ನ್ಯೂಸ್

ಸರಳ ವ್ಯಕ್ತಿತ್ವದ ಡಾ.ಪಿ.ಎಲ್.ವೆಂಕಟರಾಮರೆಡ್ಡಿ; ನಿರ್ಮಾಣ ಕ್ಷೇತ್ರದ ಅದ್ವಿತೀಯ ಸಾಧಕ

ಬೆಂಗಳೂರು: "ಯಾರಿಗೂ ಯಾವುದೇ ಸುಳ್ಳು ಹೇಳದೆ ಒಂದು ಪ್ರಾಜೆಕ್ಟ್ ಅನ್ನು ಮಾಡುತ್ತೇವೆ ಎಂದರೆ, ಮಾರ್ಕೆಟ್ ಮಾಡುವುದು ತುಂಬಾ ಸುಲಭ. ಇದು ಮಾರ್ಕೆಟಿಂಗ್​ನಲ್ಲಿ ಮುಂದೆ ಬರುವುದಕ್ಕೆ ಸರಳ ಸೂತ್ರ. ಆದ್ದರಿಂದಲೇ ನಿರ್ಮಾಣ ಕ್ಷೇತ್ರದಲ್ಲಿ ಉತ್ತಮ ಸಂಬಂಧಗಳನ್ನು ಕಟ್ಟಲು ಸಾಧ್ಯವಾಗಿದೆ. ನನ್ನ ಸಾಧನೆಗಳನ್ನು ಮುಂದೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಮಗ ಮನೀಶ್ ಅವರ ಮೇಲಿದೆ. ಅವರು ಹಣ ಇದೆ ಎಂದು ದುಂದುವೆಚ್ಚ ಮಾಡುವವರಲ್ಲ. ಅತ್ಯಂತ ಸರಳ ಜೀವನವನ್ನೇ ನಡೆಸುತ್ತಿದ್ದಾರೆ. ಆದ್ದರಿಂದಲೇ ನನ್ನ ಮಕ್ಕಳು ವಿ2 ಹೋಲ್ಡಿಂಗ್ಸ್​ನ ಹೆಸರು ಉಳಿಸುತ್ತಾರೆಂಬ ನಂಬಿಕೆ ನನಗಿದೆ. ಅವರಿಗೂ ಹೆಚ್ಚಿನ ಮನೆ ಕಟ್ಟಿಸಿ ಕೊಡುವಂತಹ ಭಾಗ್ಯ ಸಿಗಲಿ. ವ್ಯಾಪಾರದ ಜತೆಗೆ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳುವುದೂ ಪ್ರಮುಖವಾಗಿದೆ. ಅವರೂ ನನ್ನ ಹಾದಿಯನ್ನು ಹಿಡಿಯಬೇಕು ಎಂಬುದು ನನ್ನ ಆಸೆ"- ಡಾ. ಪಿ.ಎಲ್. ವೆಂಕಟರಾಮರೆಡ್ಡಿ ವ್ಯವಸ್ಥಾಪಕ ನಿರ್ದೇಶಕ, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್​ವೆುಂಟ್ ಪ್ರೖೆ. ಲಿ.

ಅದು 80ರ ದಶಕದ ಆರಂಭದ ದಿನಗಳು. ಹುಟ್ಟೂರಾದ ಕೋಲಾರ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದ ಸಂದರ್ಭ. ಜೀವನ ಕಷ್ಟ ಎನಿಸಿ, ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುತ್ತಾರೆ ಡಾ.ಪಿ.ಎಲ್. ವೆಂಕಟರಾಮರೆಡ್ಡಿ. ಇಲ್ಲಿ ಮಾಸಿಕ 200 ರೂ. ಸಂಬಳಕ್ಕಾಗಿ ಫೈನಾನ್ಸ್ ಚಿಟ್ ಫಂಡ್​ನಲ್ಲಿ ಕೆಲಸ ಆರಂಭಿಸಿ, ಮೂರು ವರ್ಷ ಬೆವರು ಸುರಿಸಿ ದುಡಿಯುತ್ತಾರೆ. ಬಳಿಕ ಹಲವು ವರ್ಷಗಳ ಕಾಲ ಒಂದು ಲಿಕ್ಕರ್ ಕಂಪನಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. 1994ರಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸುವ ಉದ್ದೇಶದಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ವೈನ್ ತಯಾರಿಕೆ ಕಾರ್ಖಾನೆ ಸ್ಥಾಪಿಸುತ್ತಾರೆ. ಭಾರತದಲ್ಲೇ ಅತೀಹೆಚ್ಚು ಮಾರಾಟವಾದ ಹೆಸರಾಂತ ‘ಹೆರಿಟೇಜ್’ ವೈನ್ ವ್ಯಾಪಾರ ವೆಂಕಟರಾಮರೆಡ್ಡಿ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟಿತು.

