ನ್ಯೂಸ್

ಸಮಾಜಮುಖಿ ಕಾರ್ಯಕ್ಕೆ 'ವಿಜಯರತ್ನ' ಗರಿ; ಜನಸೇವೆಯೇ ಜನಾರ್ದನ ಸೇವೆ ಎಂದ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ

ಬೆಂಗಳೂರು: ವೃತ್ತಿಯಲ್ಲಿ ಪತ್ರಕರ್ತರು, ಪ್ರವೃತ್ತಿಯಲ್ಲಿ ಸಮಾಜಸೇವಕರಾಗಿರುವ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಅವರ ಸಮಾಜಸೇವೆ ಮೆಚ್ಚಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹದಿನೈದಕ್ಕೂ ಹೆಚ್ಚು ಪ್ರಶಸ್ತಿ-ಪುರಸ್ಕಾರ ಪಡೆದಿದ್ದರೂ ಯಾವುದೇ ಅಹಂ ಇಲ್ಲದೆ ಇಂದಿಗೂ ಜನರ ಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಿಗೆ ಏನೇ ಕಷ್ಟ ಬಂದರೂ ಚಿನ್ನಪ್ಪ ಅವರನ್ನು ನೆನೆಯುತ್ತಾರೆ. ಇವರು ಸಮಾಜಸೇವೆಯಿಂದಲೇ ಹೆಚ್ಚು ಜನಪ್ರಿಯರಾಗಿರುವುದು ವಿಶೇಷ.

ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಅವರು ಆನೇಕಲ್ ತಾಲೂಕಿನ ಮುತ್ತಾನಲ್ಲೂರು ನಿವಾಸಿಯಾಗಿದ್ದು, ತಾಲೂಕಿನ ಕಸಬಾ ಹೋಬಳಿಯ ಚಿಕ್ಕಹಾಗಡೆ ಗ್ರಾಮ ಇವರ ಜನ್ಮಸ್ಥಳ. ದಿವಂಗತ ಎ. ಎಲ್ಲಪ್ಪ ಮತ್ತು ರಾಮಕ್ಕ ದಂಪತಿಗೆ ನಾಲ್ವರು ಪುತ್ರರಿದ್ದು, ಚಿನ್ನಪ್ಪ ಅವರೇ ಹಿರಿಯರು. ಪತ್ನಿ ವೈ. ಸುಜಾತಾ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸಿರಿ ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ಅಧ್ಯಕ್ಷರಾಗಿದ್ದಾರೆ. ಹಿರಿಯ ಮಗಳು ತ್ರಿವೇಣಿ ಗಾಂಧಿ, ಕಿರಿಯ ಪುತ್ರಿ ಪ್ರಿಯಾಂಕಾ ಗಾಂಧಿ. ಚಿನ್ನಪ್ಪ ಅವರು ಆನೇಕಲ್​ನಲ್ಲಿ ಪೂರ್ವ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಎಎಸ್​ಬಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ಗೋಪಾಲ್​ರಾಜು ಕಾಲೇಜಿನಲ್ಲಿ ಪದವಿಯಲ್ಲಿ ಬಿ.ಎ. ವ್ಯಾಸಂಗ ಮಾಡಿದ್ದಾರೆ. 25 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನ: ಚಿನ್ನಪ್ಪ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ. ಜತೆಗೆ ಚಿನ್ನಪ್ಪಗೆ ಗೌರವ ಡಾಕ್ಟರೇಟ್ ಕೂಡ ಬಂದಿದೆ. ಹಲವಾರು ಸಂಘ-ಸಂಸ್ಥೆಗಳೂ ಪ್ರಶಸ್ತಿ ನೀಡಿ ಗೌರವಿಸಿವೆ. ದೆಹಲಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಭಾರತ ಜ್ಯೋತಿ ಪ್ರಶಸ್ತಿ ಕೂಡ ಲಭಿಸಿದೆ. ಪತ್ರಕರ್ತರಾಗಿರುವ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಅವರು ಪತ್ರಿಕೆಯೊಂದನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಸಮಾಜಮುಖಿ ಕೆಲಸಗಳಿಗೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಚಿನ್ಮಯ ಸೇವಾ ಸಂಸ್ಥೆಯಿಂದ ಸಮಾಜಸೇವೆ

