ಲಖನೌ: ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಹೊಗಳಿದ ಎಂಬ ಕಾರಣಕ್ಕೆ ವಾಹನ ಚಾಲಕ ಆತನನ್ನು ಹತ್ಯೆ ಮಾಡಿರುವ ಘಟನೆ ಯುಪಿಯ ಮಿರ್ಜಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ರಾಜೇಶ್ ಧಾರ್ ದುಬೆ ಎಂದು ಗುರುತಿಸಲಾಗಿದ್ದು, ಮಿರ್ಜಾಪುರ್ ಜಿಲ್ಲೆಯ ಚನ್ಬೆಯ ನಿವಾಸಿ ಅಮ್ಜದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ರಾಜೇಶ್ ಮದುವೆ ಸಮಾರಂಭ ಒಂದನ್ನು ಮುಗಿಸಿಕೊಂಡು ಜೀಪ್ನಲ್ಲಿ ವಾಪಸ್ ಆಗುವ ವೇಳೆ ಸಹ ಪ್ರಯಾಣಿಕರ ಜೊತೆ ರಾಜಕೀಯದ ವಿಚಾರವಾಗಿ ಚರ್ಚೆ ಶುರು ಆಗಿದೆ. ಈ ವೇಳೆ ರಾಜೇಶ್ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ರನ್ನು ಹೊಗಳಿ ಮಾತನಾಡಿದ್ದಾರೆ.
ರಾಜೇಶ್ ಹೊಗಳಿ ಮಾತನಾಡುತ್ತಿದ್ದುದ್ದನ್ನು ಕಂಡು ಸಿಟ್ಟಾದ ವಾಹನ ಚಾಲಕ ಅಮ್ಜದ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡ ರಾಜೇಶ್ ಈ ಇಬ್ಬರು ನಾಯಕರ ಬಗ್ಗೆ ಎತೇಚ್ಚವಾಗಿ ಹೊಗಳಿ ಮಾತನಾಡಲು ಶುರು ಮಾಡಿದ್ದಾನೆ.
ಇದರಿಂದ ತೀವ್ರವಾಗಿ ಕೋಪಗೊಂಡ ಅಮ್ಜದ್ ರಾಜೇಶ್ನನ್ನು ಜೀಪ್ನಿಂದ ತಳ್ಳಿದ್ದಾನೆ. ವಾಹನದ ಸೈಡ್ ಮಿರರ್ ಹಿಡಿದು ಒಳಗೆ ಬರಲು ಪ್ರಯತ್ನಿಸಲು ಮುಂದಾದಾಗ ಚಾಲಕ ವೇಗವಾಗಿ ಚಾಲನೆ ಮಾಡಿದ ಪರಿಣಾಮ ಜೀಪಿನಡಿ ಸಿಲುಕಿ ರಾಜೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಹತ್ಯೆಯ ವಿಚಾರ ಕ್ಷಣಾರ್ಧದಲ್ಲೇ ಪ್ರದೇಶದ ಸುತ್ತ ಮುತ್ತ ಹಬ್ಬಿದ ಕಾರಣ ಸಾರ್ವಜನಿಕರು ಪ್ರಯಾಗ್ರಾಜ್-ಮಿರ್ಜಾಪುರ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಅಮ್ಜದ್ನನ್ನು ಆತನ ಸ್ವಗ್ರಾಮದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.