ನಿರ್ಮಾಣ ಕ್ಷೇತ್ರಕ್ಕೆ ಪ್ರವೇಶ: ವೈನ್ ವ್ಯಾಪಾರದಲ್ಲಿ ಯಶಸ್ಸನ್ನು ಸವಿದ ನಂತರ, ಇನ್ನೂ ಅರ್ಥಪೂರ್ಣ ಹಾಗೂ ವೈವಿಧ್ಯತೆಯಿಂದ ಕೂಡಿದ್ದನ್ನು ಮಾಡಬೇಕೆಂದು ಯೋಚಿಸಿದೆ. ಅದುವೇ 2004ರಲ್ಲಿ ನಿರ್ಮಾಣ ಕ್ಷೇತ್ರ ಪ್ರವೇಶಿಸಲು ಕಾರಣವಾಯಿತು. ಇದುವರೆಗೂ ಬೆಂಗಳೂರು ನಗರದಾದ್ಯಂತ ಗುಣಮಟ್ಟದ ಹಾಗೂ ವಾಸ್ತುವಿನಿಂದ ಕೂಡಿದ ಮತ್ತು ಅಗತ್ಯ ಮೂಲಸೌಲಭ್ಯಗಳೊಂದಿಗೆ 26 ವಸತಿ ಅಪಾರ್ಟ್​ವೆುಂಟ್ ಪ್ರಾಜೆಕ್ಟ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಕೆಂಗೇರಿಯಲ್ಲಿರುವ ವಿ2 ವಜ್ರ ಎಲಿಗೆನ್ಸ್ ಪ್ರಾಜೆಕ್ಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡುತ್ತಾರೆ ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್ಮೆಂಟ್ ಪ್ರೖೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಎಲ್. ವೆಂಕಟರಾಮರೆಡ್ಡಿ.

ಚಿಕ್ಕ ಚಿಕ್ಕ ಮನೆಗಳು, ಅಪಾರ್ಟ್​ವೆುಂಟ್​ಗಳ ನಿರ್ವಣ, ಹೀಗೆ ಸಣ್ಣದರಿಂದಲೇ ಪ್ರಾರಂಭಿಸಿದ ವ್ಯಾಪಾರ ಇಂದು ನಿರ್ಮಾಣ ಕ್ಷೇತ್ರದಲ್ಲಿ ದೃಢವಾದ ಅಡಿಪಾಯ ಹಾಕಿದೆ. ಬ್ಯಾಂಕ್ ಸಂಸ್ಥಾಪಕರಾಗಿ, ವೈನ್ ತಯಾರಿಕೆ ಕಾರ್ಖಾನೆ ಸ್ಥಾಪಿಸಿ, ಕೆಂಪು ಮೆಣಸಿನಕಾಯಿ ವ್ಯಾಪಾರದ ಜತೆ ಜತೆಗೆ ಶಿಕ್ಷಣ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಡಾ.ಪಿ.ಎಲ್.ವೆಂಕಟರಾಮರೆಡ್ಡಿ. ನಂಬಿಕೆ ಮತ್ತು ಪಾರದರ್ಶಕತೆಯ ಮೇಲೆ ತಮ್ಮದೇ ಆದ ಸಾಮ್ರಾಜ್ಯ ನಿರ್ವಿುಸಿ, ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ. ಆದರೂ ಯಾವುದೇ ಹಮ್ಮುಬಿಮ್ಮು ತೋರದ ವೆಂಕಟರಾಮರೆಡ್ಡಿ ತಮ್ಮ ಈ ಸಾಧನೆ ಹಾಗೂ ಯಶಸ್ಸಿಗೆ ಕಠಿಣ ಶ್ರಮ ಹಾಗೂ ದೇವರ ಆಶೀರ್ವಾದವೇ ಕಾರಣ ಎಂದು ವಿನಮ್ರವಾಗಿ ಹೇಳುತ್ತಾರೆ.