ಸಮಾಜ ಸೇವೆ ಮಾಡಲೆಂದು 26 ವರ್ಷಗಳ ಹಿಂದೆ ಚಿನ್ಮಯ ಸೇವಾ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ 18 ರಾಷ್ಟ್ರೀಯ ಭಾವೈಕತೆ ಶಿಬಿರ ಹಮ್ಮಿಕೊಂಡಿದ್ದಾರೆ. ಚಂದಾಪುರದಲ್ಲಿರುವ ಮಹೇಶ್ ಮತ್ತು ನಾಗವೇಣಿ ಅವರ ಜತೆಗೂಡಿ ಈ ಸಂಸ್ಥೆಯ ಮೂಲಕ ಹಲವು ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನೆಹರು ಕೇಂದ್ರ ಇವರ ಸಮಾಜಮುಖಿ ಕೆಲಸ ಗುರುತಿಸಿ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿತ್ತು. ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಜ್ಯಮಟ್ಟದ ಯುವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಇದರಿಂದ ಮತ್ತಷ್ಟು ಉತ್ತೇಜನಗೊಂಡು ಸಮಾಜಮುಖಿ ಕೆಲಸಗಳತ್ತ ಮುಖ ಮಾಡಿದ್ದಾರೆ.

ಇದನ್ನು ಗಮನಿಸಿದ ಕೇಂದ್ರ ಸರ್ಕಾರ, 2010ರಲ್ಲಿ ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದರು. ನಂತರ ಚಿನ್ಮಯ ಸೇವಾ ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಮತ್ತು ನಾಗವೇಣಿ ಅವರೂ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದರು. ಈ ಮೂವರ ಜೋಡಿ ಒಟ್ಟಿಗೆ ಇಂದಿಗೂ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಹಲವು ಸಂಘ-ಸಂಸ್ಥೆಗಳು ಆರಂಭವಾಗಲು ಇವರು ಪ್ರೇರಣೆಯಾಗಿದ್ದಾರೆ.

ಸಂವಿಧಾನ ಪುಸ್ತಕ ವಿತರಣೆ

ಚಿನ್ಮಯ ಸೇವಾ ಸಂಸ್ಥೆಯ ಮೂಲಕ 11 ವರ್ಷಗಳ ಕಾಲ ನಿರಂತರವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಯಾದ ಮಹೇಶ್ ಅವರ ನೇತೃತ್ವದಲ್ಲಿ ಉಚಿತವಾಗಿ ನೋಟ್ ಪುಸ್ತಕ ಮತ್ತು ಬ್ಯಾಗ್​ಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ. ಸಂಸ್ಥೆಯಿಂದ ಕಳೆದ ವರ್ಷ 1 ಸಾವಿರ ಮಕ್ಕಳಿಗೆ ಸಂವಿಧಾನದ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಇದರ ಉದ್ದೇಶ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದಾಗಿದೆ. ಹಲವು ಶಾಲಾ-ಕಾಲೇಜುಗಳಲ್ಲಿ ನಾಯಕತ್ವದ ಮತ್ತು ತರಬೇತಿ ಶಿಬಿರ ಆಯೋಜಿಸಲಾಗಿದೆ. ಈ ಸಂಸ್ಥೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುಲ್ಕ ಮತ್ತು ಸಮವಸ್ತ್ರಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಆನೇಕಲ್ ತಾಲೂಕಿನಲ್ಲಿ ಚಿನ್ಮಯ ಸೇವಾ ಸಂಸ್ಥೆ, ಡಾ.ಸಿ.ವೈ.ಸಿ. ಸಮಾಜ ಸೇವಾ ಟ್ರಸ್ಟ್​ನಿಂದ 110 ಸರ್ಕಾರಿ ಶಾಲೆಗಳಿಗೆ ಡಸ್ಟ್ ಬಿನ್, ಬಕೆಟ್ ವಿತರಣೆ ಮಾಡಲಾಗಿದೆ.

