Meerut Murder Case: ದೇಶವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ಮೀರತ್ನ ಸೌರಭ್ ರಜಪೂತ್ ‘ಬ್ಲೂ ಡ್ರಮ್’ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ, ಆ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಮೇಲ್ಮನವಿ ಹೂಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೆಪ್ಟೆಂಬರ್ 30 ರಂದು ಇಬ್ಬರನ್ನೂ ಅಪರಾಧಿಗಳೆಂದು ನಿರ್ಣಯಿಸಿ, ಅಕ್ಟೋಬರ್ 14 ರಂದು ಮರಣದಂಡನೆ ಹಾಗೂ ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಇದೀಗ ಆ ಆದೇಶವನ್ನು ರದ್ದುಪಡಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಅಪರಾಧಿಗಳು ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದು, ಮುಂದಿನ ವಾರ ದ್ವಿಪೀಠದಲ್ಲಿ ಇದರ ವಿಚಾರಣೆ ನಡೆಯುವ ಸಾದ್ಯತೆಯಿದೆ.
ಮೀರತ್ನ ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೌರಭ್ ರಜಪೂತ್ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಸೌರಭ್ ಅವರ ಮೃತದೇಹವನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಇಟ್ಟು, ಅದಕ್ಕೆ ಸಿಮೆಂಟ್ ಮತ್ತು ಕಾಂಕ್ರೀಟ್ ತುಂಬಿ ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿತ್ತು. ಈ ಪೈಶಾಚಿಕ ಕೃತ್ಯ ಬಯಲಿಗೆ ಬಂದಾಗ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಪರಾಧಿಗಳು ಸಾಕ್ಷ್ಯ ನಾಶಪಡಿಸಿದ ಆರೋಪವೂ ಸಾಬೀತಾಗಿತ್ತು.
ನ್ಯಾಯಾಲಯ ನೀಡಿದ ತೀರ್ಪು ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ ಎಂದು ಅಪರಾಧಿಗಳು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ನಿಯಮಗಳ ಅಡಿಯಲ್ಲಿ ತಮಗೆ ನೀಡಲಾಗಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೆ, ಪ್ರಾಸಿಕ್ಯೂಷನ್ ಯಾವುದೇ ಆಧಾರವಿಲ್ಲದೆ ಕೇವಲ ಸಾಂದರ್ಭಿಕ ಸಾಕ್ಷ್ಯ ಹಾಗೂ ಊಹಾಪೋಹಗಳ ಮೇಲೆಯೇ ತೀರ್ಪು ನೀಡಿದೆ, ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಅಪರಾಧಿಗಳು ವಾದಿಸಿದ್ದಾರೆ. (ಏಜೆನ್ಸೀಸ್)