ವ್ಯಾಪಾರದ ಗುಟ್ಟೇನು?: ನಮ್ಮ ಕುಟುಂಬವೇ ಕಂಪನಿ ಪಾರ್ಟ್​ನರ್ಸ್. ಆದ್ದರಿಂದಲೇ ನಮ್ಮ ತೀರ್ಮಾನಗಳು ಬಹಳ ಸೃಜನಾತ್ಮಕವಾಗಿದ್ದು, ಅದ್ಭುತವಾದ ಪರಿಣಾಮಗಳನ್ನು ನೀಡುತ್ತದೆ. ಒಬ್ಬ ಗ್ರಾಹಕ ನಮ್ಮನ್ನು ಸಂರ್ಪಸಿದ ಮೊದಲನೇ ದಿನದಿಂದ ಅವರ ಮನೆ ನಿರ್ಮಾಣ ಬಳಿಕ ಗೃಹಪ್ರವೇಶ ಆಗುವವರೆಗೂ ನಮ್ಮ ಕಂಪನಿ ಪ್ರತಿನಿಧಿಯು ಅವರ ಜತೆ ಇರುತ್ತಾರೆ. ಪ್ರತಿ ಪ್ರಾಜೆಕ್ಟ್ ಅಂತ್ಯದಲ್ಲಿ ಎಲ್ಲರನ್ನು ಕರೆದು ಪೂಜೆ ಮಾಡುವುದು ಹಾಗೂ ಮೀಟಿಂಗ್ ಕರೆದು ಕುಂದು ಕೊರತೆಗಳ ಬಗ್ಗೆ ವಿಚಾರ ಮಾಡುವುದು, ಇನ್ನೇನಾದರೂ ಮಾಡಬೇಕಿದ್ದರೆ ಅದನ್ನೂ ತಿಳಿಸುವಂತೆ ಆಗ್ರಹಿಸುತ್ತೇವೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಆದ್ಯತೆಯಾಗಿರುವುದರಿಂದ ಒಮ್ಮೆ ನಮ್ಮಲ್ಲಿ ಬಂದವರು ಎರಡನೇ ಬಾರಿಗೆ ಪೂರ್ಣ ವಿಶ್ವಾಸದಿಂದ ಶೇ.100 ಪೇಮೆಂಟ್ ಮೊದಲೇ ಮಾಡಿದ ಉದಾಹರಣೆಗಳು ಇವೆ ಎಂದು ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್ಮೆಂಟ್ ಪ್ರೖೆ.ಲಿ. ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ ಡಾ.ವೆಂಕಟರಾಮರೆಡ್ಡಿ.

ಹೆರಿಟೇಜ್ ದ್ರಾಕ್ಷಿ ವೈನರಿ

ವ್ಯಾಪಾರದ ಜಟಿಲತೆಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳ ಸಮಗ್ರತೆ ಪಡೆಯುವುದು ರೆಡ್ಡಿ ಅವರ ಬಲವಾಗಿದೆ. ‘ನಾನು ಹಿಂದಿನ ಅವಿಭಜಿತ ಕೋಲಾರ ಜಿಲ್ಲೆಯ ಬಾಗೇಪಲ್ಲಿಯಿಂದ ಬಂದಿದ್ದೇನೆ. ಈಗ ಅದು ಚಿಕ್ಕಬಳ್ಳಾಪುರ ಜಿಲ್ಲೆ ಆಗಿದೆ. ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಸೂಕ್ತ ಬೆಲೆ ಇಲ್ಲದೆ ರೈತರು ಬೆಳೆದ ದ್ರಾಕ್ಷಿಯನ್ನೆಲ್ಲ ರಸ್ತೆಗೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ರೈತರ ಈ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಯೋಚಿಸಿದೆ. ಆಗ ದ್ರಾಕ್ಷಿಯಿಂದ ವೈನ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಆಸಕ್ತಿಯಿಂದ ತಿಳಿದುಕೊಂಡೆ. ಮೊದಲಿಗೆ ತುಮಕೂರು ರಸ್ತೆಯಲ್ಲಿ ಮತ್ತು ನಂತರ ಚನ್ನಪಟ್ಟಣ ರಸ್ತೆಯಲ್ಲಿ ಹೆರಿಟೇಜ್ ದ್ರಾಕ್ಷಿ ವೈನರಿ ಸ್ಥಾಪಿಸಿದೆ’ ಎಂದು ವೆಂಕಟರಾಮರೆಡ್ಡಿ ಹೇಳುತ್ತಾರೆ. ವೈನ್ ವ್ಯಾಪಾರ ಕುರಿತ ಉತ್ಸಾಹವು ನನ್ನನ್ನು ಫ್ರಾನ್ಸ್, ಇಟಲಿ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೂರದ ದೇಶಕ್ಕೆ ಕರೆದೊಯ್ದಿತ್ತು. ಇದರಿಂದ ಹೊರದೇಶ, ಹೊರ ರಾಜ್ಯ ಹಾಗೂ ಸ್ಥಳೀಯ ದ್ರಾಕ್ಷಿಗಳ ಪ್ರಾಮುಖ್ಯತೆ ಅರಿಯಲು ಸಾಧ್ಯವಾಯಿತು. ಈ ಎಲ್ಲ ಕಠಿಣ ಶ್ರಮದ ಫಲವಾಗಿ ಹೆರಿಟೇಜ್ ದ್ರಾಕ್ಷಿ ವೈನರಿ ಕಾರ್ಯನಿರ್ವಹಿಸುತ್ತಿದೆ ಎಂದವರು ವಿವರಿಸುತ್ತಾರೆ.