ಸಹೋದರನ ಅನಾರೋಗ್ಯವೇ ಪ್ರೇರಣೆ

ಎರಡನೇ ಸಹೋದರ ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವಂತೆ ವೈದ್ಯರು ಹೇಳಿದ್ದರು. ಆ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್, ಇಲ್ಲಿನ ಕಾಲೇಜಿನ ಯುವಕರ ಬಳಿ ಕೇಳಿದರೆ ಖಂಡಿತಾ ನಿಮಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು. ನಂತರ ಯುವಕರನ್ನು ಸಂರ್ಪಸಿದಾಗ ಗುರುತು ಪರಿಚಯ ಇಲ್ಲದೇ ರಕ್ತದಾನ ಮಾಡಿ ಸಹೋದರನ ಜೀವ ಉಳಿಸಿದ್ದರು. ಆಗ ಚಿನ್ನಪ್ಪ ಅವರು ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ ಸಮಾಜಸೇವಾ ಕಾರ್ಯಕರ್ತನಾಗಿ ಸೇರ್ಪಡೆಯಾದರು. ಅಲ್ಲಿ ಗಿಡನೆಡುವ ಕಾರ್ಯಕ್ರಮ, ಆರೋಗ್ಯ ಶಿಬಿರ, ಕ್ರೀಡಾಕೂಟ, ನಾಯಕತ್ವ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಇದನ್ನು ಆನೇಕಲ್ ತಾಲೂಕಿನಲ್ಲಿ ಸಂಘಟನೆ ಮಾಡಿದ್ದರು. ಪತ್ರಿಕಾ ವೃತ್ತಿಯ ಜತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಸಮಾಜಮುಖಿ ಕೆಲಸಗಳಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಗಿಡ ನೆಡುವ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸುತ್ತಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ಮಹಿಳಾ ಕ್ರೀಡಾಕೂಟ ಮತ್ತು ಯುವ ಜನರ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬರುತ್ತಿದ್ದರು.

ನನ್ನ ಬೆನ್ನೆಲುಬು ಇವರೇ

ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಪ್ರಭಾಕರ್ ರೆಡ್ಡಿ (ಬಾಬಣ್ಣ), ವಿಧಾನಪರಿಷತ್ತಿನ ಸದಸ್ಯ ಮತ್ತು ಚಲನಚಿತ್ರ ನಿರ್ವಪಕ ಸಿ.ಆರ್.ಮನೋಹರ್, ವಿಧಾನಪರಿಷತ್ ಮಾಜಿ ಸದಸ್ಯ ಬಿ.ಟಿ ದಯಾನಂದ ರೆಡ್ಡಿ, ಪತ್ರಕರ್ತ ಹೆಬ್ಬುಗೋಡಿ ಮಂಜುನಾಥ್ ಅವರು ಬೆನ್ನೆಲುಬಾಗಿ ನಿಂತು ನನ್ನ ಕೆಲಸ ಕಾರ್ಯಗಳಿಗೆ ಬೆಂಬಲ ನೀಡುತ್ತಾರೆ. ಸರ್ಕಾರಿ ಅಧಿಕಾರಿಗಳಾದ ಜಿ.ರಾಮೇಗೌಡರು, ನಾರಾಯಣಗೌಡ ಮತ್ತು ಐಎಎಸ್ ನಿವೃತ್ತ ಅಧಿಕಾರಿಗಳಾದ ಡಾ. ಸಿ. ಸೋಮಶೇಖರ್ ಮತ್ತು ಐ.ಆರ್. ಪೆರುಮಾಳ್ ಮಾರ್ಗದರ್ಶನದಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿನ್ಮಯ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ನನ್ನ ಎಲ್ಲ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮುಂದಾಳತ್ವ ವಹಿಸುತ್ತಾರೆ. ಮಹೇಶ್ ಅವರ ನೇತೃತ್ವದಲ್ಲಿ ಅಂತಾರಾಜ್ಯ ಕಲಾ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. 12 ರಾಜ್ಯದ ಕಲಾವಿದರನ್ನು ಸೇರಿಸಿ 18 ಕಲಾಮೇಳಗಳನ್ನು ಆಯೋಜಿಸಲಾಗಿತ್ತು ಎನ್ನುತ್ತಾರೆ ಚಿನ್ನಪ್ಪ ಹಾಗಡೆ.

ಪತ್ನಿ ಸುಜಾತಾ ಗ್ರಾಪಂ ಮಾಜಿ ಅಧ್ಯಕ್ಷೆ

ಚಿನ್ನಪ್ಪ ಅವರ ಮಡದಿ ವೈ. ಸುಜಾತಾ ಅವರು 2015ರಲ್ಲಿ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. 5 ವರ್ಷಗಳ ಕಾಲ 15 ಕೋಟಿ ರೂಪಾಯಿಗೂ ಅಧಿಕ ಕಾಮಗಾರಿ ಮಾಡಿಸಿದ್ದಾರೆ. ತಾಲೂಕಿನ ನಾಲ್ಕು ಕಡೆ ನೂತನ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದರು. 9 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದ್ದರು. ಎಲ್ಲ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ನಿರ್ವಣದ ಕಾಮಗಾರಿಯನ್ನು ಮಾಡಿದ್ದರು. ವಿಶೇಷ ಅನುದಾನ ತಂದು ವಿವಿಧ ಕಾಮಗಾರಿ ಮಾಡಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸಿದ್ದಾರೆ. ಇವರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಶಿವಣ್ಣ ಅವರು ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿಗೆ ಪ್ರೋತ್ಸಾಹಿಸಿದ್ದರು.

