ನ್ಯೂಸ್

ಕಿರುಚಿದರೆ ಹೆಚ್ಚಿನ ಜನರನ್ನು ಕರೆಸುತ್ತೇವೆ... ಅತ್ಯಾಚಾರದ ಕರಾಳತೆ ಬಿಚ್ಚಿಟ್ಟ ಸಂತ್ರಸ್ತೆ! Gang rape

ಪಶ್ಚಿಮ ಬಂಗಾಳ: ಇತ್ತೀಚಿಗೆ ಪಶ್ಚಿಮ ಬಂಗಾಳದ ದುರ್ಗಾಪುರ ಮೆಡಿಕಲ್​ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಕ್ಯಾಂಪಸ್​ ನ ಹೊರಗೆ ನಡೆದ ಸಾಮೂಹಿಕ ಅತ್ಯಾಚಾರ (Gang rape) ಪ್ರಕರಣದ ಬಗ್ಗೆ ಸಂತ್ರಸ್ತೆ ತನ್ನ ಹೇಳಿಕೆಯನ್ನು ಪೊಲೀಸರ ಮುಂದೆ ದಾಖಲಿಸಿದ್ದು, ಅದು ಏನಾಯಿತು ಎಂಬುದನ್ನು ಅಧಿಕಾರಿಗಳ ಬಳಿ ಮಂಗಳವಾರ (ಅ.14) ಬಹಿರಂಗಪಡಿಸಿದ್ದಾಳೆ ಎಂದು ವರದಿಯಾಗಿದೆ.

ಸಂತ್ರಸ್ತೆ ದೂರು ಏನು?

ಮೂವರು ಪುರುಷರು ವಾಹನ ಬಿಟ್ಟು ನಮ್ಮ ಕಡೆಗೆ ಬರುತ್ತಿರುವುದನ್ನು ನಾನು ಗಮನಿಸಿ ಕಾಡಿನ ಕಡೆ ಓಡಲು ಪ್ರಾರಂಭಿಸಿದೆವು. ನಂತರ ಆ ಪುರುಷರು ನಮ್ಮ ಹಿಂದೆಯೇ ಓಡಿ ಬಂದು ನನ್ನನ್ನು ಕಾಡಿನೊಳಗೆ ಎಳೆದೊಯ್ದರು. ಈ ವೇಳೆ ಅವರು ನನ್ನ ಮೊಬೈಲ್​ ಫೋನ್​ ಕಸಿದುಕೊಂಡು ನನ್ನ ಗೆಳೆಯನಿಗೆ ಕರೆ ಮಾಡಿ ಬರಲು ಹೇಳು ಎಂದು ಒತ್ತಾಯಿಸಿದರು. ಆಗ ನಾನು ಅವರ ಮಾತನ್ನು ನಿರಾಕರಿಸಿದೆ. ಕೋಪಗೊಂಡ ಅವರು ನನ್ನನ್ನು ಮಲಗಿಸಲು ಪ್ರಯತ್ನ ನಡೆಸಿದರು. ಈ ವೇಳೆ ನಾನು ಜೋರಾಗಿ ಕೂಗಿದಾಗ ಯಾವುದೇ ಶಬ್ಧವನ್ನು ಮಾಡಿದರೆ ಹೆಚ್ಚಿನ ಪುರುಷರನ್ನು ಕರೆಸುವುದಾಗಿ ಬೆದರಿಕೆ ಹಾಕಿದರು ಎಂದು ವಿದ್ಯಾರ್ಥಿನಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಎಲ್ಲಾ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿ ಮಾಡಲಾಗುವುದು ಎಂದು ಅಧಿಕಾರಿಗಳು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.

ಈ ಘಟನೆಯು ಎಲ್ಲೆಡೆ ವ್ಯಾಪಕ ಪ್ರತಿಭಟನೆಯನ್ನು ಹುಟ್ಟುಹಾಕಿತು. ಇದು ಶೀರ್ಘದಲ್ಲೇ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎರಡನೇ ಪುನರುಜ್ಜೀವನಕ್ಕೆ ಕರೆ ನೀಡಿದರು. ಈ ವೇಳೆ ಮಮತಾ ಬ್ಯಾನರ್ಜಿ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಕೂಡ ಒಂದು ಮಹಿಳೆ ಹೇಗೆ ಇಷ್ಟೊಂದು ಬೇಜವಬ್ದಾರಿಯಿಂದ ಮಾತನಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಘಟನೆ ಹಿನ್ನಲೆ

ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬಳು ರಾತ್ರಿ ಊಟಕ್ಕೆಂದು ಹೊರಗೆ ಹೋದಂತಹ ಸಮಯದಲ್ಲಿ ಪುರುಷರ ಗುಂಪೊಂದು ಆಕೆಯನ್ನು ತಡೆದು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಕಾಡಿನಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)