ಕೋವಿಡ್​ನಲ್ಲಿ ನೌಕರರಿಗೆ ನೆರವು

ವಿವಿಧ ವ್ಯಾಪಾರ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಬೃಹತ್ ಉದ್ಯಮಿಯಾಗಿ ಯಶಸ್ಸು ಗಳಿಸಿರುವ ಡಾ. ಪಿ.ಎಲ್.ವೆಂಕಟರಾಮರೆಡ್ಡಿ, ಸಾವಿರಾರು ಗ್ರಾಹಕರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಾನವೀಯ ಗುಣಗಳಿಂದಲೂ ಸಹಸ್ರಾರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಹುಟ್ಟೂರಾದ ಬಾಗೇಪಲ್ಲಿ ತಾಲೂಕಿನ ಗುಜ್ಜೇಪಲ್ಲಿಯಲ್ಲಿ ಪಿ.ಎಲ್.ವೆಂಕಟರಾಮರೆಡ್ಡಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದಲ್ಲದೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಮ್ಮ ನೌಕರರಿಗೆ ಕಾಲಕಾಲಕ್ಕೆ ವೇತನ ನೀಡುವುದರ ಜತೆಗೆ ಆವರ ಆರೋಗ್ಯದ ಹಿತದೃಷ್ಟಿಯಿಂದ ನೌಕರರ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ ಮಾಡಿಸಿದ್ದಾರೆ. ಅಲ್ಲದೆ ಯಾವುದೇ ಸಂದರ್ಭದಲ್ಲಿ ನೌಕರರಿಗೆ ಕಷ್ಟ ಬಂದರೆ ರೆಡ್ಡಿ ಅವರು ಕೂಡಲೇ ನೆರವಿನಹಸ್ತ ಚಾಚುತ್ತಾರೆ. ಹಾಗಾಗಿಯೇ ಇವರಲ್ಲಿ ಕೆಲಸಕ್ಕೆ ಸೇರಿದವರು ಬಿಟ್ಟು ಹೋಗುವ ಮನಸ್ಸೇ ಮಾಡುವುದಿಲ್ಲ ಎಂದು ನೌಕರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕಚೇರಿ ವಿವರ

ಬಸವನಗುಡಿಯ ಎನ್.ಆರ್.ಕಾಲೋನಿಯಲ್ಲಿ ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್​ವೆುಂಟ್ ಪ್ರೖೆ.ಲಿ.ಕಂಪನಿಯ ಮುಖ್ಯ ಕಚೇರಿ, ಪ್ರತಿ ಪ್ರಾಜೆಕ್ಟ್​ಗಳ ಆಫೀಸ್, ಮಾಡೆಲ್ ಹೌಸ್​ಗಳು ಇವೆ. ನಮ್ಮಲ್ಲಿರುವ ಮ್ಯಾನೇಜರ್​ಗಳು, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್​ಗಳು, ಇಂಜನಿಯರ್ಸ್ ಎಲ್ಲರೂ ಸುಮಾರು 20 ವರ್ಷದಿಂದ ನಮ್ಮ ಜತೆ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರನ್ನೂ ನಾವು ಕುಟುಂಬದಂತೆ ನೋಡಿಕೊಂಡು ಬರುತ್ತಿರುವುದರಿಂದ ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಲು ಸಾಧ್ಯವಾಗಿದೆ ಎನ್ನುತ್ತಾರೆ ವೆಂಕಟರಾಮ ರೆಡ್ಡಿ ಅವರು.

ಕಿವಿಮಾತು...