ನಾನು ಬಾಲ್ಯದಿಂದಲೂ ಪತ್ರಿಕೆ ಓದಿಕೊಂಡು ಬಂದಿದ್ದೇನೆ. ನನ್ನ ಕಾರ್ಯ ಕ್ರಮಗಳ ಸುದ್ದಿಗಳನ್ನು ವಿಜಯವಾಣಿ ಪ್ರಕಟಿಸಿದೆ. ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರದಿಂದ ಗ್ರಾಮೀಣ ಭಾಗದ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಗಿದೆ. ಪ್ರತಿಭೆಗಳನ್ನು ಹೊರತರುವ ಕೆಲಸವನ್ನು ವಿಜಯವಾಣಿ ಮಾಡುತ್ತಿದೆ. ನನ್ನ ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ನೀಡಲಾಗಿದೆ. ಇದು ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಸ್ಪೂರ್ತಿ ನೀಡಿದೆ. ಈ ಮೂಲಕ ವಿಜಯವಾಣಿ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸುತ್ತೇನೆ. | ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಸಮಾಜಸೇವಕರು

ರಾಜಕೀಯದಲ್ಲಿ ಹಲವು ಏಳುಬೀಳು

ಸಮಾಜಸೇವಕನಾಗಿ ಗುರುತಿಸಿಕೊಂಡಿರುವ ಚಿನ್ನಪ್ಪ ಅವರು ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಮುಂದಾಗಿದ್ದರು. ಆಗ ಪರಿಚಿತರಾದ ಸಿ.ಎಲ್. ಮುನಿಯಾಲಪ್ಪ ಅವರು ಬಹುಜನ ಸಮಾಜ ಪಾರ್ಟಿಯ (ಬಿಎಸ್​ಪಿ) ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಅವರನ್ನು ಇವರಿಗೆ ಪರಿಚಯಿಸಿದ್ದರು. ಆಗ ಅವರು ಚಿನ್ನಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಅದಕ್ಕೆ ಚಿನ್ನಪ್ಪ ಅವರು, ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಹೇಳಿ ಒಲ್ಲೆ ಎಂದಿದ್ದರು. ಹಣ ಬೇಡ ಸೇವೆ ಮಾಡುವ ಮನೋಭಾವನೆ ಇದ್ದರೆ ನಮ್ಮ ಜತೆ ಬನ್ನಿ ಎಂದು ಹೇಳಿ ಅವರಿಗೆ ಬಿ ಫಾಮ್ರ್ ನೀಡಿದ್ದರು.

ಆ ಚುನಾವಣೆಯಲ್ಲಿ 20 ಸಾವಿರ ಮತಗಳನ್ನು ಪಡೆದಿದ್ದರು. ನಂತರ ಚಿನ್ನಪ್ಪ ಅವರನ್ನು ಮಾಯಾವತಿ ಅವರು ರಾಜ್ಯ ಕಾರ್ಯದರ್ಶಿ, ರಾಜ್ಯ ಖಜಾಂಚಿಯಾಗಿ ನೇಮಿಸಿದ್ದರು. ನಾಲ್ಕು ವರ್ಷ ಆನೇಕಲ್ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಸಮಾಜದಲ್ಲಿರುವ ಅಸಮಾನತೆಯ ಬಗ್ಗೆ ಅರಿವು ಮೂಡಿಸಿ ಹೋರಾಟ ಮಾಡುತ್ತಿದ್ದರು. ನಂತರ ವಿಧಾನಸಭಾ ಚುನಾವಣೆಯಲ್ಲಿಯೂ ಬಿಎಸ್​ಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ನಂತರ ಲೋಕಸಭೆಗೆ ಸ್ಪರ್ಧಿಸಿ ಕಾರಣಾಂತರಗಳಿಂದ ನಾಮಪತ್ರ ಹಿಂಪಡೆದಿದ್ದರು. ನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡು ಸಮಾಜಮುಖಿ ಕೆಲಸ ಮುಂದುವರಿಸಿದ್ದಾರೆ.

