಮತ್ತು ಸಿಗಿಲ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ನಂತರ ಮನೆಯೊಂದನ್ನು ಬಾಡಿಗೆಗೆ ಪಡೆದು ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಹಚ್ಚೆ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಇದರ ನೆಪದಲ್ಲಿ ಇಬ್ಬರೂ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ಜೀವನ ಬಯಸಿ ವ್ಯಾಪಾರಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)