ಬೆಂಗಳೂರು: ಇಂದು ನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯೇ ಹೆಚ್ಚು. ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ ಆದರೂ ಪೆಟ್ರೋಲ್ ಗಾಡಿಗಳ ಚಾಲನೆಯೇ ಅಧಿಕ ಸಂಖ್ಯೆಯಲ್ಲಿದೆ. ಇಂತಹ ವಾಹನಗಳ ಸಂಚಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಇಂಧನ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಅಳಲು ಕೂಡ ಮುಗಿಲು ಮುಟ್ಟಿದೆ. ಸದ್ಯ ಬೆಲೆ ಇಳಿಕೆ ದೂರದ ಮಾತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol) ಬೈಕ್ ಮತ್ತು ಕಾರುಗಳನ್ನು ಚಲಾಯಿಸುವ ಬಹುತೇಕರು, ತಮ್ಮ ವಾಹನದ ಟ್ಯಾಂಕ್ ಖಾಲಿ ಆಗುವವರೆಗೂ ಪೆಟ್ರೋಲ್ ಹಾಕಿಸುವ ಆಲೋಚನೆ ಮಾಡುವುದಿಲ್ಲ. ಇದೇ ರೀತಿ ಒಂದಷ್ಟು ತಪ್ಪುಗಳನ್ನು ಮಾಡುವ ಸವಾರರು ಈ ಮಾಹಿತಿಯನ್ನು ತಪ್ಪದೇ ತಿಳಿಯುವುದು ಒಳಿತು.
ಇದನ್ನೂ ಓದಿ: ಎಲ್ಲಾ ಪಂದ್ಯಗಳಲ್ಲಿಯೂ ‘ಕ್ಯಾಪ್ಟನ್ ಕೂಲ್ ಕಾಣಿಸಲ್ಲ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ರಿಕ್ಕಿ ಪಾಂಟಿಂಗ್ | IPL 2025
ಪೆಟ್ರೋಲ್ ಇಲ್ಲ ಎಂದರೆ ನಮ್ಮ ವಾಹನಗಳು ಒಂದು ಹೆಜ್ಜೆಯೂ ಮುಂದೆ ಹೋಗಲ್ಲ. ಇದು ಗಾಡಿ ಓಡಿಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಾವು ಎಷ್ಟು ಜವಾಬ್ದಾರಿ ವಹಿಸಬೇಕು? ಏನು ತಪ್ಪು ಮಾಡಿದರೆ, ವಾಹನದ ಇಂಜಿನ್ಗೆ ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು? ಇದರಿಂದ ವಾಹನದ ಬಾಳಿಕೆಗೆ ಯಾವ ರೀತಿಯ ಹೊಡೆತ ಎದುರಾಗಬಹುದು ಎಂಬ ಸೂಕ್ಷ್ಮತೆ ವಾಹನ ಬಳಕೆದಾರರಿಗೆ ತಿಳಿದರಲೇ ಬೇಕಾದ ವಿಷಯ. ಆದರೆ, ಇಂತಹ ವಿಚಾರಗಳನ್ನೇ ಮರೆಯುವ ವಾಹನ ಮಾಲೀಕರು, ಪದೇ ಪದೇ ಈ ತಪ್ಪುಗಳನ್ನು ಮಾಡಿ, ತಮ್ಮ ದುಬಾರಿ ವಾಹನಗಳ ಆಯಾಸ್ಸನ್ನು ತಾವೇ ತಮ್ಮ ಕೈಯಾರೆ ಕಡಿತಗೊಳಿಸುತ್ತಾರೆ.
ಈ ತಪ್ಪುಗಳು ಖಂಡಿತವಾಗಿಯೂ ನಿಮ್ಮ ಕಾರು ಮತ್ತು ಬೈಕ್ ಇಂಜಿನ್ ಮೇಲೆ ಪರಿಣಾಮ ಬೀರುತ್ತವೆ. ಎಷ್ಟೋ ಜನ ಪೆಟ್ರೋಲ್ ವಿಚಾರದಲ್ಲಿ ತಮಗೆ ಅರಿವಿಲ್ಲದೇ ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆಯೇ? ನೀವು ಪೆಟ್ರೋಲ್ ಬಂಕ್‌ಗೆ ಹೋಗಿದ್ದೀರಾ? ಪೆಟ್ರೋಲ್ ಹಾಕಿಸುವ ಸೂಕ್ತ ಕ್ರಮ ಹೇಗೆ? ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಅದರ ಕೆಳಭಾಗಕ್ಕೆ ಹೋಗೋಣ.