ನನ್ನ ಮುಂದಿನ ಗುರಿ

ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದಲ್ಲೂ ಮೌಲ್ಯಗಳು ಕುಸಿಯುತ್ತಿದೆ. ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಮುಂದಿನ ದಿನಗಳಲ್ಲಿ ಚಿನ್ಮಯ ಸೇವಾ ಸಂಸ್ಥೆಯಿಂದ ಹೆಚ್ಚಿನ ಕೊಡುಗೆ ನೀಡಲಿದ್ದೇವೆ. ಶಾಲಾ-ಕಾಲೇಜುಗಳಲ್ಲಿ ಯುವಜನರಿಗೆ ಪರಿಸರ, ಕ್ರೀಡೆ, ಕಲೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎನ್ನುತ್ತಾರೆ ಚಿನ್ನಪ್ಪನವರು.

ವೃತ್ತಿಯಲ್ಲಿ ಪತ್ರಕರ್ತರು

ಆನೇಕಲ್ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿನ ಗ್ರಾಮಾಂತರ ಚಟುವಟಿಕೆಗಳನ್ನು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಮಾಡಬೇಕೆಂಬ ಆಶಯದಲ್ಲಿ ಹಿರಿಯ ಪತ್ರಕರ್ತ ಸಿ.ಆರ್.ವಿಜಯ್ಕುಮಾರ್ ಮತ್ತು ಮಹೇಶ್ ಅವರ ನೇತೃತ್ವದಲ್ಲಿ ‘ನನ್ನ ಬೆಂಗಳೂರು’ ಕನ್ನಡ ಮಾಸ ಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದರ ಮೂಲ ಉದ್ದೇಶ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಸಾಮಾಜಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟ ಮಾಡುವುದಾಗಿದೆ. ಈ ಮೂಲಕ ಗ್ರಾಮೀಣ ಯುವಕರಲ್ಲಿ ಅಡಗಿರುವ ಪ್ರತಿಭೆ ಹೊರ ತರುವುದಾಗಿದೆ. ಸಮಾಜದ ಅಂಕು-ಡೊಂಕು ತಿದ್ದುವ ಉದ್ದೇಶದಿಂದ ಮತ್ತು ಸಮಾಜಮುಖಿ ಕೆಲಸ ಮಾಡಬೇಕೆಂದು ಪತ್ರಿಕಾರಂಗದಲ್ಲಿಯೂ ಚಿನ್ನಪ್ಪ ಗುರುತಿಸಿಕೊಂಡಿದ್ದಾರೆ.

ಇವರಿಗೆ ಧನ್ಯವಾದ ಹೇಳುತ್ತೇನೆ

ನನಗೆ ಜನ್ಮಕೊಟ್ಟ ತಂದೆ ತಾಯಿಗೆ, ನನ್ನ ಬಾಳಸಂಗಾತಿಯಾದ ಸುಜಾತಾ ಅವರಿಗೆ ಧನ್ಯವಾದ ಹೇಳಲೇಬೇಕು. ಕಳೆದ 30 ವರ್ಷಗಳಿಂದ ನಾನು ಸಮಾಜಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಸಮಾಜಮುಖಿ ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡುತ್ತಿರುತ್ತೇನೆ. ಶಿಬಿರಗಳಲ್ಲಿ ಭಾಗವಹಿಸಲು ಹಲವು ದಿನಗಳ ಕಾಲ ಮನೆಯನ್ನು ಬಿಟ್ಟು ಹೋಗುತ್ತಿರುತ್ತೇನೆ. ನನ್ನ ಪತ್ನಿಯೇ ಮಕ್ಕಳು ಮತ್ತು ಮನೆಯನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಆಕೆ ನನಗೆ ಮಡದಿ, ಸ್ನೇಹಿತೆ ಮತ್ತು ಎರಡನೇ ತಾಯಿ, ಸುಜಾತಾ ಕೂಡ ನನ್ನ ಸಮಾಜಮುಖಿ ಕೆಲಸಗಳಿಗೆ ಬೆಂಬಲವಾಗಿದ್ದಾರೆ. ಚಿನ್ಮಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಮತ್ತು ಹಿರಿಯ ಪತ್ರಕರ್ತ ವಿಜಯಕುಮಾರ್ ಅವರಿಗೆ ಈ ಮೂಲಕ ಧನ್ಯವಾದ ಹೇಳಲು ಬಯಸುವೆ ಎನ್ನುತ್ತಾರೆ ಚಿನ್ನಪ್ಪ.