ನಮ್ಮ ದೇಶದಲ್ಲಿ ಈಗಲೂ ಬಡವರಿದ್ದು, ಸಾಕಷ್ಟು ಹಣ ಗಳಿಸುತ್ತಿರುವವರು ತಮ್ಮ ಸಂಪಾದನೆಯ ಶೇ.10-15 ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟರೆ ಬಡತನ ನಿಮೂಲನೆಗೆ ಸಹಾಯವಾಗುತ್ತದೆ. ಹಾಗೇ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದಂತೆ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ. ವಿಜಯವಾಣಿ ಒಂದು ಸೃಜನಾತ್ಮಕ ಪತ್ರಿಕೆ ಎಂಬುದು ನನ್ನ ಭಾವನೆ. ಅದೇ ರೀತಿ ಇಂಥ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ನಮಗೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಪ್ರೇರಣೆ ನೀಡುತ್ತಿದೆ ಎಂದು ವೆಂಕಟರಾಮರೆಡ್ಡಿ ಹೇಳುತ್ತಾರೆ.

ಬಡವರಿಗೆ ಮನೆ ಕಟ್ಟಿಸಿ ಕೊಡುವ ಕನಸು

ಮುಂಬರುವ 3 ವರ್ಷಗಳಲ್ಲಿ ತೀರ ಕಡಿಮೆ ದರದಲ್ಲಿ 30ರಿಂದ 40 ಲಕ್ಷ ರೂ.ಗೆ ಒಂದೊಂದು ಮನೆ ನೀಡಬೇಕು ಎಂಬುದು ವೆಂಕಟರಾಮ ರೆಡ್ಡಿ ಅವರ ಆಸೆ. ಅವಕಾಶ ಸಿಕ್ಕರೆ ಖಂಡಿತ ಆ ಪ್ರಾಜೆಕ್ಟ್ ಅನ್ನು ಅದಷ್ಟು ಶೀಘ್ರ ಕಾರ್ಯಗತಗೊಳಿಸುತ್ತೇವೆ. ಮಾಗಡಿ ರಸ್ತೆಯಲ್ಲಿ ಮಾಡುತ್ತಿರುವ ಪ್ರಾಜೆಕ್ಟ್ ಕೂಡ ಬಜೆಟ್ ಅಪಾರ್ಟ್ ಮೆಂಟ್ ಆಗಿದ್ದು, ಅಲ್ಲಿ 8 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳುತ್ತಾರೆ. ಹಲವು ಕ್ಷೇತ್ರಗಳಲ್ಲಿನ ಸಾಧನೆ ಹಾಗೂ ಸಹಕಾರ ರಂಗದಲ್ಲಿನ ಗಣನೀಯ ಸೇವೆಗಾಗಿ ಅಮೆರಿಕದ ಧಾರ್ವಿುಕ ವಿಶ್ವವಿದ್ಯಾಲಯದ ಯೋಗ-ಸಂಸ್ಕೃತಂ ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದರೂ, ಬಿಲ್ಡರ್ಸ್ ಅಸೋಸಿಯೇಷನ್, ಸಹಕಾರ ಇಲಾಖೆಯಿಂದ ಸಹಕಾರ ರತ್ನ ಪ್ರಶಸ್ತಿ ಬಂದಿದ್ದರೂ, ಯಾವುದೇ ಅಹಂ ಇಲ್ಲದೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ ಡಾ. ಪಿ.ಎಲ್. ವೆಂಕಟರಾಮರೆಡ್ಡಿ. ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್ಮೆಂಟ್ ಪ್ರೖೆ. ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಇವರು ಬ್ಯಾಂಕ್ ಅಧ್ಯಕ್ಷರಾಗಿ, ನ್ಯಾಷನಲ್ ಎಜುಕೇಷನ್ ಸೊಸೈಟಿಯ ಜಯನಗರ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಜನಸೇವೆಯೇ ಜನಾರ್ದನ ಸೇವೆ ರೀತಿ ಸಮಾಜಸೇವೆ ಮೂಲಕ ಇವರು ಗುರುತಿಸಿಕೊಂಡಿದ್ದಾರೆ. ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಆಶಾಕಿರಣವಾಗಿರುವ ಡಾ. ಪಿ.ಎಲ್.ವೆಂಕಟರಾಮರೆಡ್ಡಿ, ಈಗ ‘ವಿಜಯವಾಣಿ’ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ವಿಜಯರತ್ನ’ ಗೌರವಕ್ಕೆ ಭಾಜನರಾಗಿದ್ದಾರೆ.