ಇಂಜಿನ್ ವಾಹನದ ಹೃದಯವಿದ್ದಂತೆ. ಆದ್ದರಿಂದ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ಪೆಟ್ರೋಲ್ ಹಾಕಿಸುವ ಮನಸ್ಸು ಮಾಡುವುದೇ ಇಲ್ಲ. ಆದರೆ ಪೆಟ್ರೋಲ್ ಟ್ಯಾಂಕ್ ಖಾಲಿ ಇಡುವುದು ತುಂಬಾ ಅಪಾಯಕಾರಿ. ಕಾರಣ, ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು. ಪೆಟ್ರೋಲ್ ಖಾಲಿಯಾದ ನಂತರ, ಎಲ್ಲಾ ತ್ಯಾಜ್ಯ ವಸ್ತುಗಳು ವಾಹನಕ್ಕೆ ಪೆಟ್ರೋಲ್ ಪೂರೈಸುವ ಪಂಪ್ ಮೂಲಕ ಇಂಜಿನ್ ಪಾಲಾಗುತ್ತವೆ. ಆ ತ್ಯಾಜ್ಯವು ಫಿಲ್ಟರ್ ಅನ್ನು ಮುಚ್ಚುತ್ತದೆ. ಇದರಿಂದ ವಾಹನದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಕಾರಣದಿಂದಾಗಿ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ.
ಒಮ್ಮೊಮ್ಮೆ ಇದರಿಂದ ಅಪಘಾತ ಸಂಭವವು ಅಧಿಕ. ಹಾಗಾಗಿ ಖಂಡಿತ ಈ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಿ. ಯಾವತ್ತೂ ಈ ರೀತಿ ಪೆಟ್ರೋಲ್ ಖಾಲಿಯಾಗುವವರೆಗೂ ಕಾದು, ತುಂಬಿಸಬೇಡಿ. ಇದು ಅತ್ಯಂತ ಮುಖ್ಯವಾದ ಸಂಗತಿ. ಅದೇ ಇಂಧನ ಗುಣಮಟ್ಟ. ಕೆಲವರು ಪೆಟ್ರೋಲ್ ಗುಣಮಟ್ಟದಿಂದ ದೂರ ಉಳಿದಿರುವ ಬಂಕ್ಗಳಿಂದ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಅಂತಹ ಕಳಪೆ ಗುಣಮಟ್ಟದ ಪೆಟ್ರೋಲ್ ವಾಹನಕ್ಕೆ ಒಳ್ಳೆಯದಲ್ಲ. ಪೆಟ್ರೋಲ್ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ ಅದು ಇಂಜಿನ್‌ನಲ್ಲಿ ಸಂಗ್ರಹವಾಗುತ್ತದೆ. ಆಗ ವಾಹನದ ಕಾರ್ಯಕ್ಷಮತೆ ಉತ್ತಮವಾಗಿರುವುದಿಲ್ಲ. ಹಾಗಾಗಿ ಯಾವುದೇ ಸಮಯದಲ್ಲಿ ವಾಹನಕ್ಕೆ ಗುಣಮಟ್ಟದ ಪೆಟ್ರೋಲ್ ಬಳಸುವುದು ಒಳಿತು.
ಪೆಟ್ರೋಲ್ ಖಾಲಿಯಾದ ನಂತರ, ಇಂಧನ ಟ್ಯಾಂಕ್ನ ಕ್ಯಾಪ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ? ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ಗಾಳಿ ಮತ್ತು ತೇವಾಂಶವು ಟ್ಯಾಂಕಿನೊಳಗೆ ಹೋಗುತ್ತದೆ. ಈ ಕಾರಣದಿಂದಾಗಿ, ನೀರಿನ ಆವಿಯು ಪೆಟ್ರೋಲ್ನೊಂದಿಗೆ ಮಿಕ್ಸ್ ಆಗಿ ಪೆಟ್ರೋಲ್ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಇದು ವಾಹನದ ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ಪೆಟ್ರೋಲ್ ಟ್ಯಾಂಕ್ ಸದಾ ತುಂಬಿರಲಿ ಎಂದು ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸುತ್ತಲೇ ಇರುತ್ತಾರೆ. ಇದು ಅತಿಯಾದ ಭರ್ತಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಇಂಧನ ಪೈಪ್ನಲ್ಲಿ ಸೋರಿಕೆಯಾಗುವ ಅಪಾಯವಿರಲಿದೆ. ಇದರಿಂದ ಇಂಜಿನ್ ಹಾಳಾಗುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.
ಇನ್ನು ಕೆಲವರು ಪೆಟ್ರೋಲ್ ತುಂಬಿಸುವಾಗ ವಾಹನದ ಇಂಜಿನ್ ಅನ್ನು ಆನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ಮೈಲೇಜ್ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಬೆಂಕಿ ಅವಘಡ ಸಂಭವಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಎಂದಿಗೂ ಇಂಜಿನ್ ಅನ್ನು ಆನ್ನಲ್ಲಿಟ್ಟು, ಪೆಟ್ರೋಲ್ ಹಾಕಿಸಬೇಡಿ. ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಡಿ,(ಏಜೆನ್ಸೀಸ್).