ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರ ಬಿಂದು ಆಗಿರುವ ಡ್ರೋನ್ ಪ್ರತಾಪ್ ಅವರ ಫೇಸ್ಬುಕ್ ಫ್ಯಾನ್ಸ್ ಕ್ಲಬ್ ಪೇಜ್ ಇದ್ದಕ್ಕಿದ್ದಂತೆ ಮಾಯಾವಾಗಿರುವುದು ಜನರ ಅನುಮಾನಗಳಿಗೆ ಪುಷ್ಟಿ ನೀಡಿದಂತಿದೆ.
ಡ್ರೋನ್ ಪ್ರತಾಪ್ ಹೆಸರಿನಲ್ಲಿ ಫ್ಯಾನ್ಸ್ ಕ್ಲಬ್ ಒಂದು ಫೇಸ್‌ಬುಕ್‌ನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ವರ್ಷದ ಜನವರಿಯಲ್ಲೇ ಜೀವ ತಳೆದಿದ್ದರೂ ಡ್ರೋನ್ ಪ್ರತಾಪ್‌ನ ಕುರಿತು ಫ್ಯಾಕ್ಟ್ ಚೆಕ್ ವರದಿ ಪ್ರಕಟವಾದ ನಂತರ, ಅಂದರೆ ಕಳೆದ 3-4 ದಿನಗಳಿಂದ ಚುರುಕಾಗಿತ್ತು.
ಮೇ-ಜೂನ್‌ವರೆಗೆ ಆಗೊಂದು ಈಗೊಂದು ಪೋಸ್ಟ್ ಅಪ್‌ಡೇಟ್ ಆಗುತ್ತಿದ್ದ ಈ ಪೇಜ್‌ನಲ್ಲಿ ಕೆಲವು ದಿನಗಳಿಂದ ದಿಢೀರನೆ ಪ್ರತಾಪ್ ಪರ ಪೋಸ್ಟ್‌ಗಳು ಪದೇಪದೆ ಕಾಣಿಸಿಕೊಳ್ಳುತ್ತಿದ್ದವು. ಇದರಿಂದಾಗಿ ಆ ಪೇಜ್ ಫಾಲೋ ಮಾಡುತ್ತಿರುವವರಲ್ಲಿ ಅನುಮಾನ ಹುಟ್ಟಿಕೊಂಡಿತ್ತು. ಈ ಪೇಜನ್ನು ಪ್ರತಾಪ್ ಅಭಿಮಾನಿಗಳು ನಿರ್ವಹಿಸುತ್ತಿದ್ದಾರೋ ಅಥವಾ ಸ್ವತಃ ಪ್ರತಾಪ್ ಎಲ್ಲೋ ಅಜ್ಞಾತ ಸ್ಥಳದಲ್ಲಿ ಕುಳಿತು ನಿರ್ವಹಿಸುತ್ತಿದ್ದಾನೋ ಎಂಬ ಶಂಕೆ ಕಾಡಿತ್ತು. ಇದನ್ನು ನೆಟ್ಟಿಗರು ಸಹ ಅದೇ ಪೇಜ್‌ನಲ್ಲಿ ಪ್ರಶ್ನಿಸಿದ್ದರು.
ವಿವಿಧ ಕಾಲೇಜು-ಮಠಗಳಲ್ಲಿ ಮಾಡಿದ ಸನ್ಮಾನಗಳು, ಪ್ರೇರಣಾತ್ಮಕ ಭಾಷಣಗಳ ವಿಡಿಯೋ, ಪ್ರಶಂಸಾತ್ಮಕವಾಗಿ ಬರೆದ ಪತ್ರಿಕಾವರದಿಗಳ ತುಣುಕುಗಳು, ವಿದೇಶಕ್ಕೆ ಹೋದಾಗ ತೆಗೆಸಿಕೊಂಡ ಫೋಟೋಗಳು, ಅಲ್ಲಿಯ ಭಾರತೀಯರನ್ನು ಭೇಟಿ ಮಾಡಿದ ವಿಡಿಯೋ ಮುಂತಾದವುಗಳನ್ನು ಪೇಜ್‌ನಲ್ಲಿ ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುತ್ತಿತ್ತು. ಅಲ್ಲದೆ, ಕೋವಿಡ್‌ಕೇರ್ ಹೆಲ್ಪ್‌ಲೈನ್ ನಂಬರ್‌ಗಳನ್ನೂ ಅಪ್‌ಡೇಟ್ ಮಾಡಲಾಗಿತ್ತು. ಇದಕ್ಕೆ ಜನರು ಅಲ್ಲೇ ಚಳಿ ಬಿಡಿಸುತ್ತಿದ್ದರು.
‘‘ಈ ಪೇಜ್ ನೋಡಿದ್ರೆ ಇದನ್ನು ನೀನೇ ಎಲ್ಲೋ ಕೂತ್ಕೊಂಡು ನೋಡ್ಕೊತಾ ಇದೀಯಾ ಅನ್ಸುತ್ತೆ. ಬೇರೆ ಯಾರೋ ಅಭಿಮಾನಿಗಳು ಮಾಡಿದ ಪೇಜ್ ಅಲ್ಲ ಇದು... ಯಾರೂ ಅಭಿಮಾನಿಗಳೇ ಇಲ್ಲ...’’ ಎಂದು ಮುಂತಾಗಿ ಜನರು ಪ್ರಶ್ನಿಸಿದ್ದರು. ಹೀಗೆ ಸಾಕಷ್ಟು ಟೀಕೆಗಳು ಪ್ರತಾಪ್ ವಿರುದ್ಧ ಫೇಸ್‌ಬುಕ್‌ನಲ್ಲಿ ವ್ಯಕ್ತವಾಗಿತ್ತು, ಇದೀಗ ಇದ್ದಕ್ಕಿದ್ದಂತೆ ಪೇಜ್ ಮಾಯಾವಾಗಿದ್ದು, ಈ ಬಗ್ಗೆಯೂ ಟ್ರೋಲ್ ಆರಂಭವಾಗಿದೆ. ಅಲ್ಲಿಗೆ ಜನರು ಹೇಳಿದ ಹಾಗೇ ಪ್ರತಾಪನೇ ಪೇಜ್ ನಿರ್ವಹಣೆ ಮಾಡುತ್ತಿದ್ದರಾ ಎಂಬುದಕ್ಕೆ ಪುಷ್ಟಿ ಸಿಕ್ಕಿದಂತಾಗಿದೆ.