ವಿ2 ಅಂದರೆ ನಮ್ಮ-ನಿಮ್ಮ ಸಂಬಂಧ

ವಿ2 ಅಂದರೆ ನಾನು ಸೆಲ್ಲರ್-ನೀವು ಬೈಯರ್. ಹೆಸರೇ ಹೇಳುವಂತೆ ಇದು ನಮ್ಮ ಮತ್ತು ನಿಮ್ಮ ನಡುವಿನ ಸಂಬಂಧ (ಹೋಲ್ಡಿಂಗ್). ಆದ್ದರಿಂದಲೇ ಕಂಪನಿಗೆ ವಿ2 ಹೋಲ್ಡಿಂಗ್ ಅಂತ ಹೆಸರಿಡಲಾಗಿದೆ. ನಮ್ಮಲ್ಲಿ ಯಾವುದೇ ರೀತಿಯ ಬಾಸಿಸಮ್ ಇತ್ಯಾದಿ ಸಮಸ್ಯೆಗಳಿಲ್ಲ. ಕೆಲಸಗಾರರಿಗಾಗಲಿ, ಗ್ರಾಹಕರಿಗಾಗಲಿ ಯಾವುದೇ ಗೊಂದಲ ಇರುವುದಿಲ್ಲ. ಯಾರೇ ಸಮಸ್ಯೆ ಎದುರಿಸಿದರೂ ನೇರವಾಗಿ ನನ್ನನ್ನೇ ಸಂರ್ಪಸುತ್ತಾರೆ. ಆದ್ದರಿಂದಲೇ ಕೆಲಸಗಳು ಸುಸೂತ್ರವಾಗಿ ಸಾಗುತ್ತದೆ. ನಂಬಿಕೆ ಮತ್ತು ಪಾರದರ್ಶಕತೆಯ ಮೇಲೆ ನಿರ್ವಣವಾಗಿರುವ ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್​ವೆುಂಟ್ ಪ್ರೖೆ. ಲಿ. ಈವರೆಗೆ 26 ಪ್ರಾಜೆಕ್ಟ್​ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ ಎನ್ನುತ್ತಾರೆ ವೆಂಕಟರಾಮರೆಡ್ಡಿ.

ಮೈಸೂರು ರಸ್ತೆಯ ಪ್ರಾಜೆಕ್ಟ್​ನಲ್ಲಿರುವ ಸೌಲಭ್ಯ

ದೇವಸ್ಥಾನ, ಅತ್ಯಾಧುನಿಕ ಜಿಮ್ನಾಷಿಯಂ, ಬಹುಪಯೋಗಿ ಸಭಾಂಗಣ, ಈಜುಕೊಳ, ಜಾಗಿಂಗ್ ಟ್ರ್ಯಾಕ್, ಒಳಾಂಗಣ ಆಟದ ಸೌಲಭ್ಯ,ಇಂಟರ್​ಕಾಮ್ ಸೌಲಭ್ಯ, ಒಳಚರಂಡಿ ಸಂಸ್ಕರಣಾ ಘಟಕ, ಮಳೆನೀರು ಕೊಯ್ಲು, ಮಕ್ಕಳ ಆಟದ ಮೈದಾನ, ಮುಂಭಾಗದ ಪ್ರವೇಶದ್ವಾರದಲ್ಲಿ ಮತ್ತು ಲಿಫ್ಟ್​ಗಳ ಬಳಿ ಸಿಸಿ ಕ್ಯಾಮರಾ, ವಿಶೇಷವಾದ ಕಾರ್ ಪಾರ್ಕಿಂಗ್, ಮುಖ್ಯ ದ್ವಾರದಲ್ಲಿ ಭದ್ರತಾ ಕಚೇರಿ, ಸೇವಕ ವಿಶ್ರಾಂತಿ ಕೊಠಡಿಗಳು, ಕಾವೇರಿ ನೀರು ಮತ್ತು ಬೋರ್​ವೆಲ್ ನೀರಿನ ವ್ಯವಸ್ಥೆ, ಸುರಕ್ಷತೆಗಾಗಿ ಸ್ವಯಂಚಾಲಿತ ಲಿಫ್ಟ್​ಗಳು, ಅಗ್ನಿಶಾಮಕ ಸುರಕ್ಷತೆಗಾಗಿ, ಸ್ಪಾ ಸೇರಿ ಇತರ ಸೌಲಭ್ಯಗಳು, ಮಕ್ಕಳಿಗೆ ಸೈಕ್ಲಿಂಗ್ ಇತ್ಯಾದಿ.

