Doomsday Fish : ಡೂಮ್ಸ್ಡೇ ಮೀನು ಎಂದು ಕರೆಯಲ್ಪಡುವ ಅಪರೂಪದ ಓರ್ಫಿಶ್ ಕಳೇಬರ ಅಮೆರಿಕದ ಕ್ಯಾಲಿಫೋರ್ನಿಯಾದ ಸಮದ್ರ ತೀರ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಈ ಕಾರಣಕ್ಕೆ ಇದನ್ನು ಡೂಮ್ಸ್ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪಿಎಚ್‌ಡಿ ವಿದ್ಯಾರ್ಥಿಯೊಬ್ಬ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಅಲಿಸನ್ ಲಾಫೆರಿಯರ್, ಕ್ಯಾಲಿಫೋರ್ನಿಯಾದ ಎನ್‌ಸಿನಿಟಾಸ್‌ನಲ್ಲಿರುವ ಗ್ರ್ಯಾಂಡ್‌ವ್ಯೂ ಬೀಚ್‌ನಲ್ಲಿ ತನ್ನ ಶ್ವಾನದ ಜೊತೆ ತಿರುಗಾಡುತ್ತಿದ್ದಾಗ ಕಡಲತೀರದಲ್ಲಿ ಕಲ್ಲುಗಳ ರಾಶಿಯ ನಡುವೆ ಬೃಹತ್ ಗಾತ್ರದ ಮೀನು ಕಂಡಿತು. ಅದರ ಬಳಿ ಹೋಗಿ ಪರೀಕ್ಷಿಸಿದಾಗ ಅದು ಆರ್ಫಿಶ್ ಅಥವಾ ಡೂಮ್ಸ್ಡೇ ಮೀನು ಎಂದು ಗೊತ್ತಾಯಿತು ಎಂದು ಲಾಫೆರಿಯರ್ ಹೇಳಿದ್ದಾರೆ.
ಈ ಅಪರೂಪದ ಮೀನು ಅತ್ಯಂತ ಶೀತ ಜೀವಿಯಾಗಿದೆ. ಅದರ ಉದ್ದ ಸುಮಾರು 9 ರಿಂದ 10 ಅಡಿ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ಅದರ ವಿವರಗಳನ್ನು ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಜೀವಿ ಸಾಮಾನ್ಯವಾಗಿ ಸಮುದ್ರದ ತಳದಲ್ಲಿ ಸಂಚರಿಸುತ್ತದೆ. ಈ ಮೀನು ತುಂಬಾ ಅಪರೂಪವಾಗಿದ್ದು, ಹೆಚ್ಚಿನ ಸಂಶೋಧನೆಗಾಗಿ ನೈಋತ್ಯ ಮೀನುಗಾರಿಕೆ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಲಾಗಿದೆ.
ಜಪಾನಿಗರ ನಂಬಿಕೆಯ ಪ್ರಕಾರ, ಡೂಮ್ಸ್ಡೇ ಮೀನು ಕಾಣಿಸಿಕೊಳ್ಳುವುದು ಸಮೀಪಿಸುತ್ತಿರುವ ವಿಪತ್ತಿನ ಮುನ್ಸೂಚನೆಯಾಗಿದೆ. 2011 ರ ಭೂಕಂಪದ ಮೊದಲು ಜಪಾನ್ ಕರಾವಳಿಯಲ್ಲಿ ಓರ್ಫಿಶ್ ಕಂಡುಬಂದ ನಂತರ ಮೂಢನಂಬಿಕೆ ಮತ್ತಷ್ಟು ಹರಡಿತು. ಈ ಮೀನನ್ನು “ಸಮುದ್ರ ದೇವರ ಅರಮನೆಯ ಸಂದೇಶವಾಹಕ” ಎಂದು ಕರೆಯಲಾಗುತ್ತದೆ. ದೇವರ ಮೀನು ಎಂದು ನಂಬಲಾಗಿದ್ದು, ಸುನಾಮಿ ಮತ್ತು ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡುವಾಗ ಈ ಮೀನುಗಳು ಕಾಣಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಕಳೆದ ಆಗಸ್ಟ್ 10ರಂದು ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಡೂಮ್ಸ್ಡೇ ಮೀನಿನ ಕಳೇಬರ ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಲಾಸ್ ಏಂಜಲೀಸ್‌ನಲ್ಲಿ ಭೂಕಂಪನ ವರದಿಯಾಯಿತು. ಆದರೆ, ಭೂಕಂಪನದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಈ ಮೀನು ಕಾಣಿಸಿಕೊಂಡಾಗಲೆಲ್ಲ ಏನಾದರೂ ಒಂದು ವಿಕೋಪ ಸಂಭವಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.
ಈ ಓರ್ಫಿಶ್ ಉದ್ದವಾದ ಈಲ್ ತರಹದ ದೇಹವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್)