ನ್ಯೂಸ್

ಮಾಹಿತಿ ಹಕ್ಕು ಅರ್ಜಿಗಳಿಗೆ ಉಡಾಫೆ ಬೇಡ ಉತ್ತರ ನೀಡಿ; ಜನಕೆಲಸವೇ 'ಆರ್‌ಟಿಐ' ಕಾಯ್ದೆಯ ಉದ್ದೇಶ; ರುದ್ರಣ್ಣ ಹರ್ತಿಕೋಟಿ | RTI

ರಾಯಚೂರು; ಆರ್‌ಟಿಐ ಕಾಯ್ದೆ ಉದ್ದೇಶವೇ ನಾಗರೀಕರನ್ನು ಸಬಲೀಕರಣ ಮಾಡುವುದಾಗಿದೆ. ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವುದು ಹೊಣೆಗಾರಿಕೆಗೆ ಉತ್ತೇಜನ ನೀಡುವುದಾಗಿದೆ. ಭ್ರಷ್ಟಾಚಾರಕ್ಕೆ ತಡೆ ಹಾಕುವುದು, ಪ್ರಜಾಪ್ರಭುತ್ವದ ನಿಜವಾದ ಅರ್ಥದಲ್ಲಿ ಜನರ ಕೆಲಸ ಮಾಡುವುದು ಆರ್‌ಟಿನ ಕಾಯ್ದೆಯ ಉದ್ದೇಶ ಎಂದು ಪೀಠ ಸಂಖ್ಯೆ 04ರ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟಿ ಅವರು ಹೇಳಿದರು.

ಇಂದು (ಆ.16) ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ಉಡಾಫೆ ಮಾಡದೇ ಶೀಘ್ರ ಉತ್ತರ ನೀಡಿ ಅರ್ಜಿಗಳನ್ನು ವಿಲೇ ಮಾಡಬೇಕು ಎಂದು ರುದ್ರಣ್ಣ ಹರ್ತಿಕೋಟಿ ಹಾಗೂ ಪೀಠ ಸಂಖ್ಯೆ 05ರ ರಾಜಶೇಖರ ಎಸ್ ಅವರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆಯೋಗವು ಮಾಹಿತಿ ಹಕ್ಕು ಕಾಯಿದೆಯನ್ವಯ ನಿಯಮದಂತೆ 30 ದಿನಗಳಲ್ಲಿ ಮಾಹಿತಿ ನೀಡಿದಿದ್ದರೆ ಉಚಿತವಾಗಿ ನೀಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಆದ್ದರಿಂದ ಲಭ್ಯವಿರುವ ಮಾಹಿತಿ ಕೊಡಬೇಕು. ಯಾವುದನ್ನು ಸಹ ಕ್ರೋಢಿಕರಿಸಿ ನೀಡಬೇಕಾಗಿಲ್ಲ ಎಂದು ರುದ್ರಣ್ಣ ಹರ್ತಿಕೋಟಿ ತಿಳಿಸಿದರು. ಕೆಲವು ಪ್ರಕರಣಗಳಲ್ಲಿ ಹಣ ಹೆಚ್ಚಿಗೆ ಕಟ್ಟಿಸಿಕೊಂಡು ಕಡಿಮೆ ಪುಟ ಮಾಹಿತಿ ನೀಡಲಾಗುತ್ತದೆ. ಇದು ತಪ್ಪಾಗುತ್ತದೆ. ನಕ್ಷೆ ಕೇಳಿದಾಗ ಕೇವಲ ಔಟ್ ಲೈನ್ ಮಾತ್ರ ನೀಡಬೇಕು. ಮೂರನೇ ವ್ಯಕ್ತಿಯ ಮಾಹಿತಿ ಕೇಳಿದ್ದರೆ ಐದು ದಿನಗಳಲ್ಲಿ ಆ ವ್ಯಕ್ತಿಗೆ ನೊಟೀಸ್ ನೀಡಿ ಮಾಹಿತಿ ನೀಡಬಹುದೇ ಅಥವಾ ಬೇಡವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ನೇಮಕವಾಗಿರುತ್ತಾರೆ. ಆ ಮಾಹಿತಿ ಅಧಿಕಾರಿಯು ಮೊದಲು ಯಾವುದು ಮಾಹಿತಿ, ಯಾವುದು ಮಾಹಿತಿಯಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಜಿಗಳಿಗೆ ನಿಗದಿತ ಕಾಲಾವಧಿಯಲ್ಲಿ ಮಾಹಿತಿಯನ್ನು ನೀಡಿದರೆ ಅದರಿಂದ ಬ್ಲಾಕ್ ಮೇಲಗರ್‌ಗಳು ಹುಟ್ಟಿಕೊಳ್ಳುವುದಿಲ್ಲ. ನಿಮ್ಮಲ್ಲಿ ಲಭ್ಯವಿರುವ ಮಾಹಿತಿಯನ್ನು ಮೊದಲು ನೀಡಿ, ಯಾವುದೇ ಅರ್ಜಿಯ ಬಗ್ಗೆ ಉದಾಸೀನ ಮಾಡಲು ಹೋಗಬೇಡಿ ಎಂದು ತಿಳಿಸಿದರು. ರಾಜ್ಯ ಮಾಹಿತಿ ಆಯೋಗವು ಗಮನಿಸಿದಂತೆ ಆನೇಕ ಪಿಐಒಗಳು ನಿಯಮಗಳನ್ನು ಸರಿಯಾಗಿ ಓದುವುದಿಲ್ಲ. ಹೀಗೆ ಆಗಬಾರದು ಎಂದು ಆಯುಕ್ತರಾದ ರುದ್ರಣ್ಣ ಹರ್ತಿಕೋಟಿ ಅವರು ಎಚ್ಚರಿಕೆ ನೀಡಿದರು.

ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದಿದ್ದ ಪಕ್ಷದಲ್ಲಿ ಮಾಹಿತಿ ಒದಗಿಸದ ಅಧಿಕಾರಿಗಳ ಮೇಲೆ ದಂಡ ವಿಧಿಸಲು ಕಾಯಿದೆಯಲ್ಲಿಯೇ ಅವಕಾಶವಿದೆ. ಒಂದು ದಿನಕ್ಕೆ 250 ರೂ. ದಂತೆ 100 ದಿನಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಮಾಹಿತಿ ಒದಗಿಸಲು ವಿಳಂಬ ಮಾಡಿರುವುದು ಗೊತ್ತಾದಲ್ಲಿ ಗರಿಷ್ಟ ಕನಿಷ್ಟ 25 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಅರ್ಜಿದಾರರಿಗೆ ನಷ್ಟವಾಗಿದ್ದಲ್ಲಿ ಪರಿಹಾರ ಕೂಡ ಕೊಡಿಸಬಹುದಾಗಿದೆ. ಅರ್ಜಿದಾರರಿಗೆ 1 ಲಕ್ಷ ರೂ.ವರೆಗೆ ಪರಿಹಾರ ಕೊಡಿಸಿದ ಉದಾಹರಣೆಗಳಿವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿತು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಸೂಕ್ತ ಹಿಂಬರಹ ನೀಡಲು ಸೂಚನೆ:

ಪೀಠ ಸಂಖ್ಯೆ 05ರ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ ಎಸ್ ಅವರು ಮಾತನಾಡಿ, ಮಾಹಿತಿ ಹಕ್ಕು ಅರ್ಜಿ ಸ್ವೀಕೃತಿಯಾದ ಕೂಡಲೇ ಆ ಬಗ್ಗೆ ನಿರ್ಲಕ್ಷ್ಯ ಮಾಡದೇ ವಿಲೇವಾರಿ ಮಾಡಲು ನಿಯಮಾನುಸಾರ ಕ್ರಮ ವಹಿಸಬೇಕು. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು ಎಂದು ತಿಳಿಸಿದರು. ಮಾಹಿತಿ ಹಕ್ಕು ಅರ್ಜಿ ಬಂದ ನಿಗದಿತ ಅವಧಿಯಲ್ಲಿ ಉತ್ತರ ನೀಡಬೇಕು. ಅದರ ಪ್ರತಿಯನ್ನು ಆಯೋಗಕ್ಕು ಸಹ ಕಳುಹಿಸಬೇಕು. ಆನ್ ಲೈನದಲ್ಲಿ ಬಂದಾಗ ಮಾಹಿತಿ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ ಕೊಟ್ಟಿರುವ ಮಾಹಿತಿಯನ್ನು ನಮಗೆ ಕಳುಹಿಸದ ಕಾರಣ ಆದೇಶ ಮಾಡಲು ಸಮಸ್ಯೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿಯಬೇಕು ಎಂದರು.

ಮಾಹಿತಿ ಹಕ್ಕು ಕಾಯಿದೆಯಡಿ ಬರುವ ಅರ್ಜಿಗಳ ಬಗ್ಗೆ ಕೆಲವು ಅನುಮಾನಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಕೆಲವರು ಹೇಳುತ್ತಾರೆ. ಆದರೆ ದೃಢೀಕರಣ ಪ್ರತಿ ಬೇಕು ಎಂಬುದನ್ನು ಅರಿಯಬೇಕು. ಮಾಹಿತಿ ಹಕ್ಕು ಅಧಿನಿಯಮದಡಿ ನೀಡಲಾಗಿದೆ ಎಂಬ ಮುದ್ರೆ ಹಾಕಿ ನೀಡಬೇಕು. ಕೆಲವರು ಸಿಡಿ ರೂಪದಲ್ಲಿ ನೀಡಿ ಎಂದು ಕೇಳಿರುತ್ತಾರೆ. ಎಲೆಕ್ಟ್ರಾನಿಕ್ಸ್ ರೂಪದಲ್ಲಿರುವುದನ್ನು ಮಾತ್ರ ಸಿ.ಡಿ.ಯಲ್ಲಿ ನೀಡಬಹುದು. ಎಲ್ಲ ಪುಟಗಳನ್ನು ಸ್ಕ್ಯಾನ್ ಮಾಡಲು ವೆಚ್ಚ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಬೇಕು ಎಂದು ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.