ನ್ಯಾಷನಲ್ ಕಾಲೇಜು ಮತ್ತು ರೆಡ್ಡಿ ನಂಟು

ನಾನು ಬಾಗೇಪಲ್ಲಿ ತಾಲೂಕಿನವ, ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಿಂದಲೇ ಎಚ್. ನರಸಿಂಹಯ್ಯ ಅವರ ಪರಿಚಯವಾಗಿದ್ದು, ಅಲ್ಲಿಂದ ನಂಟು ಬೆಳೆದಿದೆ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಕಂಡ ಸಂದರ್ಭ ಎಚ್​ಎನ್ ಅವರು ನನ್ನಲ್ಲಿ ಬಂದು 10,000 ರೂ. ದಾನ ಕೇಳಿದ್ದರು. ಆಗ ನಾನು 50 ಸಾವಿರ ರೂ. ಅಥವಾ 1 ಲಕ್ಷ ರೂ. ಕೇಳು ತಾತ ಎಂದೆ. ಅವಾಗ ಅವರು 50 ರೂ. ಸಾವಿರಕ್ಕೆ ಬೇಡಿಕೆ ಇಟ್ಟು ಕಾಲೇಜಿಗೆ ತುಂಬಾ ಅನುಕೂಲವಾಗುತ್ತೆ ಎಂದಿದ್ದರು. ಮತ್ತೆ ನನ್ನನ್ನು ಸದಸ್ಯನನ್ನಾಗಿಯೂ ಮಾಡಿದ್ದರು. ಅಲ್ಲಿಂದ ಕೊಠಡಿ ಕಟ್ಟಿಸು ವುದು, ಹಾಲ್, ಸ್ಕಾಲರ್​ಶಿಪ್ ಹೀಗೆ ಹಲವು ಸೇವೆ ಮಾಡುತ್ತಲೇ ಬಂದಿದ್ದೇನೆ. ಜಯನಗರ ನ್ಯಾಷನಲ್ ಕಾಲೇಜಿನ ಆಡಳಿತ ಮಂಡಳಿಯಲ್ಲೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಎಚ್​ಎನ್ ಆಶಯಗಳು, ಆಲೋಚನೆಗಳಿಗೆ ಸ್ಪಂದಿಸುವಂತಹ ಅವಕಾಶವಷ್ಟೇ ನನಗೆ ಸಿಕ್ಕಿದೆ ಎಂದು ರೆಡ್ಡಿ ಬಹಳ ಸರಳವಾಗಿ ಹೇಳುತ್ತಾರೆ.

ವಿ2 ಹೋಲ್ಡಿಂಗ್ಸ್​ನ ಮುಂದಿನ ಪ್ರಾಜೆಕ್ಟ್​ಗಳು

ಪ್ರಸ್ತುತ ಕೆಂಗೇರಿ ಬಳಿ ವಿ2 ಹೋಲ್ಡಿಂಗ್ಸ್​ನ ವಿ2 ವಜ್ರ ಎಲೆಗೆನ್ಸ್ ಪ್ರಾಜೆಕ್ಟ್ ನಿರ್ವಣದ ಹಂತದಲ್ಲಿದ್ದು, ಬಳಿಕ ಮಾಗಡಿ ರಸ್ತೆಯಲ್ಲಿ 2.25 ಎಕರೆಯಲ್ಲಿ ಒಂದು ಪ್ರಾಜೆಕ್ಟ್, ಗುಬ್ಬಲಾಳದಲ್ಲಿ ಸ್ವಂತ ಜಾಗದಲ್ಲಿ ಪ್ರೀಮಿಯಂ ಪ್ರಾಜೆಕ್ಟ್​ನಲ್ಲಿ 120 ವಸತಿ ಸಮುಚ್ಚಯ, ಆರ್.ಆರ್. ನಗರದಲ್ಲಿ 2 ಎಕರೆಯಲ್ಲಿ ಒಂದು ಪ್ರಾಜೆಕ್ಟ್, ಮತ್ತೊಂದು ಪ್ರಮುಖವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗ 6 ಎಕರೆಯಲ್ಲಿ ವಿಶೇಷ ವಿಲ್ಲಾ ನಿರ್ಮಾಣ ಯೋಜನೆ ಇವಿಷ್ಟು ‘ವಿ2 ಹೋಲ್ಡಿಂಗ್ಸ್’ನ ಭವಿಷ್ಯದ ಪ್ರಾಜೆಕ್ಟ್​ಗಳ ರೂಪುರೇಷೆಗಳು.