ಸಮಾಜ ಸೇವೆಯ ಆತ್ಮತೃಪ್ತಿ

ತಂದೆ ತಾಯಿಗಳಿಂದ ಜನ್ಮವನ್ನು ಭಿಕ್ಷೆಯನ್ನಾಗಿ ಪಡೆಯುತ್ತೇವೆ. ಪ್ರಕೃತಿ ಗಾಳಿ, ನೀರು, ಬೆಳಕನ್ನು ಪುಕಟ್ಟೆಯಾಗಿ ನೀಡುತ್ತದೆ. ಮನುಷ್ಯನದು ಪರಾವಲಂಬಿ ಜೀವನವಾಗಿದೆ. ಎಲ್ಲವನ್ನು ಸಮಾಜದಿಂದ ಪಡೆಯುತ್ತೇವೆ. ಹೀಗಾಗಿ ನಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ನಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಸಮಾಜ ಸೇವೆ ನನ್ನ ಮನಸ್ಸಿಗೆ ನೆಮ್ಮದಿ ಮತ್ತು ಆತ್ಮತೃಪ್ತಿ ನೀಡಿದೆ ಎನ್ನುತ್ತಾರೆ ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ.

ಚಿನ್ನಪ್ಪ ಅವರೊಂದಿಗೆ 33 ವರ್ಷಗಳ ಒಡನಾಟವಿದೆ. ಅಂದಿನಿಂದ ಇಂದಿನವರೆಗೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರ ಪ್ರೇರಣೆಯಿಂದ ಆನೇಕಲ್ ತಾಲೂಕಿನಲ್ಲಿ ಹೆಚ್ಚಿನ ಯುವಕರ ಸಂಘಗಳನ್ನು ಸ್ಥಾಪಿಸಿದ್ದಾರೆ. ಯುವಕರನ್ನು ಸಂಘಟಿತರನ್ನಾಗಿ ಮಾಡುತ್ತಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸ್ವಲ್ಪವೂ ಬದಲಾಗದೆ ಅಹಂ ಇಲ್ಲದೆ ಸಮಾಜಸೇವೆ ಮಾಡಿಕೊಂಡು ಬರುತ್ತಿದ್ದಾರೆ. | ವಿಜಯ್ ಕುಮಾರ್ ಹಿರಿಯ ಪತ್ರಕರ್ತರು ನೆಹರು ಯುವ ಕೇಂದ್ರದಲ್ಲಿ ಪರಿಚಿತರಾದ ಚಿನ್ನಪ್ಪ ಮತ್ತು ನಾನು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯ ಮಾಡಿಕೊಂಡು ಬಂದೆವು. ನಂತರ ಚಿನ್ನಪ್ಪ, ನಾನು ಮತ್ತು ನಾಗವೇಣಿ ಅವರು ಚಿನ್ಮಯ ಸೇವಾ ಸಂಸ್ಥೆಯನ್ನು ಆರಂಭಿಸಿ 25 ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಿದೆ. ಚಿನ್ನಪ್ಪ ಅವರು ಸಮಾಜಸೇವೆಗೆ ಸದಾ ಸಿದ್ಧರಿರುತ್ತಾರೆ. | ಮಹೇಶ್ ಚಿನ್ಮಯ ಸೇವಾ ಸಂಸ್ಥೆ ಕಾರ್ಯದರ್ಶಿ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿ ದ್ದಾರೆ. ಸಂಘಟನೆಗಳಿಗೆ ಭದ್ರವಾದ ಬುನಾದಿ ಹಾಕಿಕೊಟ್ಟಿದ್ದಾರೆ. ನಮ್ಮ ಹೋರಾಟ ಗುರುಗಳು ಚಿನ್ನಪ್ಪ ಅವರು, ಜಾತಿ-ಧರ್ಮಕ್ಕೆ ಪ್ರಾಮುಖ್ಯತೆ ನೀಡದೆ ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ. ಅವರನ್ನು ಸ್ಪೂರ್ತಿಯನ್ನಾಗಿ ಪಡೆದು ಹಲವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. | ರವಿಕುಮಾರ್, ಚಿನ್ನಪ್ಪ ಆತ್ಮೀಯರು, ಕನ್ನಡಪರ ಹೋರಾಟಗಾರ