ನ್ಯೂಸ್

ಎನ್​ಕೌಂಟರ್​ ಆಗ್ರಹದ ಬೆನ್ನಲ್ಲೇ ಆರೋಪಿಗೆ ಗುಂಡೇಟು! ಪತ್ನಿಗೆ ಬೆಂಕಿಯಿಟ್ಟವನಿಗೆ ನರಕ ದರ್ಶನ | Dowry Murder Case

ಮೋಹನ್​ ಶೆಟ್ಟಿ

UP Dowry Murder Case: ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ಗೃಹಿಣಿಯೊಬ್ಬಳು ಭೀಕರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ ಮಾಡಬೇಕು, ಮಗಳಿಗೆ ಬಂದ ಸ್ಥಿತಿಯೇ ಅವರಿಗೂ ಬರಬೇಕು ಎಂದು ಮೃತ ಯುವತಿಯ ತಂದೆ ಸಿಎಂ ಯೋಗಿ ಆದಿತ್ಯನಾಥ್​ಗೆ ಆಗ್ರಹಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಪರಾರಿಯಾಗಲು ಯತ್ನ!

ಮೃತ ನಿಕ್ಕಿ ಭಾಟಿಯ (28) ಪತಿ ವಿಪಿನ್ ಭಾಟಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು, ಆರೋಪಿಯನ್ನು ಕಸ್ಟಡಿಗೆ ತರುವ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಅಲರ್ಟ್​ ಆದ ಖಾಕಿ ಪಡೆ, ಕಿಡಿಗೇಡಿಯ ಕಾಲಿಗೆ ಗುಂಡು ಹಾರಿಸಿದೆ. ಗಾಯಗೊಂಡ ಆರೋಪಿ ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.

ಪೊಲೀಸ್​ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಆರೋಪಿ ವಿಪಿನ್​ನನ್ನು ಜೈಲಿಗೆ ಕರೆದುಕೊಂಡು ಹೋಗುವ ಮೊದಲು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಧಿಕಾರಿಯೊಬ್ಬರ ಜೇಬಿನಿಂದ ಪಿಸ್ತೂಲನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ವಿಪಿನ್​, ಸಾಕಷ್ಟು ಎಚ್ಚರಿಕೆ ಕೊಟ್ಟಿದ್ದರೂ ಸಹ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣವೇ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದರು ಎಂದು ಹೇಳಲಾಗಿದೆ. 

ಮಗಳನ್ನು ನೆನೆದು ಕಣ್ಣೀರು

ಈ ಕುರಿತು ‘ಎನ್​ಡಿಟಿವಿ’ಗೆ ಪ್ರತಿಕ್ರಿಯಿಸಿರುವ ಯುವತಿಯ ತಂದೆ ಭಿಕಾರಿ ಸಿಂಗ್ ಪೈಲಾ, “ಅವರು ಕೊಲೆಗಾರರು. ಮಗಳನ್ನು ಕೊಂದ ಆಕೆಯ ಅತ್ತೆ-ಮಾವ, ಗಂಡನನ್ನು ಗುಂಡಿಕ್ಕಿ ಹತ್ಯೆಗೈಯಬೇಕು. ಅವರ ಮನೆಯನ್ನು ಛಿದ್ರಗೊಳಿಸಬೇಕು. ನನ್ನ ಪುತ್ರಿ ಬ್ಯೂಟಿ ಪಾರ್ಲರ್ ನಡೆಸುವ ಮೂಲಕ ಮಗನನ್ನು ನೋಡಿಕೊಳ್ಳುತ್ತಿದ್ದಳು. ಅಂಥವಳಿಗೆ ಈ ರೀತಿ ಚಿತ್ರಹಿಂಸೆ ನೀಡಿದ್ದಾರೆ. ಅವರ ಇಡೀ ಕುಟುಂಬವೇ ಪಿತೂರಿಯಲ್ಲಿ ಭಾಗಿಯಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ.

ಯುಪಿ ಸಿಎಂ ತಂದೆ ಮನವಿ!​

“ಜೇಬುಗಳ್ಳರ ಕಾಲಿಗೆ ಗುಂಡು ಹಾರಿಸುತ್ತಾರೆ. ಆದರೆ, ಇಂಥವರಿಗೆ ಯಾಕಿಲ್ಲ? ಈ ಕೊಲೆಗಾರರನ್ನು ಎನ್​ಕೌಂಟರ್​ ಮಾಡುವುದಿಲ್ಲವೇ? ಇದು ಬಿಜೆಪಿ ಸರ್ಕಾರ. ವಿಪಿನ್ (ನಿಕ್ಕಿಯ ಪತಿ) ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಈ ದಾರಿಯಿಂದ ನನ್ನ ಮಗಳನ್ನು ದೂರವಿಡಲು ಬಯಸಿದ್ದ. ಆದರೆ, ಅದು ಸಾಧ್ಯವಾಗಲಿಲ್ಲ. ನನ್ನ ಪುತ್ರಿಗೆ ಬಂದ ಸ್ಥಿತಿಯೇ ಅವರಿಗೂ ಬರಬೇಕು. ಈ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ನಿಕ್ಕಿ ತಂದೆ ಯುಪಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ,(ಏಜೆನ್ಸೀಸ್).