ನ್ಯೂಸ್

ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಆರಂಭ: ವಿಶ್ವದರ್ಶನ ಸಂಸ್ಥೆಯಿಂದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ; ಉತ್ತಮ ಪತ್ರಕರ್ತರಾಗಲು ಅತ್ಯುತ್ತಮ ಅವಕಾಶ

ಬೆಂಗಳೂರು: ಕನ್ನಡ ಪತ್ರಿಕಾರಂಗದಲ್ಲಿ ಹೊಸ ಹೊಸ ಸಾಹಸಗಳ ಮೂಲಕ ದಾಖಲೆಗಳನ್ನು ಬರೆದಿರುವ ಹೆಸರಾಂತ ಉದ್ಯಮಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ ಮೀಡಿಯಾ ಸ್ಕೂಲ್ ಆರಂಭವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಶ್ವದರ್ಶನ ಎಜುಕೇಶನ್ ಸೊಸೈಟಿಯಲ್ಲಿ, ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮಾರ್ಗದರ್ಶನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸ್ ಶುರುವಾಗಲಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ.

ಭವಿಷ್ಯದ ಪತ್ರಕರ್ತರನ್ನು ವೃತ್ತಿಪರ ರೀತಿಯಲ್ಲಿ ರೂಪಿಸುವ ಹಾಗೆ ಕೋರ್ಸ್ ವಿನ್ಯಾಸಗೊಳಿ ಸಲಾಗಿದ್ದು, ಮಾಧ್ಯಮ ವೃತ್ತಿಯನ್ನು ಸಮಾಜಮುಖಿಯಾಗಿ, ಸೃಜನಶೀಲವಾಗಿ ನಿರ್ವಹಿಸಲು ಅನುವಾಗುವಂತೆ ವೈವಿಧ್ಯಮಯ ಬೋಧನೆ ಹಾಗೂ ತರಬೇತಿ ನೀಡಲಾಗುತ್ತದೆ. ಮುದ್ರಣ, ಟಿವಿ ಹಾಗೂ ಡಿಜಿಟಲ್- ಈ ಮೂರೂ ಮಾಧ್ಯಮಗಳ ಸಮಗ್ರ ಅಂಶಗಳನ್ನು ಕೋರ್ಸ್ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾಧ್ಯಮದಲ್ಲಿ ಕಾರ್ಯನಿರ್ವಹಿಸಬೇಕೆಂಬ ತುಡಿತವುಳ್ಳ ಪದವೀಧರರು ಅರ್ಜಿ ಸಲ್ಲಿಸಬಹುದು. ಹಿರಿಯ ಪತ್ರಕರ್ತ, ‘ವಿಜಯವಾಣಿ’ ಪತ್ರಿಕೆಯ ಡೆಪ್ಯುಟಿ ಎಡಿಟರ್ ನಾಗರಾಜ ಇಳೆಗುಂಡಿ ಅವರು ಮೀಡಿಯಾ ಸ್ಕೂಲ್​ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಲಿದ್ದು, ವೃತ್ತಿಪರ ಬೋಧಕ ವರ್ಗವಿರಲಿದೆ. ಜತೆಗೆ ವೃತ್ತಪತ್ರಿಕೆ, ಸುದ್ದಿವಾಹಿನಿ ಹಾಗೂ ಡಿಜಿಟಲ್ ಮೀಡಿಯಾಗಳ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಹೆಸರಾಂತ ಹಾಗೂ ನುರಿತ ಪತ್ರಕರ್ತರಿಂದಲೂ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ದೊರೆಯಲಿದೆ.

ವೃತ್ತಪತ್ರಿಕೆ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದ ಪುಸ್ತಕಗಳು, ವಿಷಯ ತಜ್ಞರ ಜತೆ ಸಂವಾದ, ಪತ್ರಿಕಾ ಕಚೇರಿ-ಟಿವಿ ಕಚೇರಿ ಭೇಟಿ, ಅವುಗಳ ಕಾರ್ಯನಿರ್ವಹಣೆಯ ಪ್ರತ್ಯಕ್ಷ ಅನುಭವ, ಡಿಜಿಟಲ್ ಮಾಧ್ಯಮದ ಕಾರ್ಯ ಚಟುವಟಿಕೆ ಅವಲೋಕನ, ಮಾದರಿ ಪತ್ರಿಕೆ ಪ್ರಕಟಣೆ, ಇಂಟರ್ನ್​ಶಿಪ್, ಆನ್​ಲೈನ್ ಹಾಗೂ ಭೌತಿಕ ಬೋಧನೆಯ ಹೈಬ್ರಿಡ್ ಮಾದರಿ ಸೇರಿ ಹಲವು ವಿಶೇಷತೆಗಳನ್ನು ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಹೊಂದಿದೆ. ‘ಉತ್ತಮ ಪತ್ರಕರ್ತರಾಗುವ ಕನಸನ್ನು ಹೊಂದಿರುವ ಯುವಪೀಳಿಗೆಗೆ ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಕಾರ್ಯರೂಪಕ್ಕೆ ಬಂದಿದೆ’ ಎಂದು ಪ್ರಕಟಣೆ ತಿಳಿಸಿದೆ.

ಕೋರ್ಸ್​ನ ವಿಶೇಷತೆಗಳು: ಟಿವಿಯಲ್ಲಿ ಆಕರ್ಷಕ ನಿರೂಪಣೆ, ವಾರ್ತಾ ವಾಚನ, ಪತ್ರಿಕೋದ್ಯಮ ಇತಿಹಾಸದ ಅರಿವು, ಸುದ್ದಿ ಸಂಪಾದನೆ, ವರದಿಗಾರಿಕೆ, ಛಾಯಾಗ್ರಹಣ, ಸಂವಹನ ಕೌಶಲ, ಆರ್​ಜೆ-ವಿಜೆ, ಮಾಧ್ಯಮ ನಿರ್ವಹಣೆ, ವಿಡಿಯೋ ಎಡಿಟಿಂಗ್, ಗ್ರಾಫಿಕ್ ಡಿಸೈನ್, ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು.

ಮಾಹಿತಿಗೆ ಸಂಪರ್ಕಿಸಿ: ಅಜಯ್ ಭಾರತೀಯ, ಮೊಬೈಲ್: 8904134073/7337875279