ನ್ಯೂಸ್

ಎಣ್ಣೆಯಾದ್ರೂ ಕುಡೀರಿ, ಗುಟ್ಕಾನಾದ್ರೂ ತಿನ್ನಿ... ಒಟ್ಟಿನಲ್ಲಿ ನೀರು ಮಾತ್ರ ಉಳಿಸಿ! ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ

ರೇವಾ (ಮಧ್ಯಪ್ರದೇಶ): ನೀರಿನ ಸಂರಕ್ಷಣೆ ಕುರಿತಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರೇವಾ ಕ್ಷೇತ್ರದ ಸಂಸದ ಜನಾರ್ದನ್​ ಮಿಶ್ರಾ ನೀಡಿರುವ ವಿಚಿತ್ರ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭೂಮಂಡಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಅದನ್ನು ಉಳಿಸಲೇಬೇಕಿದೆ. ನೀವು ಗುಟ್ಕಾನಾದರೂ ಜಿಗಿರಿ, ಮದ್ಯವನ್ನಾದರೂ ಕುಡಿಯಿರಿ, ಥಿನ್ನರ್​ ಆದರೂ ಬಳಸಿ ಅಥವಾ ಐಯೋಡೆಕ್ಸ್​ ಆದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಿ ಎಂದು ಜನಾರ್ದನ ಮಿಶ್ರಾ ಅವರು ವಿಚಿತ್ರ ಹೇಳಿಕೆ ನೀಡಿದ್ದಾರೆ.

ಕಳೆದ ಭಾನುವಾರ ರೇವಾ ಕೃಷ್ಣರಾಜ್​ ಕಪೂರ್​ ಆಡಿಟೋರಿಯಂನಲ್ಲಿ ನಡೆದ ನೀರಿನ ಸಂರಕ್ಷಣೆ ಕಾರ್ಯಗಾರದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೀರನ್ನೂ ಹೀಗೂ ಸಂರಕ್ಷಣೆ ಮಾಡಬಹುದಾ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡುವುದಾಗಿ ಘೋಷಿಸಿದರೆ, ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಎಂದು ಹೇಳಿ. ಅದರ ಬದಲಾಗಿ ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡುವಂತೆ ತಿಳಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಇನ್ನು ಜನಾರ್ದನ ಮಿಶ್ರಾ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ವಿವಾದಗಳಿಂದಲೇ ಇವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ರೇವಾ ಜಿಲ್ಲೆಯಲ್ಲಿರುವ ಬಾಲಕಿಯರ ಶಾಲೆಯ ಟಾಯ್ಲೆಟ್​ ಅನ್ನು ಬರಿಗೈಯಲ್ಲಿ ಕ್ಲೀನ್​ ಮಾಡಿ, ಭಾರಿ ಸುದ್ದಿಯಾಗಿದ್ದರು. (ಏಜೆನ್ಸೀಸ್​)