ಪಂಜಾಬ್‌ನಲ್ಲಿ ವರದಕ್ಷಿಣೆಗಾಗಿ ಪತ್ನಿಯ ಮೇಲೆ ಬೀದಿಯಲ್ಲೇ ಹಲ್ಲೆ 
ನ್ಯೂಸ್

Dowry Harassment: ವರದಕ್ಷಿಣೆಗೆ ಥಾರ್‌ ಕಾರು ಬೇಕಂತೆ.. ರಸ್ತೆಯಲ್ಲೇ ಹೆಂಡತಿಯ ಜುಟ್ಟು ಹಿಡಿದು ರಾಕ್ಷಸನಂತೆ ಥಳಿಸಿದ ಪತಿ!

ವರದಕ್ಷಿಣೆಯಾಗಿ ಮಹೀಂದ್ರಾ ಥಾರ್ ಕಾರು ಹಾಗೂ ಬೈಕ್ ತಂದುಕೊಡಲಿಲ್ಲವೆಂಬ ಕಾರಣಕ್ಕೆ, ಪಂಜಾಬ್‌ನ ಲೂಧಿಯಾನದಲ್ಲಿ ಪತಿಯೋರ್ವ ತನ್ನ ಪತ್ನಿಯ ಜುಟ್ಟು ಹಿಡಿದು ಬೀದಿಯಲ್ಲೇ ಕ್ರೂರವಾಗಿ ಥಳಿಸಿದ್ದು, ಈ ಪೈಶಾಚಿಕ ಕೃತ್ಯದ ಭೀಕರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿವೆ.

Ludhiana dowry Assault: ಪ್ರೀತಿಸಿ ಮದುವೆಯಾಗಿದ್ದ ಪತಿಯೇ ವರದಕ್ಷಿಣೆ ಆಸೆಗೆ ಬಿದ್ದು ಪತ್ನಿಯ ಮೇಲೆ ಪೈಶಾಚಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಮಹೀಂದ್ರಾ ಥಾರ್ ಎಸ್‌ಯುವಿ (SUV) ಕಾರು ಹಾಗೂ ಹೊಸ ಬೈಕ್ ಕೊಡುವಂತೆ ಪೀಡಿಸಿ, ರಸ್ತೆಯಲ್ಲೇ ಪತ್ನಿಯ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಲೂಧಿಯಾನದ ಜಸ್ಸಿಯಾ ಗ್ರೀನ್ ಎನ್‌ಕ್ಲೇವ್ ನಿವಾಸಿ ಟ್ವಿಂಕಲ್ ಹಲ್ಲೆಗೊಳಗಾದ ದುರದೃಷ್ಟಕರ ಮಹಿಳೆ. ಈಕೆಯ ಪತಿ ರೀತಿಶ್ ಶರ್ಮಾ ಈ ಕೃತ್ಯ ಎಸಗಿದ ಆರೋಪಿ. ಪ್ರೀತಿಸಿ ಮದುವೆಯಾಗಿದ್ದರೂ, ಮದುವೆಯಾದ ಮೂರೇ ತಿಂಗಳಿಗೆ ಪತಿಯ ಅಸಲಿ ರೂಪ ಹೊರಬಂದಿತ್ತು ಎಂದು ಸಂತ್ರಸ್ತೆ ಆಳಲು ತೋಡಿಕೊಂಡಿದ್ದಾರೆ.

ಏನಿದು ಘಟನೆ?

ಟ್ವಿಂಕಲ್ ನೀಡಿರುವ ಮಾಹಿತಿ ಪ್ರಕಾರ, ಮದುವೆಯಾದ ಮೂರು ತಿಂಗಳಲ್ಲೇ ರೀತಿಶ್ ಆಕೆಯ ಕಾರ್ಡ್ ಬಳಸಿ 50,000 ರೂಪಾಯಿ ಸಾಲ ಪಡೆದಿದ್ದ. ಆ ನಂತರ ಮಹೀಂದ್ರಾ ಥಾರ್ ಕಾರು ಕೊಡಿಸುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಇತ್ತೀಚೆಗೆ ನವರಾತ್ರಿ ಹಬ್ಬದ ಸಮಯದಲ್ಲಿ ಹೊಸ ಮೋಟಾರ್ ಸೈಕಲ್ ಕೊಡಿಸುವಂತೆ ಪಟ್ಟು ಹಿಡಿದಿದ್ದ. ಇದಕ್ಕೆ ಟ್ವಿಂಕಲ್ ಒಪ್ಪದಿದ್ದಾಗ, ಮನೆಯೊಳಗೆ ಹಿಗ್ಗಾಮುಗ್ಗಾ ಹೊಡೆದು, ಬಳಿಕ ಜುಟ್ಟು ಹಿಡಿದು ರಸ್ತೆಗೆ ಎಳೆದ ತಂದು ಸಾರ್ವಜನಿಕವಾಗಿ ಥಳಿಸಿದ್ದಾನೆ.

ಸಹೋದರನ ಮೇಲೆಯೂ ಹಲ್ಲೆ

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಟ್ವಿಂಕಲ್ ಸಹೋದರ ಗೌರವ್ ಹಾಗೂ ಆಕೆಯ ತಂದೆಯ ಮೇಲೆಯೂ ಆರೋಪಿ ಕಡೆಯವರು ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಗೌರವ್ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಹೊಲಿಗೆ ಹಾಕಲಾಗಿದೆ.

ಇದನ್ನೂ ಓದಿ: ಸೌರಭ್ ‘ಬ್ಲೂ ಡ್ರಮ್’ ಕೊಲೆ ಕೇಸ್: ಗಲ್ಲು ಶಿಕ್ಷೆಯಿಂದ ಬಚಾವಾಗಲು ಹೈಕೋರ್ಟ್‌ ಮೊರೆ ಹೋದ ಅಪರಾಧಿಗಳು | Blue Drum Murder Case

ಪೊಲೀಸರಿಂದ ವಿಳಂಬದ ಆರೋಪ

ತಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆದಿದ್ದರೂ ಜಗತ್‌ಪುರಿ ಪೊಲೀಸ್ ಚೌಕಿಯ ಪೊಲೀಸರು ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆ ಟ್ವಿಂಕಲ್ ಮತ್ತು ಆಕೆಯ ಕುಟುಂಬಸ್ಥರು ದೂರಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಗತ್‌ಪುರಿ ಪೊಲೀಸ್ ಚೌಕಿ ಉಸ್ತುವಾರಿಗಳು, ಸಂತ್ರಸ್ತೆಯ ವೈದ್ಯಕೀಯ ವರದಿ ತಲುಪಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)