ನವದೆಹಲಿ: ಗಡಿ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಬೇಡಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಟ್ವೀಟ್ ಮೂಲಕ ಭಾರತವನ್ನು ಎಚ್ಚರಿಸಿದ್ದಾರೆ.
ಲಡಾಖ್ನ ಪೂರ್ವವಲಯದಲ್ಲಿ ಹಾಲಿ ಇರುವ ಪರಿಸ್ಥಿತಿಯನ್ನು ಭಾರತ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಥವಾ ಗಡಿ ರಕ್ಷಿಸಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಬಾರದು ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಲಡಾಖ್ನ ಪೂರ್ವಭಾಗದ ಗಾಲ್ವಾನ್ ಕಣಿವೆಯ ಗಡಿ ಭಾಗದ ಸಾರ್ವಭೌಮತ್ವ ತಮ್ಮದೆಂದು ಹೇಳಿದ್ದ ಚೀನಿ ಮಿಲಿಟರಿ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಅಲ್ಲಗಳೆದ ಮರುದಿನ ಹುವಾ ಚುನ್ಯಿಂಗ್ ಈ ಟ್ವೀಟ್ ಮಾಡಿದ್ದಾರೆ.
ವಾಸ್ತವ ಗಡಿರೇಖೆಯ ಬಳಿ ಜಮಾವಣೆ ಮಾಡಲಾಗಿದ್ದ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಷಯವಾಗಿ ಹಿರಿಯ ಮಿಲಿಟರಿ ಕಮಾಂಡರ್ಗಳ ನಡುವೆ ಜೂನ್ 6ರಂದು ಏರ್ಪಟ್ಟಿದ್ದ ಒಪ್ಪಂದಕ್ಕೆ ಚೀನಾದ ಈ ನಿಲುವು ವಿರುದ್ಧವಾಗಿದೆ. ಅದರ ಈ ಹೇಳಿಕೆ ನ್ಯಾಯಸಮ್ಮತವಲ್ಲ ಎಂದು ಭಾರತ ಹೇಳಿತ್ತು.
ಗಾಲ್ವಾನ್ ಕಣಿವಯೆ ಬಳಿ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವೆ ಹೊಯ್ಕೈ ಏರ್ಪಟ್ಟಿದ್ದು, ಭಾರತದ ಒಬ್ಬ ಕರ್ನಲ್ ದರ್ಜೆಯ ಅಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇವರಲ್ಲಿ 18 ಯೋಧರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗುತ್ತಿದೆ.
ಈ ಘಟನೆಯ ನಂತರದಲ್ಲಿ ಮ್ಯಾಂಡರಿನ್ ಭಾಷೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮ ಕಮಾಂಡ್, ಗಾಲ್ವಾನ್ ನದಿ ಕಣಿವೆಯ ಸಾರ್ವಭೌಮತ್ವ ಸದಾ ನಮ್ಮದಾಗಿದೆ ಎಂದು ಹೇಳಿಕೊಂಡಿತ್ತು.
ಆದರೆ, ಗಡಿ ಸಾರ್ವಭೌಮತ್ವ ವಿಷಯದಲ್ಲಿ ಅತಿರೇಕದ ಮತ್ತು ಒಪ್ಪಲಾಗದ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಶ್ರೀವಾಸ್ತವ ಹೇಳಿದ್ದರು.