ಸರ್ಕಾರಿ ಶಾಲೆ ನವೀಕರಣದ ಗುರಿ

ಬಾಗೇಪಲ್ಲಿ ಶಾಸಕರು ನಮ್ಮ ಊರಿನಲ್ಲಿರುವ ಸರ್ಕಾರಿ ಶಾಲೆಯನ್ನು ನವೀಕರಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಡೀ ಶಾಲೆಯನ್ನು ಒಡೆದು ನೂತನ ಕಟ್ಟಡ ಕಟ್ಟಿಕೊಡುವ ಭರವಸೆ ನೀಡಿದ್ದೇನೆ. ಅದನ್ನು 6 ತಿಂಗಳೊಳಗಾಗಿ ಮಾಡಿಕೊಡಬೇಕೆಂದು ಅಂದುಕೊಂಡಿದ್ದೇನೆ ಎನ್ನುತ್ತಾರೆ ವೆಂಕಟರಾಮ ರೆಡ್ಡಿ.

ಬಡ ಮಕ್ಕಳಿಗೆ ಅನುಕೂಲ

ವರ್ಷದ ಹಿಂದೆ ನ್ಯಾಷನಲ್ ಕಾಲೇಜುಗಳ ಸಾಲಿಗೆ ಇಂಜಿನಿಯ ರಿಂಗ್ ಕಾಲೇಜನ್ನು ತಂದಿದ್ದೇವೆ. ಅದಕ್ಕೆ ಡಾ. ಎಚ್.ಎನ್ ಅವರ ಹೆಸರನ್ನೇ ಇಟ್ಟಿರುತ್ತೇವೆ. ಹೊಸ ಕೋರ್ಸ್​ಗಳನ್ನು ತರುವಂತಹ ಪ್ರಯತ್ನಗಳು ನಡೆಯುತ್ತಿವೆ. ನರ್ಸಿಂಗ್ ಕಾಲೇಜು, ಮೆಡಿಕಲ್ ಕಾಲೇಜನ್ನು ಮಾಡುವ ಉದ್ದೇಶವಿದೆ. ಇದಕ್ಕೆಲ್ಲ ಅನುದಾನ, ಜಾಗದ ಅವಶ್ಯಕತೆ ಇದೆ. ಅಮೇರಿಕದ ಹಳೇ ವಿದ್ಯಾರ್ಥಿಗಳು ನಮಗೆ ಕರೆ ನೀಡಿದ್ದಾರೆ. ಅವರಿಂದ ಸಾಕಷ್ಟು ಸಹಾಯವಾದರೆ, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ. ಈಗ ಇರುವ ವಿದ್ಯಾರ್ಥಿಗಳಿಗೂ ಆದಷ್ಟು ಸ್ಕಾಲರ್​ಶಿಪ್​ಗಳನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಶ್ರಮಿಸಲಾಗುತ್ತಿದೆ ಎನ್ನುತ್ತಾರೆ ವೆಂಕಟರಾಮ ರೆಡ್ಡಿ ಅವರು.

ಸಮಾಜಸೇವೆಯೂ ಮುಖ್ಯ

ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಹಿಂದೆ ನಮ್ಮ ಸ್ಕಾಲರ್​ಶಿಪ್​ನಿಂದ ಕಲಿತು ಬೆಳೆದಂತಹ ವಿದ್ಯಾರ್ಥಿಗಳು ಇನ್​ಫೋಸಿಸ್​ನಂಥ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು ಮಂದಿ ಪೊಲೀಸ್ ಇಲಾಖೆಯಲ್ಲೂ ಇದ್ದಾರೆ. ಅಲ್ಲದೆ, ಯಶವಂತಪುರದ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಮೂಲಕ ಹುಟ್ಟುಹಬ್ಬಗಳು, ವಿವಾಹ ವಾರ್ಷಿಕೋತ್ಸವ ಇತ್ಯಾದಿ ಆಚರಿಸುವುದು ರೂಢಿ. ಅಲ್ಲಿ 120 ಹೆಣ್ಣು ಮಕ್ಕಳಿದ್ದು, ಅವರಿಗೆ ಊಟ ಕೊಟ್ಟು ಬಹಳ ಸರಳವಾಗಿಯೇ ನಮ್ಮ ಸಂಭ್ರಮವನ್ನು ಆಚರಿಸುತ್ತೇವೆ. ಇಂಥ ಟ್ರಸ್ಟ್​ಗಳ ಮೂಲಕ ಮುಂದೆಯೂ ಸಮಾಜ ಸೇವೆ ಮಾಡುವ ಮನೋಭಾವ ಹೊಂದಿರುವುದಾಗಿ ತಿಳಿಸುತ್ತಾರೆ ವೆಂಕಟರಾಮರೆಡ್ಡಿ.